ವೀಡಿಯೊ..| ಬಾಕ್ಸಿಂಗ್ ಪಂದ್ಯದ ನಂತರ ಹೈಡ್ರಾಮಾ : ಭಾರತದ ಬಾಕ್ಸರ್‌ ಗೆ ಬಾಟಲಿಯಿಂದ ಹೊಡೆದ ಸೋತ ಅಮೆರಿಕನ್‌ ಬಾಕ್ಸರ್‌…!

ದುಬೈ: ಇಲ್ಲಿ ನಡೆದ ಮಿಸ್‌ಫಿಟ್ಸ್ ಬಾಕ್ಸಿಂಗ್ ಪಂದ್ಯಾವಳಿಯ ನಂತರ ಭಾರತದ ಬಾಕ್ಸರ್ ನೀರಜ್ ಗೋಯತ್ ಮತ್ತು ಅಮೆರಿಕದ ಆಂಥೋನಿ ಟೇಲರ್ ನಡುವೆ ತೀವ್ರ ಘರ್ಷಣೆ ನಡೆದಿದೆ. ಕೈಕುಲುಕಲು (Handshake) ನಿರಾಕರಿಸಿದ ವಿಷಯವಾಗಿ ಆರಂಭವಾದ ಜಗಳ, ಬಾಟಲಿ ತೂರಾಟ ಮತ್ತು ಕುರ್ಚಿ ಎತ್ತುವ ಹಂತಕ್ಕೆ ತಲುಪಿದ ಘಟನೆ ವರದಿಯಾಗಿದೆ.
ಪಂದ್ಯ ಮುಗಿದ ನಂತರ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದ ನೀರಜ್ ಗೋಯತ್ ಬಳಿ ಬಂದ ಆಂಥೋನಿ ಟೇಲರ್, ಕೈಕುಲುಕುವಂತೆ ಒತ್ತಾಯಿಸಿದ್ದಾರೆ. ಆದರೆ ಪಂದ್ಯದ ಮೊದಲೇ ನಡೆದಿದ್ದ ಮಾತಿನ ಚಕಮಕಿಯಿಂದ ಅಸಮಾಧಾನಗೊಂಡಿದ್ದ ನೀರಜ್, ಹಸ್ತಲಾಘವ ಮಾಡಲು ನಿರಾಕರಿಸಿದರು. ಇದರಿಂದ ಕೆರಳಿದ ಟೇಲರ್, ನೀರಜ್ ಅವರತ್ತ ಬಾಟಲಿ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಇಬ್ಬರನ್ನೂ ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಟೇಲರ್ ಅವರನ್ನು ರೂಮಿನಿಂದ ಹೊರಗೆ ಎಳೆದೊಯ್ಯುತ್ತಿರುವುದು ಮತ್ತು ನೀರಜ್ ಅವರ ತಂಡ ಹಿಂದಿ ಭಾಷೆಯಲ್ಲಿ ಆಕ್ರೋಶ ಹೊರಹಾಕುತ್ತಿರುವುದು ಕಂಡುಬಂದಿದೆ.
ಪಂದ್ಯದ ನಂತರ, ನೀರಜ್‌ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾಗ ವೇದಿಕೆಯ ಹಿಂದೆ ಭಾರತೀಯ ತಾರೆಯನ್ನು ಸಮೀಪಿಸಿದ ಟೇಲರ್‌ ಹಸ್ತಲಾಘವಕ್ಕೆ ಒತ್ತಾಯಿಸಿದರು. ಗೋಯತ್ ನಿರಾಕರಿಸಿದರು, ಇದು ಟೇಲರ್ ಅವರನ್ನು ಕೆರಳಿಸಿತು. ಟೇಲರ್ , ನೀವು ಬಾಕ್ಸಿಂಗ್‌ ಬಗ್ಗೆ ಏನೂ ತಿಳಿದಿಲ್ಲದ ಮನುಷ್ಯ” ಎಂದು ಹೇಳುವುದು ಕೇಳಿಬಂದಿತು.

ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲೂ ಇಬ್ಬರ ನಡುವೆ ಕಿತ್ತಾಟ ನಡೆದಿತ್ತು. ಅಮೆರಿಕದ ಟೇಲರ್ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪ್ರತಿಯಾಗಿ ನೀರಜ್ ಗೋಯತ್ “ಇಂಡಿಯಾ ತೇರಾ ಬಾಪ್ ಹೈ” (ಭಾರತ ನಿನ್ನ ತಂದೆ ಇದ್ದಂತೆ) ಎಂದು ಎಚ್ಚರಿಕೆ ನೀಡಿದ್ದರು. ದೇಶದ ಬಗ್ಗೆ ಏನನ್ನೂ ಮಾತನಾಡದಂತೆ ಅವರು ಟೇಲರ್‌ಗೆ ವಾರ್ನಿಂಗ್ ನೀಡಿದ್ದರು.
ರಿಂಗ್‌ನಲ್ಲಿ ನೀರಜ್ ಗೋಯತ್ ಗೆ ಜಯ
ಈ ಎಲ್ಲಾ ಗದ್ದಲಗಳ ನಡುವೆ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ನೀರಜ್ ಗೋಯತ್ ಭರ್ಜರಿ ಪ್ರದರ್ಶನ ನೀಡಿದರು. ತೀರ್ಪುಗಾರರು ಸರ್ವಾನುಮತದಿಂದ (59-55, 58-56, 60-54) ನೀರಜ್ ಅವರ ಪರವಾಗಿ ತೀರ್ಪು ನೀಡುವ ಮೂಲಕ ಅವರನ್ನು ವಿಜಯಿ ಎಂದು ಘೋಷಿಸಿದರು. ರಿಂಗ್‌ನಲ್ಲಿ ಸೋತರೂ ಹೊರಗಡೆ ಟೇಲರ್ ಗಲಾಟೆ ಮಾಡಿರುವುದು ಕ್ರೀಡಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement