ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25 ಹೆಚ್ಚುವರಿ ಸುಂಕ ಹೇರಿದ ಟ್ರಂಪ್ ; ಭಾರತದ ಮೇಲೆ ಪರಿಣಾಮವೇನು ?

ವಾಷಿಂಗ್ಟನ್ /ನವದೆಹಲಿ : ಇರಾನ್‌ನ ಇಸ್ಲಾಮಿಕ್ ಆಡಳಿತದ ವಿರುದ್ಧ ಕಠಿಣ ನಿಲುವು ತಳೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜೊತೆ ವ್ಯಾಪಾರ ಸಂಬಂಧ ಹೊಂದಿರುವ ಯಾವುದೇ ದೇಶದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ (Tariff) ಹೇರುವುದಾಗಿ ಘೋಷಿಸಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಜನವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ಹಿಂಸಾಚಾರ ನಡೆಸುತ್ತಿರುವುದನ್ನು ವಿರೋಧಿಸಿ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.
ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಟ್ರಂಪ್, “ತಕ್ಷಣದಿಂದ ಜಾರಿಗೆ ಬರುವಂತೆ, ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವು ಅಮೆರಿಕದ ಜೊತೆ ನಡೆಸುವ ತನ್ನ ವ್ಯಾಪಾರದ ಮೇಲೆ ಶೇ. 25ರಷ್ಟು ಸುಂಕವನ್ನು ಪಾವತಿಸಬೇಕಾಗುತ್ತದೆ. ಇದು ಅಂತಿಮ ಮತ್ತು ನಿರ್ಣಾಯಕ ಆದೇ ಎಂದು ಹೇಳಿದ್ದಾರೆ.
ಇರಾನ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಸಾವಿರಾರು ಜನರನ್ನು ಬಂಧಿಸಲಾಗಿದೆ. ಈ ಹಿಂಸಾಚಾರವನ್ನು ಖಂಡಿಸಿರುವ ಅಮೆರಿಕ, ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸುವ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ. “ವಾಯು ದಾಳಿ (Air strikes) ಕೂಡ ನಮ್ಮ ಮುಂದಿರುವ ಹಲವು ಆಯ್ಕೆಗಳಲ್ಲಿ ಒಂದಾಗಿದೆ,” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಭಾರತದ ಮೇಲೆ ಇದರ ಪರಿಣಾಮವೇನು?
ಇರಾನ್‌ನ ಪ್ರಮುಖ ವ್ಯಾಪಾರಿ ಪಾಲುದಾರ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿರುವುದರಿಂದ, ಟ್ರಂಪ್ ಅವರ ಈ ನಿರ್ಧಾರ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಬಹುದು.
2024-25ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಇರಾನ್ ನಡುವೆ ಸುಮಾರು 1.68 ಬಿಲಿಯನ್ ಡಾಲರ್ (ಅಂದಾಜು ₹14,000 – ₹15,000 ಕೋಟಿ) ಮೊತ್ತದ ವ್ಯಾಪಾರ ನಡೆದಿದೆ. ಭಾರತವು ಇರಾನ್‌ಗೆ ಸಾವಯವ ರಾಸಾಯನಿಕಗಳು, ಅಕ್ಕಿ, ಮತ್ತು ಹಣ್ಣುಗಳನ್ನು ರಫ್ತು ಮಾಡುತ್ತದೆ.
ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕಾಗಿ ಭಾರತದ ಸರಕುಗಳ ಮೇಲೆ ಅಮೆರಿಕ ಈಗಾಗಲೇ ಶೇ. 50ರಷ್ಟು ಸುಂಕ ವಿಧಿಸಿದೆ. ಈಗ ಇರಾನ್ ವ್ಯವಹಾರದ ಕಾರಣಕ್ಕೆ ಮತ್ತೆ ಶೇ. 25ರಷ್ಟು ಸುಂಕ ಜಾರಿಯಾದರೆ, ಭಾರತದ ರಫ್ತುದಾರರು ಒಟ್ಟು ಶೇ. 75ರಷ್ಟು ಸುಂಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಬಹುದು.
ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ
ಟ್ರಂಪ್ ಅವರು ವಿಧಿಸುತ್ತಿರುವ ಈ ಜಾಗತಿಕ ಸುಂಕಗಳ ಕಾನೂನುಬದ್ಧತೆಯ ಬಗ್ಗೆ ಅಮೆರಿಕದ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡುವ ಸಾಧ್ಯತೆಯಿದೆ. ಒಂದು ವೇಳೆ ನ್ಯಾಯಾಲಯವು ಟ್ರಂಪ್ ಅವರ ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ತೀರ್ಪು ನೀಡಿದರೆ, ಇರಾನ್ ಪಾಲುದಾರ ದೇಶಗಳ ಮೇಲೆ ಸುಂಕ ಹೇರುವ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಬಹುದು.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement