ಅಂತ್ಯಸಂಸ್ಕಾರಕ್ಕೆ ತೆರಳಿದ್ದಾಗ 103ರ ಅಜ್ಜಿ ಎದ್ದು ಕುಳಿತರು…! ಕೇಕ್ ತಿಂದು ಜನ್ಮದಿನ ಆಚರಿಸಿಕೊಂಡರು…!!

ನಾಗ್ಪುರ: ಸಾವು ಎಂಬುದು ಅನಿವಾರ್ಯ, ಆದರೆ ಅನಿರೀಕ್ಷಿತವಾಗಿ ಸಾವು ಬಂದು ಮತ್ತೆ ಮರಳಿ ಹೋದರೆ? ಇಂತಹದ್ದೊಂದು ನಂಬಲಾಗದ ಪವಾಡ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ರಾಮ್ಟೆಕ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮನೆಯವರೆಲ್ಲ ಸೇರಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ, ಸತ್ತಿದ್ದಾರೆಂದು ಭಾವಿಸಲಾಗಿದ್ದ 103 ವರ್ಷದ ಮುತ್ತಜ್ಜಿ ದಿಢೀರನೆ ಉಸಿರಾಡಲು ಆರಂಭಿಸಿ ಎದ್ದು ಕುಳಿತು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದ್ದಾರೆ.
ರಾಮ್ಟೆಕ್ ನಿವಾಸಿ ಗಂಗಾಬಾಯಿ ಸಖಾರೆ (103) ಎಂಬುವವರು ಸೋಮವಾರ ಸಂಜೆ ದೇಹದ ಚಲನೆ ನಿಲ್ಲಿಸಿದ್ದರು. ವಯೋಸಹಜವಾಗಿ ಅವರು ಮೃತಪಟ್ಟಿದ್ದಾರೆಂದು ಭಾವಿಸಿದ ಕುಟುಂಬಸ್ಥರು ತೀವ್ರ ದುಃಖಕ್ಕೆ ಒಳಗಾದರು. ತಕ್ಷಣವೇ ಎಲ್ಲ ಸಂಬಂಧಿಕರಿಗೆ ವಿಷಯ ಮುಟ್ಟಿಸಿ, ಮುತ್ತಜ್ಜಿಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು.

ಅಂತಿಮ ಯಾತ್ರೆಗೆ ಸಜ್ಜಾಗಿದ್ದಾಗಲೇ ನಡೆಯಿತು ಪವಾಡ…!
ಮಂಗಳವಾರ ಬೆಳಿಗ್ಗೆ ಸಂಪ್ರದಾಯದಂತೆ ಗಂಗಾಬಾಯಿ ಅವರಿಗೆ ಹೊಸ ಸೀರೆ ಉಡಿಸಿ, ಕೈಕಾಲುಗಳನ್ನು ಕಟ್ಟಿ, ಮೂಗಿನಲ್ಲಿ ಹತ್ತಿ ಇಡಲಾಗಿತ್ತು. ದೂರದ ಊರುಗಳಿಂದ ಸಂಬಂಧಿಕರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದರು. ಸ್ಮಶಾನಕ್ಕೆ ದೇಹವನ್ನು ಕೊಂಡೊಯ್ಯಲು ಎಲ್ಲವೂ ಸಿದ್ಧವಾಗಿತ್ತು.
ಆದರೆ, ಅದೇ ಸಮಯದಲ್ಲಿ ಅಜ್ಜಿಯ ಮೊಮ್ಮಗ ರಾಕೇಶ ಸಖಾರೆ ಅವರಿಗೆ ಅಜ್ಜಿಯ ಕಾಲಿನ ಬೆರಳುಗಳು ಸ್ವಲ್ಪ ಚಲಿಸಿದಂತೆ ಕಂಡಿತು. ಕೂಡಲೇ ಅವರು ಮೂಗಿನಲ್ಲಿದ್ದ ಹತ್ತಿಯನ್ನು ತೆಗೆದಾಗ, ಗಂಗಾಬಾಯಿ ಅವರು ಜೋರಾಗಿ ಉಸಿರು ಬಿಟ್ಟರು..!

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಶೋಕದ ಮನೆಯಲ್ಲಿ ಸಂಭ್ರಮ
ಅಜ್ಜಿ ಬದುಕಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅಲ್ಲಿನ ವಾತಾವರಣವೇ ಬದಲಾಯಿತು. ಕಣ್ಣೀರು ಹಾಕುತ್ತಿದ್ದ ಕಣ್ಣುಗಳಲ್ಲಿ ಹರ್ಷ ಕಂಡುಬಂತು. ತಕ್ಷಣವೇ ಅಂತ್ಯಸಂಸ್ಕಾರಕ್ಕೆ ಹಾಕಿದ್ದ ಪೆಂಡಾಲ್ ಬಿಚ್ಚಲಾಯಿತು, ಸ್ಮಶಾನಕ್ಕೆ ದೇಹ ಒಯ್ಯಲು ತರಿಸಿದ್ದ ವಾಹನವನ್ನು ವಾಪಸ್ ಕಳುಹಿಸಲಾಯಿತು.
ಕಾಕತಾಳೀಯ: ಅಂದೇ ಅಜ್ಜಿಯ 103ನೇ ಜನ್ಮದಿನ…!
ಈ ಪವಾಡದ ನಡುವೆ ಮತ್ತೊಂದು ವಿಶೇಷತೆಯೂ ಬೆಳಕಿಗೆ ಬಂದಿದೆ. ಅಂದು ಗಂಗಾಬಾಯಿ ಅವರ 103ನೇ ಜನ್ಮದಿನವಾಗಿತ್ತು. ಸಾವಿನ ಮನೆಯಾಗಬೇಕಿದ್ದ ತಾಣದಲ್ಲಿ ಜನ್ಮದಿನದ ಸಂಭ್ರಮ ಮನೆಮಾಡಿತು. ಅಂತಿಮ ದರ್ಶನಕ್ಕೆ ಬಂದವರು ಅಜ್ಜಿಗೆ ಕೇಕ್ ತಿನ್ನಿಸಿ ಶುಭ ಕೋರಿದರು.
ಗಂಗಾಬಾಯಿ ಅವರದ್ದು ಮರುಜನ್ಮ, ಅವರು ಸಾಕ್ಷಾತ್ ಪವಾಡ ಎಂದು ಗ್ರಾಮಸ್ಥರು ಬಣ್ಣಿಸಿದ್ದಾರೆ. ಸದ್ಯ ಈ ಸುದ್ದಿ ನಾಗ್ಪುರ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಸತ್ತ ವ್ಯಕ್ತಿ ಮರಳಿ ಬಂದಿದ್ದನ್ನು ನೋಡಲು ನೆರೆಹೊರೆಯ ಹಳ್ಳಿಗಳಿಂದ ಜನರು ಸಾಲು ಸಾಲಾಗಿ ಬರುತ್ತಿದ್ದಾರೆ. ಅಜ್ಜಿ ಈಗ ಆರೋಗ್ಯವಾಗಿದ್ದು, ಕುಟುಂಬದವರೊಂದಿಗೆ ಸಂತೋಷದಿಂದಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement