ಸೂರತ್: ಗುಜರಾತಿನ ಸೂರತ್‌ನಲ್ಲಿ ಗುರುವಾರ (ಡಿಸೆಂಬರ್ 25) ಪವಾಡವೊಂದು ನಡೆದಿದೆ. ಹತ್ತನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯೊಬ್ಬರು ಎಂಟನೇ ಮಹಡಿಯ ಕಿಟಕಿಯ ಗ್ರಿಲ್‌ನಲ್ಲಿ ಸಿಲುಕಿಕೊಳ್ಳುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಹಾಂಗೀರಾಬಾದ್ ಪ್ರದೇಶದ ‘ಟೈಮ್ ಗ್ಯಾಲಕ್ಸಿ-ಎ’ ಕಟ್ಟಡದಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 57 ವರ್ಷದ ನಿತಿನ್ ಅಡಿಯಾ ಎಂಬವರು ತಮ್ಮ ಮನೆಯ ಕಿಟಕಿಯ ಬಳಿ ಮಲಗಿದ್ದಾಗ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್, ಅವರು ಕೆಳಗೆ ಬೀಳುವಾಗ ಎರಡು ಮಹಡಿ ಕೆಳಗಿನ (8ನೇ ಮಹಡಿ) ಕಿಟಕಿಯ ಮೆಟಲ್ ಗ್ರಿಲ್‌ನಲ್ಲಿ ಅವರ ಕಾಲು ಸಿಲುಕಿಕೊಂಡಿದೆ. ಇದರಿಂದಾಗಿ ಅವರು ಸುಮಾರು ಒಂದು ಗಂಟೆಗಳ ಕಾಲ ಗಾಳಿಯಲ್ಲೇ ತಲೆಕೆಳಗಾಗಿ ನೇತಾಡುತ್ತಿದ್ದರು.
ರೋಚಕ ರಕ್ಷಣಾ ಕಾರ್ಯಾಚರಣೆ
ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಜಹಾಂಗೀರಪುರ, ಪಾಲನಪುರ ಮತ್ತು ಅದಾಜನ್ ಎಂಬ ಮೂರು ಕೇಂದ್ರಗಳಿಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಸಿಬ್ಬಂದಿ 10ನೇ ಮಹಡಿಯಿಂದ ಹಗ್ಗ ಮತ್ತು ಸೇಫ್ಟಿ ಬೆಲ್ಟ್‌ಗಳನ್ನು ಬಳಸಿ ನಿತಿನ್ ಅವರು ಕೆಳಗೆ ಬೀಳದಂತೆ ಭದ್ರಪಡಿಸಿದರು. ನಂತರ 8ನೇ ಮಹಡಿಯ ಗ್ರಿಲ್ ಅನ್ನು ಜಾಗರೂಕತೆಯಿಂದ ಕತ್ತರಿಸಿ ಅವರನ್ನು ಸುರಕ್ಷಿತವಾಗಿ ಒಳಕ್ಕೆ ಎಳೆದುಕೊಳ್ಳಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಕಾರ್ಯಾಚರಣೆಯನ್ನು ನೂರಾರು ಜನರು ಉಸಿರು ಬಿಗಿಹಿಡಿದು ವೀಕ್ಷಿಸಿದರು. ಅವರು ಸುರಕ್ಷಿತವಾಗಿ ರಕ್ಷಿಸಲ್ಪಟ್ಟಾಗ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ರಕ್ಷಿಸಿದ ನಂತರ ನಿತಿನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಿತಿನ್ ಅವರ ಬದುಕುಳಿಯುವಿಕೆ ನಿಜಕ್ಕೂ ಒಂದು ಪವಾಡ ಎಂದು ಅಗ್ನಿಶಾಮಕ ಅಧಿಕಾರಿಗಳು ಬಣ್ಣಿಸಿದ್ದಾರೆ. ಇದೇ ವೇಳೆ, ಎತ್ತರದ ಕಟ್ಟಡಗಳಲ್ಲಿ ವಾಸಿಸುವವರು ಕಿಟಕಿಗಳಿಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ