ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನ

ಢಾಕಾ: ಬಾಂಗ್ಲಾದೇಶದ ರಾಜಕೀಯ ಇತಿಹಾಸದ ಪ್ರಬಲ ನಾಯಕಿ, ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ (80) ಅವರು ಸುದೀರ್ಘ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
ಢಾಕಾದ ಎವರ್‌ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು, ಮಂಗಳವಾರ (ಡಿಸೆಂಬರ್‌ 30) ಮುಂಜಾನೆ 6 ಗಂಟೆಗೆ  ಕೊನೆಯುಸಿರೆಳೆದರು ಎಂದು ಬಿಎನ್‌ಪಿ ಪಕ್ಷ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ 36 ದಿನಗಳಿಂದ ಅವರು ಹೃದಯ ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಲಿವರ್ ಸಿರೋಸಿಸ್, ಸಂಧಿವಾತ, ಮಧುಮೇಹ ಮತ್ತು ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಬಾಂಗ್ಲಾದೇಶದ ಜೊತೆಗೆ ಯುಕೆ, ಅಮೆರಿಕ ಮತ್ತು ಚೀನಾದ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಇತ್ತೀಚೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯುವ ಪ್ರಯತ್ನ ನಡೆದಿತ್ತಾದರೂ, ಅವರ ಆರೋಗ್ಯ ಸ್ಥಿತಿ ಅತ್ಯಂತ ನಾಜೂಕಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ.
1945ರಲ್ಲಿ ಬ್ರಿಟಿಷ್ ಇಂಡಿಯಾದ ಜಲ್ಪೈಗುರಿಯಲ್ಲಿ (ಈಗಿನ ಪಶ್ಚಿಮ ಬಂಗಾಳ) ಜನಿಸಿದ ಇವರು, ವಿಭಜನೆಯ ನಂತರ ಬಾಂಗ್ಲಾದೇಶಕ್ಕೆ ಸ್ಥಳಾಂತರಗೊಂಡಿದ್ದರು. ಇವರಿಗೆ ಇಬ್ಬರು ಪುತ್ರರಿದ್ದು, ಹಿರಿಯ ಮಗ ತಾರಿಕ್ ರೆಹಮಾನ್ ಇತ್ತೀಚೆಗಷ್ಟೇ 17 ವರ್ಷಗಳ ವನವಾಸದ ನಂತರ ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಕಿರಿಯ ಮಗ ಅರಾಫತ್ ರೆಹಮಾನ್ ಕೆಲವು ವರ್ಷಗಳ ಹಿಂದೆ ಮಲೇಷ್ಯಾದಲ್ಲಿ ನಿಧನರಾಗಿದ್ದರು.
 ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ…
ಖಲೀದಾ ಜಿಯಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅವರು ಒಟ್ಟು ಮೂರು ಬಾರಿ (1991, 1996 ಮತ್ತು 2001)  ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು
 ದೇಶದಲ್ಲಿ ಅಧ್ಯಕ್ಷೀಯ ಪದ್ಧತಿಯನ್ನು ರದ್ದುಗೊಳಿಸಿ ಸಂಸದೀಯ ವ್ಯವಸ್ಥೆಯನ್ನು ಜಾರಿಗೆ ತಂದರು. ಉಚಿತ ಪ್ರಾಥಮಿಕ ಶಿಕ್ಷಣ ಮತ್ತು ವಿದೇಶಿ ಹೂಡಿಕೆಗೆ ಉತ್ತೇಜನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ತಮ್ಮ ಪತಿ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಹತ್ಯೆಯ ನಂತರ, ಪಕ್ಷವನ್ನು ಒಗ್ಗೂಡಿಸಲು ಅವರು ರಾಜಕೀಯಕ್ಕೆ ಪ್ರವೇಶಿಸಿದರು.
ಹಸೀನಾ ಜೊತೆಗಿನ ಸಂಘರ್ಷ:
ಒಂದು ಕಾಲದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಶೇಖ್ ಹಸೀನಾ ಅವರೊಂದಿಗೆ ಕೈಜೋಡಿಸಿದ್ದ ಖಲೀದಾ, ನಂತರ ಅವರ ಕಟ್ಟರ್‌ ರಾಜಕೀಯ ವಿರೋಧಿಯಾದರು. ಈ ಇಬ್ಬರು ನಾಯಕಿಯರನ್ನು ವಿಶ್ವ ರಾಜಕೀಯದಲ್ಲಿ ‘ಬ್ಯಾಟ್ಲಿಂಗ್ ಬೇಗಮ್ಸ್’  ಎಂದೇ ಕರೆಯಲಾಗುತ್ತಿತ್ತು.
ಭ್ರಷ್ಟಾಚಾರದ ಆರೋಪದ ಮೇಲೆ 2018ರಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇವರನ್ನು, 2020ರಲ್ಲಿ ಮಾನವೀಯತೆಯ ಆಧಾರದ ಮೇಲೆ ಗೃಹಬಂಧನದಲ್ಲಿ ಇರಿಸಲಾಗಿತ್ತು. 2024ರಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಲಾಯಿತು. ಇತ್ತೀಚೆಗಷ್ಟೇ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಅವರನ್ನು ಭ್ರಷ್ಟಾಚಾರದ ಪ್ರಕರಣಗಳಿಂದ ಖುಲಾಸೆಗೊಳಿಸಿತ್ತು.
ಬಾಂಗ್ಲಾದೇಶದ ರಾಜಕೀಯದಲ್ಲಿ ಒಂದು ಯುಗದ ಅಂತ್ಯವಾಗಿದ್ದು, ದೇಶಾದ್ಯಂತ ಬಿಎನ್‌ಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಕಂಬನಿ ಮಿಡಿಯುತ್ತಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement