ನಾಲ್ವರು ವಿದೇಶಿಗರು, 111 ಶೆಲ್ ಕಂಪನಿ ಒಳಗೊಂಡ 1,000 ಕೋಟಿ ರೂ. ಸೈಬರ್ ವಂಚನೆ ಜಾಲ ಭೇದಿಸಿದ ಸಿಬಿಐ…!

ನವದೆಹಲಿ: ದೇಶಾದ್ಯಂತ ಸಾವಿರಾರು ಜನರಿಗೆ ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಸೈಬರ್ ವಂಚನೆ ಜಾಲವನ್ನು ಕೇಂದ್ರೀಯ ತನಿಖಾ ದಳ (CBI) ಭೇದಿಸಿದ್ದು, ಈ ಸಂಬಂಧ 17 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಇದರಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಮತ್ತು 58 ಶೆಲ್‌ ಕಂಪನಿಗಳು ಶಾಮೀಲಾಗಿವೆ.
ಸಿಬಿಐ ತನಿಖೆಯ ಪ್ರಕಾರ, ಈ ಜಾಲವು ದೇಶದ ಜನರನ್ನು ವಂಚಿಸಲು ಸುಳ್ಳು ಸಾಲದ ಅರ್ಜಿಗಳು, ನಕಲಿ ಹೂಡಿಕೆ ಯೋಜನೆಗಳು, ಅರೆಕಾಲಿಕ ಕೆಲಸದ ಸುಳ್ಳು ಆಫರ್‌ಗಳು ಮತ್ತು ಮೋಸದ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿತ್ತು. ಇವರು ಬಹು-ಹಂತದ ಮಾರ್ಕೆಟಿಂಗ್ (MLM) ಮಾದರಿಗಳ ಮೂಲಕ ಜನರಿಗೆ ಮೋಸ ಮಾಡುತ್ತಿದ್ದರು.
ಒಟ್ಟು 17 ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಪೈಕಿ ಮೂವರು ಪ್ರಮುಖ ಆರೋಪಿಗಳನ್ನು ಕಳೆದ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು.
ನೂರಾರು ಬ್ಯಾಂಕ್ ಖಾತೆಗಳ ಮೂಲಕ 1,000 ಕೋಟಿ ಎಊ.ಗಳಿಗೂ ಅಧಿಕ ಹಣವನ್ನು ವರ್ಗಾಯಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಒಂದು ಖಾತೆಗೆ ಅಲ್ಪಾವಧಿಯಲ್ಲಿಯೇ 152 ಕೋಟಿ ರೂಗಳಿಗೂ ಹೆಚ್ಚು ಹಣ ಬಂದಿದೆ. ವಂಚಕರು ನಕಲಿ ನಿರ್ದೇಶಕರು, ನಕಲಿ ದಾಖಲೆಗಳು ಮತ್ತು ಸುಳ್ಳು ವಿಳಾಸಗಳನ್ನು ಬಳಸಿ 111 ಶೆಲ್ (ಕಾಗದದ ಮೇಲೆ ಮಾತ್ರ ಇರುವ) ಕಂಪನಿಗಳನ್ನು ರಚಿಸಿದ್ದರು. ಈ ಮೂಲಕವೇ ಬ್ಯಾಂಕ್ ಖಾತೆಗಳನ್ನು ಮತ್ತು ಪಾವತಿ ಗೇಟ್‌ವೇಗಳನ್ನು ತೆರೆದಿದ್ದರು.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ತಂತ್ರಜ್ಞಾನ ಆಧರಿತ ಮೋಸದ ಜಾಲ
ವಂಚಕರು ತಮ್ಮ ಗುರುತನ್ನು ಮರೆಮಾಚಲು ಮತ್ತು ಕಾನೂನು ಜಾರಿ ಸಂಸ್ಥೆಗಳ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದರು.
ಗೂಗಲ್ ಜಾಹೀರಾತುಗಳು, ಬೃಹತ್ ಎಸ್‌ಎಂಎಸ್ (SMS) ಅಭಿಯಾನಗಳು, ಸಿಮ್-ಬಾಕ್ಸ್ ಮೆಸೇಜಿಂಗ್ ಸಿಸ್ಟಮ್‌ಗಳು, ಕ್ಲೌಡ್ ಸರ್ವರ್‌ಗಳು, ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಮತ್ತು ಡಜನ್‌ಗಟ್ಟಲೆ ಮ್ಯೂಲ್ ಬ್ಯಾಂಕ್ ಖಾತೆಗಳನ್ನು (ಮತ್ತೊಬ್ಬರ ಹೆಸರಿನಲ್ಲಿರುವ ಖಾತೆಗಳು) ವಂಚನೆಗೆ ಬಳಸಲಾಗಿದೆ.
ತನಿಖೆಯು ವಿದೇಶಿ ನಿರ್ವಾಹಕರು 2020ರಿಂದಲೇ ಭಾರತದಲ್ಲಿ ಶೆಲ್ ಕಂಪನಿಗಳನ್ನು ನೋಂದಾಯಿಸಲು ಸಂಚು ರೂಪಿಸಿದ್ದರು. ಆಗಸ್ಟ್ 2025 ರವರೆಗೂ ಒಬ್ಬ ಭಾರತೀಯ ಆರೋಪಿಗೆ ಸಂಬಂಧಿಸಿದ ಯುಪಿಐ ಐಡಿ (UPI ID) ವಿದೇಶಿ ಸ್ಥಳದಿಂದ ಸಕ್ರಿಯವಾಗಿತ್ತು ಎಂಬುದು ಪತ್ತೆಯಾಗಿದೆ.

ಸಿಬಿಐನ ‘ಆಪರೇಷನ್ ಚಕ್ರ-ವಿ’ ಅಡಿಯಲ್ಲಿ ಕ್ರಮ
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ನೀಡಿದ ಮಾಹಿತಿಯ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿದೆ. ಆರಂಭದಲ್ಲಿ ಪ್ರತ್ಯೇಕ ಪ್ರಕರಣಗಳಂತೆ ಕಂಡುಬಂದರೂ, ಆಳವಾದ ವಿಶ್ಲೇಷಣೆಯು ಇದೇ ರೀತಿಯ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಹಣದ ಹರಿವಿನ ಮಾದರಿಗಳನ್ನು ಬಳಸುವ ದೊಡ್ಡ ಜಾಲವನ್ನು ಬಯಲು ಮಾಡಿದೆ.
ಸಂಘಟಿತ ಮತ್ತು ಅಂತಾರಾಷ್ಟ್ರೀಯ ಸೈಬರ್ ಆರ್ಥಿಕ ಅಪರಾಧಗಳನ್ನು ನಿಗ್ರಹಿಸುವ ಸಿಬಿಐನ ‘ಆಪರೇಷನ್ ಚಕ್ರ-ವಿ’ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸಿಬಿಐಯು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಜಾರ್ಖಂಡ ಮತ್ತು ಹರಿಯಾಣ ಸೇರಿದಂತೆ ಒಟ್ಟು 27 ಸ್ಥಳಗಳಲ್ಲಿ ಶೋಧ ನಡೆಸಿ ಡಿಜಿಟಲ್ ಸಾಧನಗಳು, ದಾಖಲೆಗಳು ಮತ್ತು ಆರ್ಥಿಕ ವರದಿಗಳನ್ನು ವಶಪಡಿಸಿಕೊಂಡಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement