
ಶ್ರೀನಗರ/ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣ ರೇಖೆಯ (LoC) ಬಳಿ ಭಾನುವಾರ ಸಂಜೆ ಭಾರತೀಯ ಸೇನೆಯು ಪಾಕಿಸ್ತಾನಿ ಡ್ರೋನ್ ಒಂದರ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಇನ್ನೂ ಹಲವಾರು ಡ್ರೋನ್‌ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಕತ್ತಲ ಆಕಾಶದಲ್ಲಿ ಹಾರುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಲು ಸೇನೆಯು ನಡೆಸಿದ ಗುಂಡಿನ ದಾಳಿಯ ವೀಡಿಯೊ ಲಭ್ಯವಾಗಿದ್ದು, ಇದು ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರʼ (Operation Sindoor) ಕಾರ್ಯಾಚರಣೆಯನ್ನು ನೆನಪಿಸುವಂತಿದೆ.
ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಅಥವಾ ಮಾದಕ ವಸ್ತುಗಳನ್ನು ಬೀಳಿಸಲಾಗಿದೆಯೇ ಎಂದು ಪರಿಶೀಲಿಸಲು ಸೇನೆಯು ಇಡೀ ಪ್ರದೇಶದಲ್ಲಿ ಶೋಧ ನಡೆಸುತ್ತಿದೆ. ನಿನ್ನೆಯಷ್ಟೇ ಸಾಂಬಾ ಸೆಕ್ಟರ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಿಂದ (PoK) ಬಂದಿದ್ದ ಡ್ರೋನ್ ಒಂದು ಶಸ್ತ್ರಾಸ್ತ್ರಗಳನ್ನು ಎಸೆದು ಹೋಗಿತ್ತು.

ಭಾನುವಾರ ಸಂಜೆ 6:35ಕ್ಕೆ ರಾಜೌರಿ ಜಿಲ್ಲೆಯ ಕಲಾಕೋಟೆ ಬಳಿ ಒಂದು ಡ್ರೋನ್ ಪತ್ತೆಯಾಗಿದೆ. ಸಂಜೆ 7:15ಕ್ಕೆ ಸಾಂಬಾದ ರಾಮಗಢ ಸೆಕ್ಟರ್‌ನಲ್ಲಿ ಮಿನುಗುವ ಬೆಳಕಿನೊಂದಿಗೆ ಹಾರುತ್ತಿದ್ದ ಡ್ರೋನ್ ಪತ್ತೆಯಾಗಿದೆ.
ಸಂಜೆ 6:25ಕ್ಕೆ ಪೂಂಚ್ ಜಿಲ್ಲೆಯ ಮಂಕೋಟೆ ಸೆಕ್ಟರ್‌ನಲ್ಲಿ ಮತ್ತೊಂದು ಡ್ರೋನ್ ಕಂಡುಬಂದಿದೆ. ಭಾರತವು ‘ಆಪರೇಷನ್ ಸಿಂಧೂರ’ ಸಮಯದಲ್ಲಿ ಹಲವಾರು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು. ಆ ನಂತರ ಡ್ರೋನ್‌ಗಳ ಹಾವಳಿ ಕಡಿಮೆಯಾಗಿತ್ತು. ಆದರೆ, ಇಂದು ಒಂದೇ ದಿನದಲ್ಲಿ ಕನಿಷ್ಠ ಐದು ಬಾರಿ ಡ್ರೋನ್‌ಗಳು ಗಡಿ ದಾಟಿ ಬಂದಿರುವುದು ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಪಾಕಿಸ್ತಾನವು ಭಾರತದೊಳಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಮತ್ತು ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡಲು ಈ ಡ್ರೋನ್‌ಗಳನ್ನು ಬಳಸುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ