ಜಾಮ್‌ನಗರ: ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರು ಡಿಸೆಂಬರ್ 16ರಂದು ಗುಜರಾತಿನ ಜಾಮ್‌ನಗರದಲ್ಲಿರುವ ಅನಂತ ಅಂಬಾನಿ ಅವರ ಕನಸಿನ ಪ್ರಾಜೆಕ್ಟ್ ‘ವಂತಾರಾ’ದಲ್ಲಿ ಭಗವಾನ್ ಶಿವನಿಗೆ ಅಭಿಷೇಕ ನೆರವೇರಿಸಿದ್ದಾರೆ. ಮಂಗಳವಾರ ಸಂಜೆ ನವದೆಹಲಿಯಿಂದ ತಮ್ಮ ಇಂಟರ್ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸುಆರೆಜ್ ಮತ್ತು ರೋಡ್ರಿಗೋ ಡಿ ಪಾಲ್ ಅವರೊಂದಿಗೆ ಮೆಸ್ಸಿ ಜಾಮ್‌ನಗರಕ್ಕೆ ಆಗಮಿಸಿದ್ದರು.
ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸುತ್ತಾ, ಮಂತ್ರಘೋಷಗಳ ನಡುವೆ ಮೆಸ್ಸಿ ಭಕ್ತಿಯಿಂದ ಧ್ಯಾನ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಇದು ಭಾರತ ಸೇರಿದಂತೆ ವಿಶ್ವದಾದ್ಯಂತ ಇರುವ ಮೆಸ್ಸಿ ಅಭಿಮಾನಿಗಳ ಗಮನ ಸೆಳೆದಿದೆ.
ಹಿಂದೂ ಸಂಪ್ರದಾಯಕ್ಕೆ ಗೌರವ ಸಲ್ಲಿಸಿದ ಮೆಸ್ಸಿ
ಅನಂತ ಅಂಬಾನಿ ಸ್ಥಾಪಿಸಿರುವ ವನ್ಯಜೀವಿ ಸಂರಕ್ಷಣಾ ಕೇಂದ್ರವಾದ ‘ವಂತಾರಾ’ಕ್ಕೆ ಭೇಟಿ ನೀಡಿದ ಮೆಸ್ಸಿ, ಅಲ್ಲಿನ ಆಧುನಿಕ ಪ್ರಾಣಿ ಕಲ್ಯಾಣ ವ್ಯವಸ್ಥೆ ಮತ್ತು ಭಾರತೀಯ ಪರಂಪರೆಯ ಸಂಗಮವನ್ನು ಕಂಡು ಬೆರಗಾದರು. ಸನಾತನ ಧರ್ಮದ ಆಚಾರದಂತೆ ಯಾವುದೇ ಕೆಲಸವನ್ನು ದೈವದ ಆಶೀರ್ವಾದದೊಂದಿಗೆ ಆರಂಭಿಸುವ ಸಂಪ್ರದಾಯದಂತೆ, ಮೆಸ್ಸಿ ಹಿಂದೂ ಧರ್ಮದ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಪ್ರಕೃತಿ ಮತ್ತು ಜೀವಜಂತುಗಳನ್ನು ಪೂಜಿಸುವ ಭಾರತೀಯ ತತ್ವವನ್ನು ಮೆಸ್ಸಿ ಈ ಮೂಲಕ ಗೌರವಿಸಿದರು.
ಮೆಸ್ಸಿ ಅವರು ವಂತಾರಾದಲ್ಲಿರುವ ಆನೆಗಳು, ಹುಲಿಗಳು ಮತ್ತು ವಿವಿಧ ಸರಿಸೃಪಗಳ ಸಂರಕ್ಷಣಾ ಕೇಂದ್ರವನ್ನು ವೀಕ್ಷಿಸಿದರು. ಅಲ್ಲದೆ, ಅಲ್ಲಿನ ಹಸಿರು ಇಂಧನ ಸಂಕೀರ್ಣ ಮತ್ತು ವಿಶ್ವದ ಅತಿದೊಡ್ಡ ರಿಫೈನರಿ ಸಂಕೀರ್ಣಕ್ಕೆ ಭೇಟಿ ನೀಡಿದರು.
ಭಾರತದ ಪ್ರವಾಸದ ಬಗ್ಗೆ ಮೆಸ್ಸಿ ಹೇಳಿದ್ದೇನು?
ಡಿಸೆಂಬರ್ 15ಕ್ಕೆ ಲಿಯೋನೆಲ್ ಮೆಸ್ಸಿ ಅವರ ಭಾರತ ಪ್ರವಾಸ ಮುಕ್ತಾಯಗೊಂಡಿತು. ಈ ವೇಳೆ ಅವರು ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ನವದೆಹಲಿಯಲ್ಲಿ ಸಾವಿರಾರು ಅಭಿಮಾನಿಗಳನ್ನು ಭೇಟಿಯಾದರು.
ದೆಹಲಿಯ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಮಾತನಾಡಿದ ಮೆಸ್ಸಿ, “ಭಾರತದಲ್ಲಿ ಕಳೆದ ಈ ದಿನಗಳಲ್ಲಿ ಸಿಕ್ಕ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಚಿರಋಣಿ. ಭಾರತೀಯರು ನನ್ನ ಮೇಲೆ ಇಟ್ಟಿರುವ ಪ್ರೀತಿಯ ಬಗ್ಗೆ ನನಗೆ ಮೊದಲೇ ತಿಳಿದಿತ್ತು, ಆದರೆ ಅದನ್ನು ನೇರವಾಗಿ ಅನುಭವಿಸಿದ್ದು ಅದ್ಭುತ ಅನುಭವ. ಪ್ರವಾಸ ಚಿಕ್ಕದಾಗಿದ್ದರೂ ತುಂಬಾ ವಿಶೇಷವಾಗಿತ್ತು. ಖಂಡಿತವಾಗಿಯೂ ನಾವು ಮತ್ತೆ ಭಾರತಕ್ಕೆ ಬರುತ್ತೇವೆ, ಬಹುಶಃ ಮುಂದೊಂದು ದಿನ ಇಲ್ಲಿ ಪಂದ್ಯವನ್ನಾಡಲು ಬರಬಹುದು ಎಂದು ಅವರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ