
ಬೀಜಿಂಗ್/ಜಿನಾನ್: ವೈದ್ಯಕೀಯ ಲೋಕವೇ ಬೆರಗಾಗುವಂತಹ ವಿದ್ಯಮಾನವೊಂದರಲ್ಲಿ, ಚೀನಾದ ವೈದ್ಯರು ಅಪಘಾತದಲ್ಲಿ ಕತ್ತರಿಸಲ್ಪಟ್ಟ ಮಹಿಳೆಯ ಕಿವಿಯನ್ನು ಐದು ತಿಂಗಳ ಕಾಲ ಆಕೆಯ ಕಾಲಿನಲ್ಲೇ ಜೀವಂತವಾಗಿರಿಸಿ, ನಂತರ ಅದನ್ನು ತಲೆಯಲ್ಲಿ ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ ಎಂದು ವರದಿಯಾಗಿದ್ದು, ಮೈಕ್ರೋಸರ್ಜರಿ ಕ್ಷೇತ್ರದಲ್ಲಿ ಇದು ಜಗತ್ತಿನಲ್ಲೇ ಮೊಟ್ಟಮೊದಲ ಇಂತಹ ಯಶಸ್ವಿ ಪ್ರಯೋಗ ಎಂದು ಪರಿಗಣಿಸಲಾಗಿದೆ.
ಕಳೆದ ಏಪ್ರಿಲ್‌ನಲ್ಲಿ ‘ಸನ್’ ಎಂಬ ಹೆಸರಿನ ಮಹಿಳೆ ಕೆಲಸದ ಸ್ಥಳದಲ್ಲಿ ಕೆಲಸ ಮಾಡುವಾಗ ಯಂತ್ರೋಪಕರಣಗಳಿಗೆ ಸಿಲುಕಿ ತಮ್ಮ ಕಿವಿಯನ್ನು ಕಳೆದುಕೊಂಡಿದ್ದರು. ಈ ಅವಘಡದಲ್ಲಿ ಆಕೆಯ ಕಿವಿ ಸಂಪೂರ್ಣವಾಗಿ ಕತ್ತರಿಸಿಹೋಗಿದ್ದಲ್ಲದೆ, ತಲೆಬುರುಡೆ, ಕುತ್ತಿಗೆ ಮತ್ತು ಮುಖದ ಚರ್ಮಕ್ಕೂ ತೀವ್ರ ಹಾನಿಯಾಗಿತ್ತು. ತಕ್ಷಣವೇ ಅವರನ್ನು ಚೀನಾದ ಜಿನಾನ್ ನಗರದ ಶಾಂಡಾಂಗ್ ಪ್ರಾಂತ್ಯದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು.

ಕಾಲಿನ ಮೇಲೆ ಕಿವಿ ಬೆಳೆಸಿದ ವೈದ್ಯರು…!
ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಕ್ಯೂ ಶೆನ್ಕಿಯಾಂಗ್ ನೇತೃತ್ವದ ತಂಡವು ಮೊದಲು ಕಿವಿಯನ್ನು ನೇರವಾಗಿ ತಲೆಗೆ ಜೋಡಿಸಲು ಪ್ರಯತ್ನಿಸಿತು. ಆದರೆ, ಅಪಘಾತದ ತೀವ್ರತೆಯಿಂದಾಗಿ ಅಲ್ಲಿನ ರಕ್ತನಾಳಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು. ಹೀಗಾಗಿ ಕಿವಿಯನ್ನು ಬದುಕಿಸಿ ಇಡುವುದು ಅವರಿಗೆ ಸವಾಲಾಗಿ ಪರಿಣಮಿಸಿತ್ತು.
ಈ ವೇಳೆ ವಿಶಿಷ್ಟ ನಿರ್ಧಾರ ಕೈಗೊಂಡ ವೈದ್ಯರು, ಮಹಿಳೆಯ ಪಾದದ ಮೇಲೆ ಕಿವಿಯನ್ನು ಕಸಿ (Graft) ಮಾಡಿದರು. ಪಾದದ ರಕ್ತನಾಳಗಳು ಕಿವಿಯ ರಕ್ತನಾಳಗಳಿಗೆ ಹೊಂದಿಕೆಯಾಗುತ್ತಿದ್ದ ಕಾರಣ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಸುಮಾರು 10 ಗಂಟೆಗಳ ಕಾಲ ನಡೆದ ಸುದೀರ್ಘ ಶಸ್ತ್ರಚಿಕಿತ್ಸೆಯಲ್ಲಿ 0.2 ರಿಂದ 0.3 ಮಿ.ಮೀ ನಷ್ಟು ಕಾಲಿನ ಸಣ್ಣ ರಕ್ತನಾಳಗಳನ್ನು ಕಿವಿಗೆ ಜೋಡಿಸುವ ಮೂಲಕ ಕಿವಿಯನ್ನು ಕಾಲಿನಲ್ಲಿ ಜೀವಂತವಾಗಿರಿಸಲಾಯಿತು.
ಯಶಸ್ವಿ ಮರುಜೋಡಣೆ
ಮಧ್ಯದಲ್ಲಿ ರಕ್ತದ ಹರಿವು ನಿಂತು ಕಿವಿ ಕಪ್ಪಾಗತೊಡಗಿದಾಗ, ವೈದ್ಯರು ಸುಮಾರು 500 ಬಾರಿ ರಕ್ತಸ್ರಾವ ಪ್ರಕ್ರಿಯೆಯನ್ನು (Bloodletting) ನಡೆಸಿ ಕಿವಿಯನ್ನು ಕಾಪಾಡಿಕೊಂಡರು. ಈ ಐದು ತಿಂಗಳ ಅವಧಿಯಲ್ಲಿ ಮಹಿಳೆಯ ತಲೆಯ ಗಾಯಗಳನ್ನು ಗುಣಪಡಿಸಲಾಯಿತು.
ಅಕ್ಟೋಬರ್ ತಿಂಗಳಿನಲ್ಲಿ ನಡೆದ 6 ಗಂಟೆಗಳ ಅಂತಿಮ ಶಸ್ತ್ರಚಿಕಿತ್ಸೆಯಲ್ಲಿ, ಕಾಲಿನಿಂದ ಕಿವಿಯನ್ನು ಬೇರ್ಪಡಿಸಿ ಮಹಿಳೆಯ ತಲೆಗೆ ಯಶಸ್ವಿಯಾಗಿ ಮರುಜೋಡಿಸಲಾಯಿತು.
ಸದ್ಯ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕಿವಿ ತನ್ನ ಸಹಜ ಬಣ್ಣ ಮತ್ತು ಆಕಾರಕ್ಕೆ ಮರಳುತ್ತಿದ್ದಾರೆ. “ಮಹಿಳೆಯ ಮುಖದ ಸೌಂದರ್ಯ ಮತ್ತು ಅಂಗಾಂಶದ ಕಾರ್ಯಕ್ಷಮತೆಯನ್ನು ಬಹುತೇಕ ಮೊದಲಿನಂತೆಯೇ ಸರಿಪಡಿಸಲಾಗಿದೆ” ಎಂದು ವೈದ್ಯರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹುಬ್ಬು ಮತ್ತು ಪಾದದ ಮೇಲಿನ ಸಣ್ಣ ಗಾಯದ ಗುರುತುಗಳನ್ನು ಅಳಿಸಲು ಮತ್ತಷ್ಟು ಸಣ್ಣ ಶಸ್ತ್ರಚಿಕಿತ್ಸೆಗಳು ನಡೆಯಲಿವೆ.
ಇದನ್ನು ಆಧುನಿಕ ಶಸ್ತ್ರಚಿಕಿತ್ಸಾ ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲು ಎಂದು ಕರೆಯಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ