ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಜ.29) ಲೋಕಸಭೆಯಲ್ಲಿ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ದೇಶದ ಆರ್ಥಿಕ ಸ್ಥಿತಿಗತಿಯ ಸಮಗ್ರ ಚಿತ್ರಣವನ್ನು ನೀಡುವ ಈ ವರದಿಯು, ಭಾರತವು ಸತತ ನಾಲ್ಕನೇ ವರ್ಷವೂ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ.
ಈ ಬಾರಿಯ ಸಮೀಕ್ಷೆಯು ಕೃಷಿ ವಲಯದ ಸುಧಾರಣೆ, ರಸಗೊಬ್ಬರ ನೀತಿಯ ಬದಲಾವಣೆ ಮತ್ತು ಕೃತಕ ಬುದ್ಧಿಮತ್ತೆಯ (AI) ಸಮರ್ಪಕ ಬಳಕೆಗೆ ಹೆಚ್ಚಿನ ಒತ್ತು ನೀಡಿದೆ.
ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು:
ಜಿಡಿಪಿ (GDP) ಬೆಳವಣಿಗೆಯಲ್ಲಿ ದಾಖಲೆ: 2025-26ರ ಹಣಕಾಸು ವರ್ಷದಲ್ಲಿ ಭಾರತದ ನೈಜ ಜಿಡಿಪಿ ಬೆಳವಣಿಗೆಯನ್ನು 7.4 ಪ್ರತಿಶತ ಎಂದು ಅಂದಾಜಿಸಲಾಗಿದೆ. ಇದು ನಿರೀಕ್ಷೆಗಿಂತ ಹೆಚ್ಚಿನ ವೇಗವಾಗಿದ್ದು, ಭಾರತದ ಆರ್ಥಿಕ ಬಲವನ್ನು ಸಾಬೀತುಪಡಿಸಿದೆ. ಸತತವಾಗಿ ನಾಲಲ್ಕನೇ ವರ್ಷ ಜಿಡಿಪಿ ಬೆಳವಣಿಗೆ ವಿಶ್ವದಲ್ಲೇ ಅತಿ ಹೆಚ್ಚಿನ ದರದಲ್ಲಿ ಇರಿಸಿಲಾಗಿದೆ.
ಸಾಮರ್ಥ್ಯ ವೃದ್ಧಿ: ಕಳೆದ ಮೂರು ವರ್ಷಗಳ ಹಿಂದೆ ಶೇ. 6.5 ರಷ್ಟಿದ್ದ ಭಾರತದ ಸಂಭಾವ್ಯ ಬೆಳವಣಿಗೆಯ ದರವನ್ನು ಈಗ ಶೇ. 7.0 ಕ್ಕೆ ಏರಿಸಲಾಗಿದೆ. ಮೂಲಸೌಕರ್ಯದಲ್ಲಿನ ಬೃಹತ್ ಸಾರ್ವಜನಿಕ ಹೂಡಿಕೆಯೇ ಇದಕ್ಕೆ ಮುಖ್ಯ ಕಾರಣ.
ಕ್ರೆಡಿಟ್ ರೇಟಿಂಗ್ನಲ್ಲಿ ಏರಿಕೆ: ಬರೋಬ್ಬರಿ ಎರಡು ದಶಕಗಳ ನಂತರ, S&P ಸಂಸ್ಥೆಯು ಭಾರತದ ಕ್ರೆಡಿಟ್ ರೇಟಿಂಗ್ ಅನ್ನು BBB- ಇಂದ BBB ಗೆ ಏರಿಸಿದೆ. ಇದು ದೇಶದ ಆರ್ಥಿಕ ಶಿಸ್ತಿಗೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಮನ್ನಣೆಯಾಗಿದೆ.
ಹತೋಟಿಗೆ ಬಂದ ಹಣದುಬ್ಬರ: ಆಹಾರ ಪದಾರ್ಥಗಳ ಬೆಲೆ ಇಳಿಕೆ ಮತ್ತು ಕೇಂದ್ರದ ಕಟ್ಟುನಿಟ್ಟಿನ ಹಣಕಾಸು ನೀತಿಯಿಂದಾಗಿ ಹಣದುಬ್ಬರವು ಶೇ. 1.7 ಕ್ಕೆ ಕುಸಿದಿದೆ. ಇದು ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿಯಿಂದ ದೊಡ್ಡ ಸಮಾಧಾನ ತಂದಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಹಣಕಾಸು ಶಿಸ್ತು (Fiscal Consolidation): ಸರ್ಕಾರವು ವಿತ್ತೀಯ ಕೊರತೆಯನ್ನು ಯಶಸ್ವಿಯಾಗಿ ತಗ್ಗಿಸಿದೆ. 2025ರ ಹಣಕಾಸು ವರ್ಷದಲ್ಲಿ ಶೇ. 4.8 ರಷ್ಟಿದ್ದ ಕೊರತೆಯನ್ನು 2026ರ ಸಾಲಿನಲ್ಲಿ ಶೇ. 4.4 ಕ್ಕೆ ಇಳಿಸುವ ಗುರಿ ಹೊಂದಲಾಗಿದೆ.
ಬಳಕೆದಾರರ ಶಕ್ತಿ ಹೆಚ್ಚಳ: ಖಾಸಗಿ ಬಳಕೆಯ ವೆಚ್ಚವು (PFCE) ಜಿಡಿಪಿಯ ಶೇ. 61.5 ಕ್ಕೆ ಏರಿದೆ. ಇದು 2012ರ ನಂತರದ ಗರಿಷ್ಠ ಮಟ್ಟವಾಗಿದ್ದು, ಜನರ ಖರೀದಿ ಸಾಮರ್ಥ್ಯ ಮತ್ತು ಉದ್ಯೋಗ ಸ್ಥಿರತೆಯನ್ನು ಸೂಚಿಸುತ್ತದೆ.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾರುಪತ್ಯ: ಕೇವಲ ಆಮದು ಪರ್ಯಾಯಗಳ ಮೇಲೆ ಗಮನ ಹರಿಸದೆ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ಅನಿವಾರ್ಯ ಭಾಗವಾಗಬೇಕು ಎನ್ನುವ “ಕಾರ್ಯತಂತ್ರಕ್ಕೆ ಸಮೀಕ್ಷೆ ಒತ್ತು ನೀಡಿದೆ.
ಕೃಷಿ ವಲಯದ ಸಾಧನೆ: 2024-25ರಲ್ಲಿ ದಾಖಲೆಯ 3,320 ಲಕ್ಷ ಟನ್ ಧಾನ್ಯ ಉತ್ಪಾದನೆಯಾಗಿದ್ದು, ಕೃಷಿ ಮತ್ತು ಸಂಬಂಧಿತ ವಲಯಗಳು ಅತ್ಯುತ್ತಮ ಪ್ರದರ್ಶನ ನೀಡಿವೆ.
ಸಂಸ್ಥೆಗಳ ಬಲವರ್ಧನೆ: ಕೇವಲ ನಿಯಮಗಳ ಪಾಲನೆಗೆ ಸೀಮಿತವಾಗದೆ, ಅನಿಶ್ಚಿತ ಸಂದರ್ಭಗಳನ್ನು ಎದುರಿಸಬಲ್ಲ “ಉದ್ಯಮಶೀಲ ರಾಜ್ಯ”ವಾಗಿ ಭಾರತ ಬದಲಾಗಬೇಕಿದೆ ಎಂದು ಸಮೀಕ್ಷೆ ಕರೆ ನೀಡಿದೆ.
ಕೃತಕ ಬುದ್ಧಿಮತ್ತೆ (AI) ಕ್ರಾಂತಿ: ಭಾರತದ ಶೇ. 88 ರಷ್ಟು ಕಂಪನಿಗಳು ಈಗಾಗಲೇ AI ಬಳಸುತ್ತಿವೆ. ತಂತ್ರಜ್ಞಾನದ ಮೇಲೆ ಪರಾವಲಂಬಿಯಾಗುವ ಬದಲು, ಭಾರತದ ಅಗತ್ಯಗಳಿಗೆ ತಕ್ಕಂತೆ ಹಂತ ಹಂತವಾಗಿ AI ಅಳವಡಿಸಿಕೊಳ್ಳುವ ಮಾರ್ಗಸೂಚಿಯನ್ನು ಸಮೀಕ್ಷೆ ವಿವರಿಸಿದೆ.
ಕೃಷಿ ಮತ್ತು ತಂತ್ರಜ್ಞಾನಕ್ಕೆ ಹೊಸ ಆಯಾಮ ; ಸಮೀಕ್ಷೆಯು ರಸಗೊಬ್ಬರ ವಲಯದ ಕೂಲಂಕುಷ ಪರಿಶೀಲನೆ, ನೀರಾವರಿ ವ್ಯವಸ್ಥೆ ಬಲಪಡಿಸುವುದು ಮತ್ತು ಬೆಳೆ ವೈವಿಧ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ತಂತ್ರಜ್ಞಾನವು ಕೇವಲ ಬೆಳವಣಿಗೆಯ ಸಾಧನವಾಗದೆ, ದೀರ್ಘಕಾಲೀನ ಉದ್ಯೋಗ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಂತಿರಬೇಕು ಎಂದು ವರದಿ ಪ್ರತಿಪಾದಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ