ವಾಷಿಂಗ್ಟನ್/ನವದೆಹಲಿ: 2025ರ ಮೇ ತಿಂಗಳಲ್ಲಿ ನಡೆದ ‘ಆಪರೇಷನ್ ಸಿಂಧೂರ’ (Operation Sindoor) ವೇಳೆ ಭಾರತೀಯ ಸೇನೆಯು ನಡೆಸಿದ ಭೀಕರ ದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಡೆಯಲು ಅಮೆರಿಕಾದಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ಲಾಬಿ ರೂಪಿಸಿತ್ತು ಎಂಬ ವಿಷಯ ಈಗ ಹೊರಬಿದ್ದಿದೆ.
ಅಮೆರಿಕಾ ಸರ್ಕಾರದ ಇತ್ತೀಚಿನ ದಾಖಲೆಗಳ ಪ್ರಕಾರ, ಭಾರತದ ಸೈನಿಕ ಕಾರ್ಯಾಚರಣೆಯನ್ನು ಹೇಗಾದರೂ ಮಾಡಿ ತಡೆಹಿಡಿಯಲು ಪಾಕಿಸ್ತಾನವು ಅಮೆರಿಕಾದಲ್ಲಿ ‘ಲಾಬಿ’ (Lobbying) ನಡೆಸಲು ಕೋಟ್ಯಂತರ ರೂಪಾಯಿ ಹಣವನ್ನು ಸುರಿದಿದೆ ಎಂದು ತಿಳಿದುಬಂದಿದೆಎಂದು ಎನ್‌ಡಿಟಿವಿ ವರದಿ ಮಾಡಿದೆ.
ವರದಿಗಳ ಪ್ರಕಾರ, ಅಮೆರಿಕದ ಸಂಸದರು, ರಕ್ಷಣಾ ಅಧಿಕಾರಿಗಳು ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಪಾಕಿಸ್ತಾನದ ಅಧಿಕಾರಿಗಳು 60ಕ್ಕೂ ಹೆಚ್ಚು ಬಾರಿ ರಹಸ್ಯ ಸಭೆ ನಡೆಸಿದ್ದಾರೆ.ಅಮೆರಿಕಾದ ಪ್ರಭಾವಿ ಲಾಬಿ ಸಂಸ್ಥೆಗಳೊಂದಿಗೆ ಪಾಕಿಸ್ತಾನವು ಸುಮಾರು 5 ಮಿಲಿಯನ್ ಡಾಲರ್ (ಅಂದಾಜು 41 ಕೋಟಿ ರೂ.) ಮೊತ್ತದ ಒಪ್ಪಂದ ಮಾಡಿಕೊಂಡಿದೆ ಎಂದು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ ಎಂದು ಎನ್‌ಡಿಟಿವಿ ವರದಿ ಉಲ್ಲೇಖಿಸಿದೆ. ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ನಡೆಸುತ್ತಿದ್ದ ‘ಆಪರೇಷನ್ ಸಿಂಧೂರ’ ಅನ್ನು ನಿಲ್ಲಿಸಲು ಅಮೆರಿಕಾ ಮಧ್ಯಪ್ರವೇಶಿಸುವಂತೆ ಒತ್ತಡ ಹೇರುವುದು ಇದರ ಉದ್ದೇಶವಾಗಿತ್ತು.
ಈ ಅವಧಿಯಲ್ಲಿ ಲಾಬಿಗಾಗಿ ಪಾಕಿಸ್ತಾನವು ಭಾರತಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ವ್ಯಯಿಸಿದೆ ಎಂದು ವರದಿಯಾಗಿದೆ.
ಶರಣಾಗತಿಯ ಅಂಚಿನಲ್ಲಿದ್ದ ಪಾಕಿಸ್ತಾನ
ಏಪ್ರಿಲ್ 2025 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರೇರಿತ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತವು ‘ಆಪರೇಷನ್ ಸಿಂಧೂರ’ ಆರಂಭಿಸಿತ್ತು.ಪಹಲ್ಗಾಮ್ ದಾಳಿಗೆ ಭಾರತದ ಪ್ರತಿದಾಳಿ ನಡೆಸಿದ್ದ ಭಾರತೀಯ ವಾಯುಪಡೆ ಮತ್ತು ಸೇನೆಯು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸುತ್ತಿದ್ದಾಗ, ಪಾಕಿಸ್ತಾನವು ದಿಕ್ಕಿಲ್ಲದಂತಾಗಿತ್ತು.
NDTV ಪರಿಶೀಲಿಸಿದ ಅಮೆರಿಕಾದ FARA (Foreign Agents Registration Act) ದಾಖಲೆಗಳ ಪ್ರಕಾರ, ಪಾಕಿಸ್ತಾನದ ರಾಯಭಾರಿಗಳು ಮತ್ತು ರಕ್ಷಣಾ ಅಧಿಕಾರಿಗಳು ವಾಷಿಂಗ್ಟನ್‌ನಲ್ಲಿ ಬೀಡುಬಿಟ್ಟಿದ್ದರು. ಭಾರತದ ಸೇನಾ ಬಲವನ್ನು ಎದುರಿಸಲಾಗದೆ, “ಹೇಗಾದರೂ ಮಾಡಿ ಭಾರತವನ್ನು ತಡೆಯಿರಿ” ಎಂದು ಅಮೆರಿಕಾದ ಶ್ವೇತಭವನ, ಪೆಂಟಗನ್ ಮತ್ತು ವಿದೇಶಾಂಗ ಇಲಾಖೆಯ ಮೊರೆ ಹೋಗಿದ್ದರು.
ಈ ಸಂಪರ್ಕವು ಅಮೆರಿಕ ಕಾಂಗ್ರೆಸ್, ಪೆಂಟಗನ್, ವಿದೇಶಾಂಗ ಇಲಾಖೆ ಮತ್ತು ಅಮೆರಿಕದ ಪ್ರಮುಖ ಪತ್ರಕರ್ತರನ್ನು ಒಳಗೊಂಡಿತ್ತು. ಪಾಕಿಸ್ತಾನಿ ಪ್ರತಿನಿಧಿಗಳು ಕಾಶ್ಮೀರ, ಪ್ರಾದೇಶಿಕ ಭದ್ರತೆ, ಅಪರೂಪದ ಭೂಮಿಯ ಖನಿಜಗಳು ಮತ್ತು ವಿಶಾಲ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು, ಜೊತೆಗೆ ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಗಳ ಜೊತೆ ಸಂದರ್ಶನಗಳು ಮತ್ತು ಹಿನ್ನೆಲೆ ಸಂಕ್ಷಿಪ್ತ ವಿವರಣೆಗಳನ್ನು ಕೋರಿದರು.
ದಾಖಲೆಗಳ ಪ್ರಕಾರ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಭೆ ನಡೆಸಲು ಈ ಲಾಬಿ ಸಂಸ್ಥೆಗಳನ್ನು ಬಳಸಿಕೊಂಡಿದ್ದರು. ಭಾರತದ ವಿರುದ್ಧ ಅಮೆರಿಕಾ ಕಠಿಣ ನಿಲುವು ತಳೆಯುವಂತೆ ಮಾಡಲು ಪಾಕಿಸ್ತಾನವು ಅಮೆರಿಕಾದ ಪ್ರಮುಖ ಪತ್ರಕರ್ತರನ್ನು ಸಹ ಸಂಪರ್ಕಿಸಿತ್ತು ಎಂಬುದು ಈಗ ದೃಢಪಟ್ಟಿದೆ.
ಪಾಕಿಸ್ತಾನದ ಹತಾಶೆ – ಅಂಕಿ ಅಂಶಗಳಲ್ಲಿ:
ಒಟ್ಟು ಸಭೆಗಳು : 60+ (ಅಧಿಕಾರಿಗಳು ಮತ್ತು ಸಂಸದರೊಂದಿಗೆ)
ಒಪ್ಪಂದ ಮಾಡಿಕೊಂಡ ಸಂಸ್ಥೆಗಳು : 6 ಪ್ರಮುಖ ಲಾಬಿ ಸಂಸ್ಥೆಗಳು
ವಾರ್ಷಿಕ ವೆಚ್ಚ : 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂ.)
ಪ್ರಮುಖ ವ್ಯಕ್ತಿಗಳು : ಪಾಕಿಸ್ತಾನದ ರಾಯಭಾರಿ ಮತ್ತು ಡಿಫೆನ್ಸ್ ಅಟ್ಯಾಚೆ
ಆಪರೇಷನ್ ಸಿಂಧೂರ….
2025ರ ಮೇ ತಿಂಗಳಲ್ಲಿ ಪಾಕಿಸ್ತಾನದ ಗಡಿಯೊಳಗೆ ಭಾರತ ನಡೆಸಿದ ಅತ್ಯಂತ ದೊಡ್ಡ ಸೇನಾ ಕಾರ್ಯಾಚರಣೆ ಇದಾಗಿದೆ. ಇದರಲ್ಲಿ ಭಾರತದ ಸುಖೋಯ್ ಮತ್ತು ರಫೇಲ್ ಯುದ್ಧ ವಿಮಾನಗಳು ಪಾಕಿಸ್ತಾನದ ವಾಯುಪಡೆಯನ್ನು ಸಮರ್ಥವಾಗಿ ಎದುರಿಸಿದ್ದವು. ಈ ಯುದ್ಧದ ಸಮಯದಲ್ಲಿ ಪಾಕಿಸ್ತಾನವು ತನ್ನ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಭಾರತದ ವಿರುದ್ಧ ಪ್ರಚಾರ ನಡೆಸಲು ಅಮೆರಿಕಾದಲ್ಲಿ ಹಣ ಸುರಿದಿರುವುದು ಅದರ ಹತಾಶೆಯನ್ನು ತೋರಿಸುತ್ತದೆ.
ಈ ವರದಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮುಖವಾಡವನ್ನು ಮತ್ತೊಮ್ಮೆ ಕಳಚಿದಂತಾಗಿದೆ. ಭಾರತದ ವಿದೇಶಾಂಗ ಇಲಾಖೆಯು ಈ ದಾಖಲೆಗಳ ಕುರಿತು ಅಧಿಕೃತ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ