ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ, ಡೆಲಿವರಿ ಬಾಯ್ ಮತ್ತು ಸೆಕ್ಯೂರಿಟಿ ಗಾರ್ಡ್ಗಳ ನಡುವೆ ರಣಾಂಗಣ ಸೃಷ್ಟಿಯಾದ ಘಟನೆ ಗ್ರೇಟರ್ ನೋಯ್ಡಾದ ಬೀಟಾ-2 ಪ್ರದೇಶದದಲ್ಲಿ ನಡೆದಿದೆ ಎಂದು ಪರಸ್ಪರ ಪಂಚ್, ಕಿಕ್ ಹಾಗೂ ಕಬ್ಬಿಣದ ರಾಡ್ಗಳಿಂದ ಹಲ್ಲೆ ನಡೆಸಲಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಫುಡ್ ಡೆಲಿವರಿ ಏಜೆಂಟ್ ರಾತ್ರಿ 10 ಗಂಟೆ ಸುಮಾರಿಗೆ ಆಹಾರ ನೀಡಲು ಹೋದಾಗ ಆಕಸ್ಮಿಕವಾಗಿ ಬೇರೆಮನೆಯ ಬೆಲ್ ಒತ್ತಿದ್ದಾನೆ. ಮನೆಯ ಮಾಲೀಕರು ತಾವು ಯಾವುದೇ ಆರ್ಡರ್ ಮಾಡಿಲ್ಲ ಎಂದು ಹೇಳಿದರೂ, ವಿಳಾಸ ಸರಿಯಾಗಿ ಪರಿಶೀಲಿಸುವಂತೆ ಆತ ಪದೇ ಪದೇ ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಮಾಲೀಕರು ಸೆಕ್ಯೂರಿಟಿ ಗಾರ್ಡ್ಗಳನ್ನು ಕರೆಸಿದ್ದಾರೆ.
ಗಾರ್ಡ್ಗಳು ಡೆಲಿವರಿ ಬಾಯ್ಗೆ ಹೊರಗೆ ಹೋಗುವಂತೆ ಹೇಳಿದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಡೆಲಿವರಿ ಬಾಯ್ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಬೈಕ್ನಲ್ಲಿ ಬಂದ 4-5 ಯುವಕರು ಸೆಕ್ಯೂರಿಟಿ ಗಾರ್ಡ್ಗಳ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 15 ನಿಮಿಷಗಳ ಕಾಲ ನಡೆದ ಈ ಭೀಕರ ಗಲಾಟೆಯಲ್ಲಿ ದೊಣ್ಣೆ ಮತ್ತು ಕಬ್ಬಿಣದ ರಾಡ್ಗಳನ್ನು ಬಳಸಲಾಗಿದೆ.
“ಇದು ನಮ್ಮ ಸೊಸೈಟಿಯ ಭದ್ರತೆಯ ಪ್ರಶ್ನೆ. ಇಂತಹ ಗಲಾಟೆ ನಡೆಯುತ್ತಿದ್ದರೂ ಪೊಲೀಸರಿಗೆ ಯಾರೂ ಮಾಹಿತಿ ನೀಡಿಲ್ಲ. ಇಲ್ಲಿನ ಭದ್ರತಾ ಏಜೆನ್ಸಿ ವಿರುದ್ಧ ದೂರು ದಾಖಲಿಸಬೇಕು,” ಎಂದು ವೀಡಿಯೊ ಚಿತ್ರೀಕರಿಸಿದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಬೈಕ್ಗಳಲ್ಲಿ ಬಂದ ವ್ಯಕ್ತಿಗಳು ಓಡಿಹೋದರು, ಕೆಲವರು ತಮ್ಮ ವಾಹನಗಳನ್ನು ಅಲ್ಲಿಯೇ ಬಿಟ್ಟು ಓಡಿಹೋದರು. ಆದರೆ ಸಿಸಿಟಿವಿ ಮತ್ತು ವೈರಲ್ ವಿಡಿಯೋ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ, ಡೆಲಿವರಿ ಬಾಯ್ ಹಾಗೂ ಮೂವರು ಸೆಕ್ಯೂರಿಟಿ ಗಾರ್ಡ್ಗಳನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ದಂಗೆ, ಮಾರಕಾಸ್ತ್ರಗಳಿಂದ ಹಲ್ಲೆ ಮತ್ತು ಶಾಂತಿ ಭಂಗದ ಪ್ರಕರಣಗಳನ್ನು ದಾಖಲಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ