ಅಂತರಧರ್ಮೀಯ ವಿವಾಹಕ್ಕೆ ವಿರೋಧ ; ಹೆತ್ತವರನ್ನೇ ಕೊಂದು 6 ತುಂಡು ಮಾಡಿ ನದಿಗೆ ಎಸೆದ ಇಂಜಿನಿಯರ್ ಮಗ…!

ಜೌನ್‌ಪುರ (ಉತ್ತರ ಪ್ರದೇಶ): ಕೌಟುಂಬಿಕ ಕಲಹ ಮತ್ತು ಹಣದ ವಿಚಾರವಾಗಿ ನಡೆದ ಜಗಳವೊಂದು ಭೀಕರ ಹತ್ಯಾಕಾಂಡದಲ್ಲಿ ಅಂತ್ಯಗೊಂಡಿದೆ. ತನ್ನ ಅಂತರಧರ್ಮೀಯ ವಿವಾಹವನ್ನು ಒಪ್ಪದ ತಂದೆ-ತಾಯಿಯನ್ನು ಇಂಜಿನಿಯರ್ ಮಗನೊಬ್ಬ ಬರ್ಬರವಾಗಿ ಕೊಲೆ ಮಾಡಿ, ಮೃತದೇಹಗಳನ್ನು ಗರಗಸದಿಂದ ತುಂಡು ಮಾಡಿ ನದಿಗೆ ಎಸೆದಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಬೆಳಕಿಗೆ ಬಂದಿದೆ.
ನಿವೃತ್ತ ರೈಲ್ವೆ ಉದ್ಯೋಗಿ ಶ್ಯಾಮಬಹದ್ದೂರ (62) ಮತ್ತು ಬಬಿತಾ (60) ಕೊಲೆಯಾದ ದುರ್ದೈವಿಗಳು. ಇವರ ಪುತ್ರ ಅಂಬೇಶ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು ಐದು ವರ್ಷಗಳ ಹಿಂದೆ ಅಂಬೇಶ ಮುಸ್ಲಿಂ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಆದರೆ ಶ್ಯಾಮ ಬಹದ್ದೂರ ದಂಪತಿ ಈ ಮದುವೆಯನ್ನು ಒಪ್ಪಿರಲಿಲ್ಲ. ಅಂಬೇಶಗೆ ಇಬ್ಬರು ಮಕ್ಕಳಿದ್ದರೂ, ಸೊಸೆಯನ್ನು ಮನೆಗೆ ಸೇರಿಸಲು ತಂದೆ ನಿರಾಕರಿಸಿದ್ದರು. ತಂದೆಯ ಒತ್ತಾಯಕ್ಕೆ ಮಣಿದ ಅಂಬೇಶ ಕೊನೆಗೆ ತನ್ನ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದ.

ವಿಚ್ಛೇದನದ ಜೀವನಾಂಶವಾಗಿ ಪತ್ನಿಗೆ 5 ಲಕ್ಷ ರೂಪಾಯಿ ನೀಡಬೇಕಿತ್ತು. ಈ ಹಣಕ್ಕಾಗಿ ಅಂಬೇಶ ತನ್ನ ತಂದೆಯನ್ನು ಕೇಳಿದಾಗ ಅವರು ಅದನ್ನು ಕೊಡಲು ನಿರಾಕರಿಸಿದ್ದಾರೆ. ಡಿಸೆಂಬರ್ 8 ರಂದು ಇದೇ ವಿಚಾರವಾಗಿ ತಂದೆ-ಮಗನ ನಡುವೆ ತೀವ್ರ ಗಲಾಟೆ ನಡೆದಿದೆ.
ಗಲಾಟೆಯ ಭರದಲ್ಲಿ ಆಕ್ರೋಶಗೊಂಡ ಅಂಬೇಶ, ಮನೆಯಲ್ಲಿದ್ದ ಭಾರವಾದ ‘ಸಿಲ್ ಬಟ್ಟಾ’ (ರುಬ್ಬುವ ಕಲ್ಲು)ದಿಂದ ತಾಯಿ ಬಬಿತಾ ಅವರ ತಲೆಗೆ ಹೊಡೆದಿದ್ದಾನೆ. ಪತ್ನಿ ನೋವಿನಿಂದ ಕಿರುಚಾಡುತ್ತಿರುವುದನ್ನು ಕಂಡು ತಂದೆ ಶ್ಯಾಮಬಹದ್ದೂರ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಅಂಬೇಶ ಅವರ ತಲೆಗೂ ಹಲವು ಬಾರಿ ಹೊಡೆದಿದ್ದಾನೆ. ಪರಿಣಾಮವಾಗಿ ವೃದ್ಧ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತದೇಹಗಳನ್ನು 6 ತುಂಡು ಮಾಡಿದ ಮಗ
ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಸಂಚು ರೂಪಿಸಿದ ಅಂಬೇಶ, ಮೃತದೇಹಗಳನ್ನು ವಿಲೇವಾರಿ ಮಾಡಲು ದೊಡ್ಡ ಬ್ಯಾಗ್‌ಗಾಗಿ ಹುಡುಕಾಡಿದ್ದಾನೆ. ಅದು ಸಿಗದಿದ್ದಾಗ, ಗ್ಯಾರೇಜ್‌ನಲ್ಲಿದ್ದ ಗರಗಸದಿಂದ ಹೆತ್ತವರ ದೇಹಗಳನ್ನು ಆರು ತುಂಡುಗಳಾಗಿ ಕತ್ತರಿಸಿದ್ದಾನೆ. ನಂತರ ಆ ಭಾಗಗಳನ್ನು ಸಣ್ಣ ಚೀಲಗಳಲ್ಲಿ ತುಂಬಿಸಿ, ತನ್ನ ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ನಸುಕಿನ ಜಾವ ನದಿಗೆ ಎಸೆದಿದ್ದಾನೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

ಘಟನೆಯ ನಂತರ ಅಂಬೇಶ ತನ್ನ ಸಹೋದರಿ ವಂದನಾಗೆ ಕರೆ ಮಾಡಿ, “ಅಪ್ಪ-ಅಮ್ಮ ಜಗಳವಾಡಿ ಮನೆಯಿಂದ ಹೊರಟು ಹೋಗಿದ್ದಾರೆ, ನಾನು ಅವರನ್ನು ಹುಡುಕಲು ಹೋಗುತ್ತಿದ್ದೇನೆ” ಎಂದು ಸುಳ್ಳು ಹೇಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಇದರಿಂದ ಅನುಮಾನಗೊಂಡ ವಂದನಾ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಅಂಬೇಶನ ವರ್ತನೆ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊದಲು ಹಾದಿ ತಪ್ಪಿಸಲು ಯತ್ನಿಸಿದರೂ, ನಂತರ ಸತ್ಯ ಒಪ್ಪಿಕೊಂಡಿದ್ದಾನೆ. ಪೊಲೀಸರು ಈಗಾಗಲೇ ಶ್ಯಾಮ ಬಹದ್ದೂರ ಅವರ ದೇಹದ ಒಂದು ಭಾಗ ಮತ್ತು ಹತ್ಯೆಗೆ ಬಳಸಿದ ಗರಗಸ ಹಾಗೂ ಕಲ್ಲನ್ನು ವಶಪಡಿಸಿಕೊಂಡಿದ್ದಾರೆ. ನದಿಯಲ್ಲಿ ಉಳಿದ ಭಾಗಗಳಿಗಾಗಿ ಮುಳುಗುತಜ್ಞರ ತಂಡ ಹುಡುಕಾಟ ನಡೆಸುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ಶ್ರೀವಾಸ್ತವ ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement