
ನವದೆಹಲಿ: ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಗೆ ಒತ್ತು ನೀಡುತ್ತಿರುವ ಬೆನ್ನಲ್ಲೇ, ಭಾರತವು ಇಸ್ರೇಲ್‌ನೊಂದಿಗೆ ಸುಮಾರು 8.7 ಬಿಲಿಯನ್ ಡಾಲರ್ (ಅಂದಾಜು ₹78,217 ಕೋಟಿ) ಮೌಲ್ಯದ ಬೃಹತ್ ರಕ್ಷಣಾ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ. ಈ ಒಪ್ಪಂದದ ಮೂಲಕ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ನಿಖರ ದಾಳಿಯ ಬಾಂಬ್‌ಗಳನ್ನು ಪಡೆಯುವ ಮೂಲಕ ಭಾರತೀಯ ವಾಯುಪಡೆ (IAF) ತನ್ನ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (DAC) ಈಗಾಗಲೇ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಪೂರ್ವ ಮತ್ತು ಪಶ್ಚಿಮ ಗಡಿಗಳಲ್ಲಿ ಭದ್ರತಾ ಸವಾಲುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಒಪ್ಪಂದದ ಪ್ರಮುಖ ಶಸ್ತ್ರಾಸ್ತ್ರಗಳು:
ಈ ಪ್ಯಾಕೇಜ್‌ನಲ್ಲಿ ವಾಯುಪಡೆಯ ಬತ್ತಳಿಕೆಗೆ ಪ್ರಮುಖವಾಗಿ ಸೇರಲಿರುವ ಶಸ್ತ್ರಾಸ್ತ್ರಗಳೆಂದರೆ
ಸ್ಪೈಸ್-1000 (SPICE-1000): ಅತ್ಯಂತ ನಿಖರವಾಗಿ ಗುರಿ ತಲುಪುವ ಬಾಂಬ್‌ಗಳು.
ರ‍್ಯಾಂಪೇಜ್ (Rampage): ಭೂಮಿಯ ಮೇಲಿನ ಗುರಿಗಳನ್ನು ಧ್ವಂಸ ಮಾಡುವ ಕ್ಷಿಪಣಿಗಳು.
ಏರ್ ಲೋರಾ (Air LORA): ವಿಮಾನದಿಂದ ಉಡಾವಣೆ ಮಾಡಬಹುದಾದ ಬ್ಯಾಲಿಸ್ಟಿಕ್ ಕ್ಷಿಪಣಿ.
ಐಸ್ ಬ್ರೇಕರ್ (Ice Breaker): ಎಲೆಕ್ಟ್ರಾನಿಕ್ ಯುದ್ಧದ ಸಂದರ್ಭದಲ್ಲೂ ಕಾರ್ಯನಿರ್ವಹಿಸುವ ಸುಧಾರಿತ ಕ್ಷಿಪಣಿ ವ್ಯವಸ್ಥೆ.
ಈ ಶಸ್ತ್ರಾಸ್ತ್ರಗಳನ್ನು ಸುಖೋಯ್ (Su-30MKI) ಮತ್ತು ಮಿಗ್-29K ನಂತಹ ಮುಂಚೂಣಿ ಯುದ್ಧ ವಿಮಾನಗಳಲ್ಲಿ ಅಳವಡಿಸುವುದರಿಂದ, ಭಾರತದ ಸೇನೆಗೆ ಶತ್ರು ರಾಷ್ಟ್ರದ ಒಳಭಾಗಕ್ಕೆ ನುಗ್ಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಈ ಕ್ಷಿಪಣಿಗಳ ವಿಶೇಷತೆ ಏನು?
ರ‍್ಯಾಂಪೇಜ್ ಕ್ಷಿಪಣಿ: ಈಗಾಗಲೇ ವಾಯುಪಡೆ ಮತ್ತು ನೌಕಾಪಡೆಯ ಬಳಿ ಇರುವ ಈ ಕ್ಷಿಪಣಿ, ಸುಮಾರು 570 ಕೆಜಿ ತೂಕವಿದ್ದು, ಶತ್ರುಗಳ ಬಂಕರ್ ಮತ್ತು ವಾಯುನೆಲೆಗಳನ್ನು ಧ್ವಂಸ ಮಾಡಬಲ್ಲದು. ಜಿಪಿಎಸ್ ಜಾಮಿಂಗ್ ತಂತ್ರಜ್ಞಾನವನ್ನೂ ಇದು ಮೆಟ್ಟಿ ನಿಲ್ಲುತ್ತದೆ.
ಏರ್ ಲೋರಾ: ಹೈಪರ್‌ಸಾನಿಕ್ ವೇಗದಲ್ಲಿ (ಮ್ಯಾಕ್ 5) ಚಲಿಸುವ ಇದು, 400-430 ಕಿಮೀ ದೂರದ ಗುರಿಯನ್ನು ನಿಖರವಾಗಿ ತಲುಪುತ್ತದೆ. ಇದನ್ನು ಭಾರತದ ಬಿಇಎಲ್ (BEL) ಸಂಸ್ಥೆಯು ಇಸ್ರೇಲ್ ಸಹಯೋಗದೊಂದಿಗೆ ದೇಶದಲ್ಲೇ ತಯಾರಿಸುತ್ತಿದೆ.
ಐಸ್ ಬ್ರೇಕರ್: ರಫೇಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಅಭಿವೃದ್ಧಿಪಡಿಸಿರುವ ಇದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ರಾಡಾರ್‌ಗಳ ಕಣ್ಣಿಗೆ ಬೀಳದಂತೆ ಅತಿ ಕಡಿಮೆ ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.
‘ಆತ್ಮನಿರ್ಭರ ಭಾರತ’ಕ್ಕೆ ಬಲ
ಈ ಒಪ್ಪಂದದ ಅಡಿಯಲ್ಲಿ 2025ರ ಅಂತ್ಯದ ವೇಳೆಗೆ ತಂತ್ರಜ್ಞಾನ ವರ್ಗಾವಣೆ (Transfer of Technology) ನಡೆಯಲಿದೆ. ಇದರನ್ವಯ ಎಚ್‌ಎಎಲ್ (HAL) ಮತ್ತು ಬಿಇಎಲ್ (BEL) ಸಂಸ್ಥೆಗಳು ಈ ಕ್ಷಿಪಣಿಗಳನ್ನು ಭಾರತದಲ್ಲೇ ತಯಾರಿಸಲಿವೆ. ಇದು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ’ ಯೋಜನೆಗೆ ಪೂರಕವಾಗಿದೆ.
2020 ರಿಂದ 2024ರ ಅವಧಿಯಲ್ಲಿ ಇಸ್ರೇಲ್‌ನ ಒಟ್ಟು ರಕ್ಷಣಾ ರಫ್ತಿನ ಶೇ. 34ರಷ್ಟು ಭಾಗವನ್ನು ಭಾರತವೇ ಖರೀದಿಸಿದೆ. ಈ ಹೊಸ ಒಪ್ಪಂದವು 2026ರ ಮಧ್ಯಭಾಗದಲ್ಲಿ ಅಂತಿಮ ಹಂತ ತಲುಪುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ