ಗೋವಾ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ: 25 ಮಂದಿ ಸಾವು

ಆರ್ಪೋರಾ (ಉತ್ತರ ಗೋವಾ): ಉತ್ತರ ಗೋವಾದ ಆರ್ಪೋರಾದಲ್ಲಿರುವ ನೈಟ್‌ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಿಂದಾಗಿ ಕನಿಷ್ಠ 25 ಜನರು ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿರುವ ದುರ್ಘಟನೆ ಸಂಭವಿಸಿದೆ. ಮೃತರಾದವರಲ್ಲಿ ಬಹುತೇಕರು ಕ್ಲಬ್‌ನ ಸಿಬ್ಬಂದಿ ಎಂದು ತಿಳಿದುಬಂದಿದೆ.
ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ನೈಟ್‌ಕ್ಲಬ್‌ನ ಅಡುಗೆಮನೆಯ (Kitchen) ಸಮೀಪದಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಘಟನೆಯಲ್ಲಿ ಗಾಯಗೊಂಡ ಏಳು ಜನರಲ್ಲಿ ಒಬ್ಬರು ಶೇ. 60ಕ್ಕಿಂತ ಹೆಚ್ಚು ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.
ಅಗ್ನಿ ದುರಂತದಲ್ಲಿ ಸಾವಿಗೀಡಾದವರಲ್ಲಿ ಕೇವಲ ಇಬ್ಬರು ಮಾತ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಉಳಿದವರೆಲ್ಲರೂ ದಟ್ಟವಾದ ಹೊಗೆಯ ಕಾರಣದಿಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಅಗ್ನಿಶಾಮಕ ದಳದವರು ಸ್ಥಳಕ್ಕೆ ತಕ್ಷಣ ಧಾವಿಸಿ ಸುಮಾರು ಎರಡು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಿಯಂತ್ರಿಸಿದರು. ಆದರೆ, ಕ್ಲಬ್‌ನ ಒಳಾಂಗಣದಲ್ಲಿ ಬೆಂಕಿ ವೇಗವಾಗಿ ಹರಡಿದ್ದರಿಂದ ಸಿಬ್ಬಂದಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಅಡುಗೆಮನೆಯಲ್ಲಿ ವಾಡಿಕೆಯ ಶುಚೀಕರಣದ ಸಮಯದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು, ಅದು ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣ ವಿಧಿವಿಜ್ಞಾನ ವಿಶ್ಲೇಷಣೆಯಿಂದ ತಿಳಿದುಬರಬೇಕಿದೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅವಶೇಷಗಳ ನಡುವೆ ಯಾರಾದರೂ ಸಿಲುಕಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ರಕ್ಷಣಾ ತಂಡಗಳು ಹುಡುಕಾಟವನ್ನು ಮುಂದುವರೆಸಿವೆ.
“ಉತ್ತರ ಗೋವಾದ ಆರ್ಪೋರಾದಲ್ಲಿರುವ ಬರ್ಚ್ ಬೈ ರೋಮಿಯೋ ಲೇನ್ (Birch by Romeo Lane) ನೈಟ್‌ಕ್ಲಬ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ 25 ಸಾವುಗಳು ಸಂಭವಿಸಿದ್ದು, ಅವರಲ್ಲಿ ನಾಲ್ವರು ಪ್ರವಾಸಿಗರು, 14 ಮಂದಿ ಕ್ಲಬ್ ಸಿಬ್ಬಂದಿ ಎಂದು ದೃಢಪಟ್ಟಿದೆ ಮತ್ತು ಏಳು ಜನರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಆರು ಜನ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿ ಅನಾಹುತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ತನಿಖೆ ಮುಂದುವರೆದಿದೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಗೋವಾ ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ಸಿಎಂ ಸಾವಂತ್‌ ಹೇಳಿಕೆ
ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರು ಮಾತನಾಡಿ, “ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಕೆಲಸಗಾರರು ಮತ್ತು ಮೂವರು ಮಹಿಳೆಯರೂ ಸೇರಿದ್ದಾರೆ. ಮೃತಪಟ್ಟವರಲ್ಲಿ ‘ಮೂವರು ಅಥವಾ ನಾಲ್ವರು ಪ್ರವಾಸಿಗರು’ ಸಹ ಇದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರ್ಪೋರಾ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಇದು “ತೀವ್ರ ದುಃಖಕರ” ದುರಂತ ಎಂದು ಬಣ್ಣಿಸಿದ್ದಾರೆ. ಅವರು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರೊಂದಿಗೆ ಮಾತನಾಡಿದ್ದು, ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ಯಿಂದ ಮೃತರ ಕುಟುಂಬಗಳಿಗೆ ₹ 2 ಲಕ್ಷ ಮತ್ತು ಗಾಯಗೊಂಡವರಿಗೆ ₹ 50,000 ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ.
ಕ್ಲಬ್‌ಗೆ ಬೀಗಮುದ್ರೆ, ಮಾಲೀಕರ ವಿಚಾರಣೆ
ತನಿಖೆಯ ಭಾಗವಾಗಿ ಅಧಿಕಾರಿಗಳು ನೈಟ್‌ಕ್ಲಬ್‌ಗೆ ಬೀಗಮುದ್ರೆ ಹಾಕಿದ್ದಾರೆ. ಸುರಕ್ಷತಾ ಕ್ರಮಗಳು, ತುರ್ತು ನಿರ್ಗಮನಗಳು ಮತ್ತು ಅಗ್ನಿ ಸುರಕ್ಷತಾ ನಿಯಮಗಳನ್ನು ಕ್ಲಬ್ ಅನುಸರಿಸಿದೆಯೇ ಎಂಬ ಬಗ್ಗೆ ಮಾಲೀಕರು ಮತ್ತು ವ್ಯವಸ್ಥಾಪಕರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಇತರೆ ಕ್ಲಬ್‌ಗಳಿಗೂ ಸುರಕ್ಷತಾ ಪರಿಶೀಲನೆ ಕಡ್ಡಾಯ
ಈ ಭೀಕರ ದುರಂತದ ನಂತರ, ಆರ್ಪೋರಾ ಪ್ರದೇಶದ ಎಲ್ಲಾ ಕ್ಲಬ್‌ಗಳಲ್ಲಿ ಅಗ್ನಿ ಸುರಕ್ಷತಾ ಪರಿಶೀಲನೆಯನ್ನು (Fire Safety Audit) ಕಡ್ಡಾಯಗೊಳಿಸಲಾಗುವುದು ಎಂದು ಸ್ಥಳೀಯ ಶಾಸಕ ಮೈಕೆಲ್ ಲೋಬೋ ಹೇಳಿದ್ದಾರೆ. ಕ್ಲಬ್‌ಗಳು ಮಾನ್ಯ ಅಗ್ನಿ ಸುರಕ್ಷತಾ ಅನುಮತಿಗಳನ್ನು ಪ್ರಸ್ತುತಪಡಿಸಲು ವಿಫಲವಾದರೆ, ಅವುಗಳ ಪರವಾನಗಿಗಳನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement