ನವದೆಹಲಿ: ಬಾಂಗ್ಲಾದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯು 1971ರ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಭಾರತಕ್ಕೆ ಎದುರಾಗಿರುವ ಅತಿದೊಡ್ಡ ‘ವ್ಯೂಹಾತ್ಮಕ ಸವಾಲು’ ಎಂದು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಗಂಭೀರ ಎಚ್ಚರಿಕೆ ನೀಡಿದೆ.
ಶಶಿ ತರೂರ್ ನೇತೃತ್ವದ ಈ ಸಮಿತಿಯು ಸಂಸತ್ತಿನಲ್ಲಿ ಸಲ್ಲಿಸಿದ ವರದಿಯಲ್ಲಿ, ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಪುನರುತ್ಥಾನ ಮತ್ತು ಚೀನಾ-ಪಾಕಿಸ್ತಾನದ ಹೆಚ್ಚುತ್ತಿರುವ ಹಸ್ತಕ್ಷೇಪದ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
1971ಕ್ಕಿಂತ ಭಿನ್ನವಾದ ಸವಾಲು
1971ರ ಯುದ್ಧದ ಸಮಯದಲ್ಲಿ ಭಾರತಕ್ಕೆ ಎದುರಾಗಿದ್ದ ಸವಾಲು ಅಸ್ತಿತ್ವದ ಪ್ರಶ್ನೆಯಾಗಿತ್ತು (Existential threat). ಆದರೆ ಈಗಿನ ಪರಿಸ್ಥಿತಿ ತಕ್ಷಣದ ಅಪಾಯಕ್ಕಿಂತ ಹೆಚ್ಚಾಗಿ, ದೀರ್ಘಕಾಲೀನ ಮತ್ತು ಆಳವಾದ ಸುರಕ್ಷತಾ ಭೀತಿಯನ್ನು ಹೊಂದಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ರಾಜಕೀಯ ಬದಲಾವಣೆಗಳು ಭಾರತದ ವಿದೇಶಾಂಗ ನೀತಿಯ ಮೇಲೆ ಶಾಶ್ವತ ಪರಿಣಾಮ ಬೀರಬಹುದು ಎಂದು ಸಮಿತಿ ಹೇಳಿದೆ.
ಅವಾಮಿ ಲೀಗ್ ಹಿನ್ನಡೆ ಮತ್ತು ರಾಜಕೀಯ ಅಸ್ಥಿರತೆ
ಶೇಖ್ ಹಸೀನಾ ನೇತೃತ್ವದ ‘ಅವಾಮಿ ಲೀಗ್’ ತನ್ನ ರಾಜಕೀಯ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿರುವುದು ಭಾರತಕ್ಕೆ ಚಿಂತೆಯ ವಿಷಯವಾಗಿದೆ.
2024ರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಬಹುಮತ ಪಡೆದಿದ್ದರೂ, ಕೇವಲ ಶೇ. 40ರಷ್ಟು ಮತದಾನವಾಗಿರುವುದು ಆ ಸರ್ಕಾರದ ಕಾನೂನುಬದ್ಧತೆಯ ಬಗ್ಗೆ ಪ್ರಶ್ನೆ ಮೂಡಿಸಿತ್ತು.
ಪ್ರಸ್ತುತ ಅಲ್ಲಿನ ಸಾಂಸ್ಥಿಕ ನಿಯಂತ್ರಣ ದುರ್ಬಲಗೊಂಡಿದ್ದು, ಇದು ಆ ಪಕ್ಷದ ಇತರ ವಿರೋಧಿ ಶಕ್ತಿಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ವರದಿ ಬೆಟ್ಟು ಮಾಡಿದೆ.
ಇಸ್ಲಾಮಿಕ್ ಮೂಲಭೂತವಾದಿಗಳ ಹಾವಳಿ
ಬಾಂಗ್ಲಾದೇಶದ ಯುವಜನರಲ್ಲಿ ಮೂಡುತ್ತಿರುವ ರಾಷ್ಟ್ರೀಯವಾದಿ ಮನೋಭಾವ ಮತ್ತು ಅದರ ಜೊತೆಗೂಡಿರುವ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳ ಮರುಹುಟ್ಟು ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರಬಹುದು. ಇದು ಭಾರತದ ಆಂತರಿಕ ಭದ್ರತೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ವರದಿಯು ಇಸ್ಲಾಮಿಸ್ಟ್ ಗುಂಪುಗಳ ಪುನರುತ್ಥಾನದ ಬಗ್ಗೆ ಎಚ್ಚರಿಸಿದೆ. ಇದು ಭಾರತದ ಆಂತರಿಕ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆ ಮೇಲೆ ಪರಿಣಾಮ ಬೀರುವ ಸಂಭಾವ್ಯ ಅಂಶವೆಂದು ವರದಿ ವಿವರಿಸಿದೆ.
ಚೀನಾ ಮತ್ತು ಪಾಕಿಸ್ತಾನದ ಪ್ರಭಾವ
ಬಾಂಗ್ಲಾದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನ ತಮ್ಮ ಪ್ರಭಾವ ವಿಸ್ತರಿಸುತ್ತಿರುವುದು ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಈ ದೇಶಗಳ ಪ್ರಭಾವ ಹೆಚ್ಚಾದಷ್ಟೂ, ಬಾಂಗ್ಲಾದೇಶದ ಮೇಲೆ ಭಾರತಕ್ಕಿರುವ ಸಾಂಪ್ರದಾಯಿಕ ಹಿಡಿತ ಸಡಿಲಗೊಳ್ಳಬಹುದು ಮತ್ತು ಭದ್ರತಾ ಸಮೀಕರಣಗಳು ಸಂಕೀರ್ಣಗೊಳ್ಳಬಹುದು ಎಂದು ಸಮಿತಿ ಎಚ್ಚರಿಸಿದೆ. ಸಮಿತಿಯ ಪ್ರಶ್ನೆ:
ಗುಪ್ತಚರ ವೈಫಲ್ಯವೇ?: ಬಾಂಗ್ಲಾದಲ್ಲಿ ಇಷ್ಟೊಂದು ದೊಡ್ಡ ರಾಜಕೀಯ ಬಿಕ್ಕಟ್ಟು ಉದ್ಭವಿಸುವ ಮುನ್ಸೂಚನೆಗಳನ್ನು ಪತ್ತೆಹಚ್ಚಲು ಭಾರತೀಯ ಅಧಿಕಾರಿಗಳು ಏಕೆ ವಿಫಲರಾದರು ಎಂದು ಸಮಿತಿ ಪ್ರಶ್ನಿಸಿದೆ.
ಈ ಬಿಕ್ಕಟ್ಟಿನ ನಡುವೆಯೂ ಬಾಂಗ್ಲಾದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಧಕ್ಕೆಯಾಗದಂತೆ ಭಾರತ ಪ್ರಯತ್ನಿಸುತ್ತಿದೆ. ಪ್ರಸ್ತುತ ಅಲ್ಲಿರುವ ಮಧ್ಯಂತರ ಸರ್ಕಾರದೊಂದಿಗೆ ಭಾರತ ಸಂಪರ್ಕದಲ್ಲಿದೆ ಮತ್ತು ಬಾಂಗ್ಲಾ ಜನರ ಆಕಾಂಕ್ಷೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಬಾಂಗ್ಲಾದೇಶದ ಪರಿಸ್ಥಿತಿಯನ್ನು ಆದ್ಯತೆಯ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ನಿರಂತರ ಮೌಲ್ಯಮಾಪನಗಳು ನಡೆಯುತ್ತಿವೆ ಎಂದು ಸರ್ಕಾರ ಹೇಳಿದೆ
ಪ್ರಾದೇಶಿಕ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶದ ವಿಕಸನಗೊಳ್ಳುತ್ತಿರುವ ರಾಜಕೀಯ ಪಥ ಮತ್ತು ಬಾಹ್ಯ ಹೊಂದಾಣಿಕೆಗಳ ಬಗ್ಗೆ ಭಾರತವು ನಿರಂತರವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವಿದೆ ಎಂದು ಸಮಿತಿ ಶಿಫಾರಸು ಮಾಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ