ಸಿಡ್ನಿ: ಆಸ್ಟ್ರೇಲಿಯಾದ ಪ್ರಸಿದ್ಧ ಬಾಂಡಿ ಬೀಚ್ನಲ್ಲಿ ಭಾನುವಾರ ನಡೆದ ಭೀಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ವೃದ್ಧ ದಂಪತಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದಾಳಿಕೋರನನ್ನು ತಡೆಯಲು ಪ್ರಯತ್ನಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಡ್ಯಾಶ್ಕ್ಯಾಮ್ (Dashcam) ವೀಡಿಯೊದಲ್ಲಿ, ವೃದ್ಧ ದಂಪತಿ ರಸ್ತೆಯ ಬದಿಯಲ್ಲಿ ಬಂದೂಕುಧಾರಿ ದಾಳಿಕೋರನೊಂದಿಗೆ ಹೋರಾಡುತ್ತಿರುವುದು ಕಂಡುಬಂದಿದೆ. ಶಾರ್ಟ್ಸ್ ಮತ್ತು ಲ್ಯಾವೆಂಡರ್ ಬಣ್ಣದ ಟಿ-ಶರ್ಟ್ ಧರಿಸಿದ್ದ ವೃದ್ಧರೊಬ್ಬರು, ಬಿಳಿ ಪ್ಯಾಂಟ್ ಧರಿಸಿ ಕೈಯಲ್ಲಿ ಗನ್ ಹಿಡಿದಿದ್ದ ವ್ಯಕ್ತಿಯನ್ನು ಕೆಳಕ್ಕೆ ಉರುಳಿಸಿ ಆತನನ್ನು ನಿಶಸ್ತ್ರಗೊಳಿಸಲು ಪ್ರಯತ್ನಿಸಿದ್ದಾರೆ. ದಾಳಿಕೋರರಲ್ಲಿ ಒಬ್ಬನ ಬಂದೂಕನ್ನು ಹಿಡಿದು ತಡೆಯಲು ಪ್ರಯತ್ನಿಸಿದರು.
69 ವರ್ಷದ ಬೋರಿಸ್ ಗುರ್ಮನ್ ಮತ್ತು ಅವರ ಪತ್ನಿ 61 ವರ್ಷದ ಸೋಫಿಯಾ, ತಾವು ದಾಳಿ ಕೋರಿನ ಗುಂಡಿಗೆ ಸಾಯುವ ಮೊದಲು ಇತರರನ್ನು ರಕ್ಷಿಸಲು ಧೈರ್ಯದಿಂದ ಮುಂದಾದರು ಎಂದು ಅವರ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.
ದುರದೃಷ್ಟವಶಾತ್, ಈ ಧೈರ್ಯಶಾಲಿ ದಂಪತಿ ದಾಳಿಯಲ್ಲಿ ಬಲಿಯಾಗಿದ್ದಾರೆ. ಆಸ್ಟ್ರೇಲಿಯಾದ ಮಾಧ್ಯಮಗಳು ಇವರನ್ನು ಬೋರಿಸ್ ಮತ್ತು ಸೋಫಿಯಾ ಗುರ್ಮನ್ ಎಂದು ಗುರುತಿಸಿವೆ. ತಮ್ಮ ಪ್ರಾಣದ ಹಂಗು ತೊರೆದು ಇತರರನ್ನು ರಕ್ಷಿಸಲು ಮುಂದಾದ ಇವರ ಸಾಹಸಕ್ಕೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಾಂಡಿ ಬೀಚ್ನಲ್ಲಿ ಹನುಕ್ಕಾ (Hanukkah) ಹಬ್ಬದ ಆಚರಣೆಯ ವೇಳೆ ನಡೆದ ಈ ದಾಳಿಯಲ್ಲಿ ಒಟ್ಟು 15 ಜನರು ಸಾವಿಗೀಡಾಗಿದ್ದಾರೆ.ಮೃತರ ವಯಸ್ಸು 10 ರಿಂದ 87 ವರ್ಷಗಳ ನಡುವೆ ಇದೆ. ಪ್ರಸ್ತುತ 25 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಮತ್ತೊಬ್ಬ ಹೀರೊ
ದಂಪತಿಯಲ್ಲದೆ, 43 ವರ್ಷದ ಅಹಮದ್ ಅಲ್-ಅಹಮದ್ ಎಂಬುವವರು ಕೂಡ ದಾಳಿಕೋರನನ್ನು ತಡೆದು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಫುಟ್ಬ್ರಿಡ್ಜ್ನಿಂದ ಗುಂಡಿನ ಮಳೆಗರೆಯುತ್ತಿದ್ದ ವ್ಯಕ್ತಿಯನ್ನು ಅಹಮದ್ ಕೆಳಕ್ಕೆ ತಳ್ಳಿ ಆತನಿಂದ ರೈಫಲ್ ಕಿತ್ತುಕೊಂಡಿದ್ದರು. ಈ ಸಾಹಸದ ನಡುವೆ ಅವರಿಗೆ ಎರಡು ಗುಂಡುಗಳು ತಗುಲಿದ್ದು, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಇವರನ್ನು “ಆಸ್ಟ್ರೇಲಿಯಾದ ಹೀರೊ” ಎಂದು ಬಣ್ಣಿಸಿದ್ದಾರೆ.
ಈ ದಾಳಿಯ ಹಿಂದೆ ತಂದೆ ಮತ್ತು ಮಗನ ಕೈವಾಡವಿರುವುದು ತನಿಖೆಯಿಂದ ತಿಳಿದುಬಂದಿದೆ. 50 ವರ್ಷದ ದಾಳಿಕೋರ ಸಾಜಿದ್ ಅಕ್ರಮ್ನನ್ನು ಪೊಲೀಸರು ಸ್ಥಳದಲ್ಲೇ ಹೊಡೆದುರುಳಿಸಿದ್ದಾರೆ. ಆತನ ಮಗ 24 ವರ್ಷದ ನವೀದ್ ಅಕ್ರಮ್ ಗಾಯಗೊಂಡಿದ್ದು, ಪೊಲೀಸ್ ಕಣ್ಗಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತನಿಖಾಧಿಕಾರಿಗಳು ಇದೊಂದು ಇಸ್ಲಾಮಿಕ್ ಸ್ಟೇಟ್ (IS) ಪ್ರೇರಿತ ಭಯೋತ್ಪಾದನಾ ದಾಳಿ ಎಂದು ಶಂಕಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ