ವೀಡಿಯೊ..| ಬಾಂಡಿ ಬೀಚ್‌ನಲ್ಲಿ ಗುಂಡಿನ ದಾಳಿ :12 ಸಾವು, ಧೈರ್ಯ ತೋರಿ ಉಗ್ರನ ರೈಫಲ್ ಕಸಿದು ಆತನಿಗೇ ಗುರಿಯಿಟ್ಟ ವ್ಯಕ್ತಿ !

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಭಾನುವಾರ( ಡಿಸೆಂಬರ್‌ 14) ಸಂಜೆ ಸುಮಾರು 6:30ರ (ಸ್ಥಳೀಯ ಕಾಲಮಾನ) ಸುಮಾರಿಗೆ ನಡೆದ ಭೀಕರ ಗುಂಡಿನ ದಾಳಿಯಿಂದಾಗಿ 12 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಬಂದೂಕುಧಾರಿಗಳು ಮನಸ್ಸೋ ಇಚ್ಛೆ ಗುಂಡು ಹಾರಿಸಿದ್ದು, ಸತ್ತವರಲ್ಲಿ ಓರ್ವ ಬಂದೂಕುಧಾರಿ ಸೇರಿದ್ದಾರೆ ಎಂದು ಹೇಳಲಾಗಿದೆ.
ಇನ್ನೊಬ್ಬ ಆರೋಪಿಯ ಗಾಯಗೊಂಡಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ (NSW) ಪೊಲೀಸರು ತಿಳಿಸಿದ್ದಾರೆ. ಓರ್ವ ದಾಳಿಕೋರನ ಕಾರಿನಿಂದ ಸ್ಫೋಟಕ ಸಾಧನಗಳನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಶಸ್ತ್ರಸಜ್ಜಿತ ವಾಹನದೊಳಗೆ ಸಾಧನಗಳನ್ನು ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲಾಗಿದೆ.
ಅಧಿಕಾರಿಗಳು ಈಗ ಸಕ್ರಿಯ ಬೆದರಿಕೆ ಇಲ್ಲ ಎಂದು ಹೇಳುತ್ತಾರೆ ಆದರೆ ಜನರು ಆ ಪ್ರದೇಶದಿಂದ ದೂರವಿರುವಂತೆ ಮನವಿ ಮಾಡಿದ್ದಾರೆ.ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಇಪ್ಪತ್ತೊಂಬತ್ತು ಜನರು ಗಾಯಗೊಂಡಿದ್ದಾರೆ ಮತ್ತು ಅವರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.

ಹನುಕ್ಕಾ ಆಚರಣೆಯಲ್ಲಿ ಗುಂಡಿನ ದಾಳಿ ನಡೆದಿದೆ. ಸಿಡ್ನಿಯ ಯಹೂದಿ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ (NSW) ಪ್ರೀಮಿಯರ್ ಕ್ರಿಸ್ ಮಿನ್ಸ್ ಹೇಳಿದ್ದಾರೆ. ಇದನ್ನು ಭಯೋತ್ಪಾದಕ ಘಟನೆ ಎಂದು ಘೋಷಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ (NSW) ಪೊಲೀಸರು ಸಹ ದೃಢಪಡಿಸಿದ್ದಾರೆ.
ಪ್ರಧಾನಿ ಆಂಥೋನಿ ಅಲ್ಬನೀಸ್ ರಾಷ್ಟ್ರೀಯ ಭದ್ರತಾ ಸಭೆಯನ್ನು ಕರೆದು ಗುಂಡಿನ ದಾಳಿಯನ್ನು “ವಿನಾಶಕಾರಿ ಭಯೋತ್ಪಾದಕ ಘಟನೆ” ಎಂದು ಬಣ್ಣಿಸಿದ್ದಾರೆ.
ಅಸಾಮಾನ್ಯ ಧೈರ್ಯ ತೋರಿದ ಸಾರ್ವಜನಿಕ
ಈ ಭೀಕರ ಗಲಭೆಯ ಮಧ್ಯೆ, ಓರ್ವ ಸಾಮಾನ್ಯ ನಾಗರಿಕರೊಬ್ಬರು ಪ್ರಾಣದ ಹಂಗು ತೊರೆದು ತೋರಿಸಿದ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮರದ ಹಿಂದೆ ಅಡಗಿದ್ದ ಬಂದೂಕುಧಾರಿಗಳ ಪೈಕಿ ಒಬ್ಬನನ್ನು ಹಿಡಿದು, ಆತನಿಂದ ರೈಫಲ್ ಕಸಿದು, ಅದೇ ಗನ್ ಅನ್ನು ಆತನತ್ತಲೇ ಗುರಿಯಿಟ್ಟ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ಆಯುಧರಹಿತ ವ್ಯಕ್ತಿಯೊಬ್ಬರು ನಿಲುಗಡೆ ಮಾಡಿದ ಕಾರುಗಳ ಹಿಂದೆ ಅಡಗಿರುತ್ತಾರೆ. ನಂತರ ಅವರು ವೇಗವಾಗಿ ಓಡಿ ಹೋಗಿ ಮರದ ಹಿಂದೆ ಅಡಗಿದ್ದ ಬಂದೂಕುಧಾರಿ ಕುತ್ತಿಗೆಯನ್ನು ಹಿಂದಿನಿಂದ ಹಿಡಿದು, ಆತನಿಂದ ರೈಫಲ್ ಕಿತ್ತುಕೊಳ್ಳುತ್ತಾರೆ. ನೆಲಕ್ಕೆ ಬಿದ್ದ ಆ ಬಂದೂಕುಧಾರಿಯತ್ತ ಅದೇ ಗನ್ ಅನ್ನು ಹಿಡಿದು ಆ ವ್ಯಕ್ತಿ ತೋರಿಸಿದ ಧೈರ್ಯದ ಕಾರ್ಯಕ್ಕೆ ಜಾಗತಿಕ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

https://twitter.com/i/status/2000133367619355097

ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಭಯೋತ್ಪಾದಕ ಘಟನೆಯಲ್ಲಿ ಇಬ್ಬರು ಬಂದೂಕುಧಾರಿಗಳು ಸುಮಾರು 50 ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ನ್ಯೂ ಸೌತ್ ವೇಲ್ಸ್ (NSW) ಪೊಲೀಸರು ಘಟನೆಗೆ ಕಾರ್ಯಪ್ರವೃತ್ತರಾಗಿದ್ದಾರೆ. .ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಎನ್‌ಎಸ್‌ಡಬ್ಲ್ಯೂ ಪೊಲೀಸರು ಎಕ್ಸ್ (X) ನಲ್ಲಿ ತಿಳಿಸಿದ್ದಾರೆ.
ಎಂಟು ದಿನಗಳ ಯಹೂದಿಗಳ ಹಬ್ಬವಾದ ಹನುಕ್ಕಾ ಆರಂಭವನ್ನು ಗುರುತಿಸುವ ಕಾರ್ಯಕ್ರಮದ ಆಚರಣೆಯಲ್ಲಿ ನೂರಾರು ಜನರು ಬೀಚ್‌ನಲ್ಲಿ ಸೇರಿದ್ದರು.
ಯಹೂದಿ ಸಮುದಾಯದ ಪ್ರತಿಕ್ರಿಯೆ
ಆಸ್ಟ್ರೇಲಿಯನ್ ಜ್ಯೂಯಿಷ್ ಅಸೋಸಿಯೇಷನ್‌ನ ಸಿಇಒ ರಾಬರ್ಟ್ ಗ್ರೆಗೊರಿ ಅವರು ಈ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಯಹೂದಿ ಸಮುದಾಯವನ್ನು ರಕ್ಷಿಸಲು ವಿಫಲವಾದ ಪ್ರಧಾನಿ ಅಲ್ಬನೀಸ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಇಂದು ಏನಾಯಿತು ಅದು ದುರಂತ, ಆದರೆ ಇದನ್ನು ಸಂಪೂರ್ಣವಾಗಿ ಊಹಿಸಬಹುದಾಗಿತ್ತು. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಯಹೂದಿ ಸಮುದಾಯವನ್ನು ರಕ್ಷಿಸಲು ಅಲ್ಬನೀಸ್ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಆಸ್ಟ್ರೇಲಿಯಾದಲ್ಲಿ ತಮ್ಮ ಭವಿಷ್ಯವಿದೆಯೇ ಎಂದು ಅನೇಕ ಯಹೂದಿಗಳು ಚಿಂತಿಸುತ್ತಿದ್ದಾರೆ ” ಎಂದು ಗ್ರೆಗೊರಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement