ಜುವಾಜೈರೊ ದೊ ನಾರ್ಟೆ (ಬ್ರೆಜಿಲ್): ಪ್ರಾಣಿಗಳಿಗೆ ಭಾಷೆ ತಿಳಿಯದಿದ್ದರೂ, ನೋವಾದಾಗ ಎಲ್ಲಿಗೆ ಹೋಗಬೇಕು ಮತ್ತು ಯಾರನ್ನು ನಂಬಬೇಕು ಎಂಬ ಅರಿವು ಮನುಷ್ಯರಿಗಿಂತ ಹೆಚ್ಚಿರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬ್ರೆಜಿಲ್ನಲ್ಲಿ ಕುಂಟುತ್ತಾ ಬಂದ ಬೀದಿ ನಾಯಿಯೊಂದು ತಾನಾಗಿಯೇ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ (Veterinary Clinic) ಪ್ರವೇಶಿಸಿ ವೈದ್ಯರಿಂದ ಸಹಾಯ ಕೇಳಿದ ಅಪರೂಪದ ದೃಶ್ಯ ಈಗ ಜಗತ್ತಿನಾದ್ಯಂತ ವೈರಲ್ ಆಗಿದೆ.
ಇಲ್ಲಿನ ಪಶುವೈದ್ಯಕೀಯ ಕ್ಲಿನಿಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಪ್ರಕಾರ, ಈ ಬೀದಿ ನಾಯಿಯು ಯಾರದೇ ಸಹಾಯವಿಲ್ಲದೆ ತಾನಾಗಿಯೇ ಕ್ಲಿನಿಕ್ನ ಬಾಗಿಲು ಸರಿಸಿಕೊಂಡು ಒಳಬಂದಿದೆ. ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಈ ನಾಯಿಯನ್ನು ಗಮನಿಸುವ ಮೊದಲೇ, ಅದು ನೇರವಾಗಿ ಪಶುವೈದ್ಯರ ಬಳಿಗೆ ಸಾಗಿದೆ.
ಮೂಕ ಪ್ರಾಣಿಯ ಮನವಿ
ಕ್ಲಿನಿಕ್ನ ಒಳಬಂದ ನಾಯಿಯನ್ನು ಪಶುವೈದ್ಯರಾದ ಡೇಯ್ಸ್ ಸಿಲ್ವಾ (Dayse Silva) ಅವರು ಗಮನಿಸಿದಾಗ, ಅದು ನೋವಿನಿಂದ ಕುಂಟುತ್ತಿರುವುದು ಕಂಡುಬಂದಿದೆ. ಕುಳಿತುಕೊಳ್ಳುವ ಮೊದಲೇ ಅದು ತನ್ನ ನೋವಿನ ಪಂಜವನ್ನು (Paw) ವೈದ್ಯರ ಕಡೆಗೆ ಚಾಚಿದೆ. ಈ ದೃಶ್ಯವು ನೋಡುವವರ ಕಣ್ಣಾಲಿಗಳನ್ನು ಒದ್ದೆ ಮಾಡುವಂತಿದ್ದು, ತನಗೆ ಚಿಕಿತ್ಸೆ ನೀಡಿ ಎಂದು ಮನುಷ್ಯರಂತೆ ವಿನಂತಿಸುತ್ತಿರುವಂತೆ ಭಾಸವಾಗುತ್ತಿತ್ತು.
ಪರೀಕ್ಷೆಯಲ್ಲಿ ಬಯಲಾದ ಕಠೋರ ಸತ್ಯ:
ಮೇಲ್ನೋಟಕ್ಕೆ ಪಂಜದ ಗಾಯದಂತೆ ಕಂಡರೂ, ವೈದ್ಯರು ಆ ನಾಯಿಯನ್ನು ವಿಸ್ತೃತವಾಗಿ ಪರೀಕ್ಷಿಸಿದಾಗ ಬೆಚ್ಚಿಬೀಳುವ ವಿಷಯವೊಂದು ಬೆಳಕಿಗೆ ಬಂದಿದೆ. ಆ ನಾಯಿಗೆ ಕ್ಯಾನ್ಸರ್ ಗಡ್ಡೆ (Cancerous Tumor) ಇರುವುದು ಪತ್ತೆಯಾಗಿದೆ. ಗಾಯದ ನೋವಿನ ಜೊತೆಗೆ ಕ್ಯಾನ್ಸರ್ನಂತಹ ಮಾರಕ ಕಾಯಿಲೆಯಿಂದ ಆ ಪ್ರಾಣಿ ಬಳಲುತ್ತಿತ್ತು.
ವೈದ್ಯೆ ಡೇಯ್ಸ್ ಸಿಲ್ವಾ ಮತ್ತು ಅವರ ತಂಡ ಆ ನಾಯಿಯ ಮೇಲೆ ವಿಶೇಷ ಕಾಳಜಿ ವಹಿಸಿ ತಕ್ಷಣವೇ ಚಿಕಿತ್ಸೆಯನ್ನು ಪ್ರಾರಂಭಿಸಿದೆ. ಸದ್ಯ ಆ ನಾಯಿಗೆ ಕೀಮೋಥೆರಪಿ (Chemotherapy) ನೀಡಲಾಗುತ್ತಿದ್ದು, ಅದು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ಅಷ್ಟು ನೋವಿನಲ್ಲಿದ್ದರೂ ಸಹ, ನಾಯಿಯು ಯಾವುದೇ ಭಯವಿಲ್ಲದೆ ಅತ್ಯಂತ ಶಾಂತವಾಗಿ ಮತ್ತು ವೈದ್ಯರನ್ನು ನಂಬಿ ಚಿಕಿತ್ಸೆ ಪಡೆಯುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
“ಇತರ ಪ್ರಾಣಿಗಳು ಇರುವ ವಾಸನೆ ಅಥವಾ ಸದ್ದು ಕೇಳಿ ಇಲ್ಲಿ ಸಹಾಯ ಸಿಗುತ್ತದೆ ಎಂಬ ನಂಬಿಕೆಯಿಂದಲೇ ಈ ನಾಯಿ ಆಸ್ಪತ್ರೆಗೆ ಬಂದಿರಬಹುದು” ಎಂದು ವೈದ್ಯೆ ಡೇಯ್ಸ್ ಸಿಲ್ವಾ ಅಭಿಪ್ರಾಯಪಟ್ಟಿದ್ದಾರೆ.
ಸದ್ಯಕ್ಕೆ ಆಸ್ಪತ್ರೆಯಲ್ಲೇ ಆಶ್ರಯ ಪಡೆದಿರುವ ಈ ನಾಯಿಯು ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖವಾದ ನಂತರ, ಅದಕ್ಕೆ ಪ್ರೀತಿಯಿಂದ ಸಾಕುವಂತಹ ಒಂದು ಕಾಯಂ ಮನೆ (Forever Home) ಹುಡುಕಿಕೊಡಲು ಕ್ಲಿನಿಕ್ ನಿರ್ಧರಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ