2027ರ ಆಗಸ್ಟ್ 15ಕ್ಕೆ ಭಾರತದ ಮೊದಲ ಬುಲೆಟ್ ರೈಲು ಉದ್ಘಾಟನೆ ; ಮಾರ್ಗ, ವೇಗ, ಇತರ ವಿವರಗಳು…

ಭಾರತದ ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಹೈಸ್ಪೀಡ್ ರೈಲು ಯೋಜನೆ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, 2027ರ ಆಗಸ್ಟ್ 15ರಂದು ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯು ಏಕಕಾಲಕ್ಕೆ ಪೂರ್ಣಗೊಳ್ಳುವ ಬದಲು ವಿವಿಧ ಹಂತಗಳಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಸೂರತ್‌ನಿಂದ ಬಿಲಿಮೋರಾ ವರೆಗಿನ ಮಾರ್ಗ ಮೊದಲು ಆರಂಭವಾಗಲಿದೆ. ಎರಡನೇ ಹಂತದಲ್ಲಿ ವಾಪಿ ಮತ್ತು ಸೂರತ್ ನಡುವಿನ ಸಂಚಾರ ಆರಂಭವಾಗಲಿದೆ. ಮೂರನೇ ಹಂತದಲ್ಲಿ ವಾಪಿಯಿಂದ ಅಹಮದಾಬಾದ್‌ವರೆಗೆ ವಿಸ್ತರಣೆಯಾಗಲಿದ್ದು,ನಾಲ್ಕನೇ ಹಂತದಲ್ಲಿ ಥಾಣೆಯಿಂದ ಅಹಮದಾಬಾದ್‌ವರೆಗೆ ಸಂಪರ್ಕವಾಗಲಿದೆ. ಹಾಗೂ ಅಂತಿಮ ಹಂತದಲ್ಲಿ ಸಂಪೂರ್ಣ ಮುಂಬೈ-ಅಹಮದಾಬಾದ್ ಕಾರಿಡಾರ್ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದಾರೆ.

ವಿಶೇಷವೆಂದರೆ, ಈ ಹಿಂದೆ ಕೇವಲ 50 ಕಿ.ಮೀ (ಸೂರತ್-ಬಿಲಿಮೋರಾ) ದೂರದ ಉದ್ಘಾಟನಾ ಸಂಚಾರಕ್ಕೆ ಯೋಜಿಸಲಾಗಿತ್ತು. ಆದರೆ ಈಗ ಸಚಿವರು, ಸೂರತ್ ಮತ್ತು ವಾಪಿ ನಡುವಿನ 100 ಕಿ.ಮೀ ಉದ್ದದ ಮಾರ್ಗದಲ್ಲಿ ಮೊದಲ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಒಟ್ಟು 508 ಕಿಲೋಮೀಟರ್ ದೂರ
ಈ ಹೈಸ್ಪೀಡ್‌ ಬುಲೆಟ್ ರೈಲು ಒಟ್ಟು 508 ಕಿಲೋಮೀಟರ್ ದೂರ ಕ್ರಮಿಸಲಿದೆ. ಗಂಟೆಗೆ 320 ಕಿ.ಮೀ ಗರಿಷ್ಠ ವೇಗದಲ್ಲಿ ರೈಲು ಚಲಿಸಲಿದೆ. ಸಂಪೂರ್ಣ ಕಾರಿಡಾರ್ ಆರಂಭವಾದ ನಂತರ, ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣ ಕೇವಲ 2 ಗಂಟೆ 17 ನಿಮಿಷಗಳಲ್ಲಿ ಇದು ಪ್ರಯಾಣಿಸಲಿದೆ. ಅಹಮದಾಬಾದ್‌ನ ಸಾಬರಮತಿಯಿಂದ ಮುಂಬೈವರೆಗೆ ಈ ರೈಲು ಸಂಚರಿಸಲಿದೆ.

ವಿಳಂಬಕ್ಕೆ ಕಾರಣವೇನು?
ಈ ಯೋಜನೆಯನ್ನು ಮೂಲತಃ 2017ರಲ್ಲಿ ಪ್ರಾರಂಭಿಸಲಾಗಿದ್ದು, 2023ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಕೆಲವು ತಾಂತ್ರಿಕ ಸವಾಲುಗಳಿಂದಾಗಿ ಯೋಜನೆಯ ಗಡುವನ್ನು 2027ಕ್ಕೆ ಮುಂದೂಡಲಾಗಿದೆ.
“ಹಂತ ಹಂತದ ಈ ಕ್ರಮದಿಂದಾಗಿ, ಮಾರ್ಗದ ಒಂದು ಭಾಗದಲ್ಲಿ ಕೆಲಸ ನಡೆಯುತ್ತಿದ್ದರೂ ಸಹ ಪೂರ್ಣಗೊಂಡಿರುವ ಉಳಿದ ಭಾಗಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯವಾಗುತ್ತದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಕ್ ಯುದ್ಧವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ವಾಯುಪಡೆಯಿಂದ ನಿವೃತ್ತಿ: ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರ್ಪಡೆ ; ವರದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement