ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ನಡೆದ ಫಾರ್ಮಾಸಿಸ್ಟ್ ರಾಜೀವ ಪಿಕ್ಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಮಾಡಿದ ಆರೋಪದ ಮೇಲೆ ಅಂಕೋಲಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆಎಂದು ವರದಿಯಾಗಿದೆ.
ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ, ಹರಿಶ್ಚಂದ್ರ ಮತ್ತು ಅನಿಲ ಎಂಬವರು ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಕಾರವಾರದ ಪಿಕ್ಳೆ ನರ್ಸಿಂಗ್ ಹೋಮ್ನಲ್ಲಿ ಫಾರ್ಮಾಸಿಸ್ಟ್ ಆಗಿದ್ದ ರಾಜೀವ ಅವರು ಕಳೆದ ಶುಕ್ರವಾರ ಅವರ್ಸಾದ ತಮ್ಮ ನಿವಾಸದಲ್ಲಿ ಡಬಲ್ ಬ್ಯಾರೆಲ್ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಇಡೀ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಸುಮಾರು ಎರಡು ವಾರಗಳ ಹಿಂದೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ರಾಜೀವ ಅವರು ರೋಗಿಯೊಬ್ಬರಿಗೆ ಅವಧಿ ಮುಗಿದ (Expired) ಮಾತ್ರೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಸಾರ್ವಜನಿಕರು ಅವರೊಂದಿಗೆ ವಾಗ್ವಾದ ನಡೆಸಿದ್ದರು. ಈ ದೃಶ್ಯವನ್ನು ಚಿತ್ರೀಕರಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಘಟನೆಗೆ ಸಂಬಂಧಿಸಿದಂತೆ ರಾಜೀವ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ಅದು ತಿಳಿಯದೇ ನಡೆದ ಪ್ರಮಾದ ಎಂದು ಸ್ಪಷ್ಟನೆ ನೀಡಿದ್ದರು. ಆದರೂ ಸಹ, ಈ ವೀಡಿಯೊ ಸತತವಾಗಿ ಶೇರ್ ಆಗುತ್ತಲೇ ಇತ್ತು.
ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೊಳಗಾದ ರಾಜೀವ ಪಿಕ್ಳೆ ಅವರು ಮನನೊಂದು ಆತ್ಮಹತ್ಯೆಯ ಮಾಡಿಕೊಂಡರು ಎಂದು ಹೇಳಲಾಗಿದೆ.
ಮೃತರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಅಂಕೋಲಾ ಪೊಲೀಸರು, ವೀಡಿಯೊ ಶೇರ್ ಮಾಡಿ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ