ತಾಯಿಯ ಕೈಯಲ್ಲಿದ್ದ 20 ದಿನದ ಶಿಶುವನ್ನು ಹೊತ್ತೊಯ್ದು ಬಾವಿಗೆ ಎಸೆದ ಮಂಗ ; ಮಗುವನ್ನು ಕಾಪಾಡಿದ ಡೈಪರ್‌…!

ರಾಯ್ಪುರ: ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯ ಸೆವ್ನಿ ಗ್ರಾಮದಲ್ಲಿ ಮೈಮನ ಜುಂ ಎನಿಸುವ ಘಟನೆಯೊಂದು ನಡೆದಿದೆ. ಮಂಗವೊಂದು ತಾಯಿಯ ಮಡಿಲಲ್ಲಿದ್ದ 20 ದಿನದ ಹಸುಗೂಸನ್ನು ಹೊತ್ತೊಯ್ದು ಬಾವಿಗೆ ಎಸೆದಿತ್ತು,  ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ನರ್ಸ್ ಒಬ್ಬರ ಸಮಯೋಚಿತ ಚಿಕಿತ್ಸೆಯಿಂದ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ.
 ಬುಧವಾರ ಸುನೀತಾ ರಾಥೋಡ ಎಂಬ ಮಹಿಳೆ ತಮ್ಮ 20 ದಿನದ ಹೆಣ್ಣು ಮಗುವಿನೊಂದಿಗೆ ಮನೆಯ ಹೊರಗೆ ಕುಳಿತಿದ್ದರು. ಈ ವೇಳೆ ಹತ್ತಿರದ ಮನೆಯ ಛಾವಣಿಯ ಮೇಲಿದ್ದ ಮಂಗಗಳ ಹಿಂಡಿನಲ್ಲೊಂದು ಮಂಗ ಏಕಾಏಕಿ ಕೆಳಗೆ ಜಿಗಿದು, ತಾಯಿಯ ಕೈಯಲ್ಲಿದ್ದ ಮಗುವನ್ನು ಕಿತ್ತುಕೊಂಡು ಓಡಿದೆ.
ತಕ್ಷಣವೇ ಎಚ್ಚೆತ್ತ ಮನೆಯವರು ಮತ್ತು ಗ್ರಾಮಸ್ಥರು ಮಗುವನ್ನು ಉಳಿಸಿಕೊಳ್ಳಲು ಕೂಗಾಡುತ್ತಾ, ಪಟಾಕಿಗಳನ್ನು ಸಿಡಿಸಿ ಮಂಗನನ್ನು ಹೆದರಿಸಲು ಯತ್ನಿಸಿದ್ದಾರೆ.
ಜನರ ಕೂಗಾಟದಿಂದ ಗಾಬರಿಗೊಂಡ ಮಂಗ, ಮಗುವನ್ನು ಮನೆಯ ಹತ್ತಿರದಲ್ಲೇ ಇದ್ದ ತೆರೆದ ಬಾವಿಯೊಳಗೆ ಎಸೆದು ಪರಾರಿಯಾಗಿದೆ. ತಕ್ಷಣ ಧಾವಿಸಿದ ಗ್ರಾಮಸ್ಥರು ಬಕೆಟ್ ಸಹಾಯದಿಂದ ಮಗುವನ್ನು ಮೇಲೆತ್ತಿದ್ದಾರೆ. ಮಗು ಸ್ವಲ್ಪ ನೀರನ್ನು ಕುಡಿದಿದ್ದರೂ, ಪೂರ್ಣವಾಗಿ ಮುಳುಗಿರಲಿಲ್ಲ. “ಮಗು ಧರಿಸಿದ್ದ ಡೈಪರ್ (Diaper) ಮಗು ನೀರಿನ ಮೇಲೆ ತೇಲಲು ಸಹಾಯ ಮಾಡಿರಬಹುದು, ಅದು ನಮಗೆ ರಕ್ಷಿಸಲು ಸಮಯ ನೀಡಿತು” ಎಂದು ಮಗುವಿನ ತಂದೆ ಅರವಿಂದ ರಾಥೋಡ ತಿಳಿಸಿದ್ದಾರೆ.
ದೇವದೂತಳಂತೆ ಬಂದ ನರ್ಸ್: ಜೀವ ಉಳಿಸಿದ ಸಿಪಿಆರ್ (CPR)
ಮಗುವನ್ನು ಬಾವಿಯಿಂದ ಮೇಲೆತ್ತಿದಾಗ ಅದು ಉಸಿರಾಡುತ್ತಿರಲಿಲ್ಲ. ಅದೇ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ರಾಜೇಶ್ವರಿ ರಾಥೋಡ ಅವರು ವಿಷಯ ಗೊತ್ತಾಗಿ ತಕ್ಷಣ ಸ್ಥಳಕ್ಕೆ ಧಾವಿಸಿದರು. ಅವರು ಮಗುವಿನ ಬಾಯಲ್ಲಿದ್ದ ನೀರನ್ನು ತೆಗೆದು, ತಕ್ಷಣವೇ ಸಿಪಿಆರ್ (CPR) ಚಿಕಿತ್ಸೆ ನೀಡಿ ಮಗುವಿನ ದೇಹವನ್ನು ಬೆಚ್ಚಗಾಗಿಸಿದರು. ಕೆಲವೇ ಕ್ಷಣಗಳಲ್ಲಿ ಮಗು ಅಳಲು ಪ್ರಾರಂಭಿಸಿತು. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಗು ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
“ನನ್ನ ಮಗಳು ಇಂದು ಬದುಕಿದ್ದಾಳೆ ಎಂದರೆ ಅದಕ್ಕೆ ನರ್ಸ್ ಅವರ ಸಮಯೋಚಿತ ಚಿಕಿತ್ಸೆ ಮತ್ತು ಮಗು ಧರಿಸಿದ್ದ ಡೈಪರ್ ಕಾರಣ. ಇದು ನಿಜಕ್ಕೂ ಒಂದು ಪವಾಡ,” ಎಂದು ಮಗುವಿನ ತಂದೆ ಭಾವುಕರಾಗಿ ನುಡಿದಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement