ಗಿರ್ ಸೋಮನಾಥ: ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ಗಂಗ್ಡಾ ಗ್ರಾಮದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ಭೀಕರ ಘಟನೆಯೊಂದು ಸಂಭವಿಸಿದೆ. ದಾಳಿ ಮಾಡಲು ನುಗ್ಗಿ ಬಂದ ಚಿರತೆಗೆ ಹೆದರದ ವೃದ್ಧರೊಬ್ಬರು, ತಮ್ಮ ಮಗನ ಪ್ರಾಣ ಉಳಿಸಲು ಅದ್ಭುತ ಶೌರ್ಯ ತೋರಿ ಚಿರತೆಯನ್ನೇ ಸಾಯಿಸಿದ್ದಾರೆ….!
ಸ್ಥಳೀಯ ಮೂಲಗಳ ಪ್ರಕಾರ, ಈ ಘಟನೆಯು ಬುಧವಾರ ಸಂಜೆ ಗಿರ್ ಸೋಮನಾಥ್ನ ಉನಾ ಎಂಬ ಪ್ರದೇಶದಲ್ಲಿ ನಡೆದಿದೆ. ಬಾಬುಭಾಯಿ ನಾರಣ್ಭಾಯಿ ವಾಜಾ ಎಂಬುವವರು ತಮ್ಮ ಮನೆಯ ಶೆಡ್ನಲ್ಲಿ ಕುಳಿತಿದ್ದಾಗ, ಕತ್ತಲಲ್ಲಿ ಪೊದೆಗಳಲ್ಲಿ ಹೊಂಚು ಹಾಕಿದ್ದ ಚಿರತೆಯೊಂದು ದಿ ಹಠಾತ್ತನೆ ಅವರ ಮೇಲೆ ದಾಳಿ ಮಾಡಿದೆ. ತಂದೆಯ ಚೀರಾಟ ಕೇಳಿ ಅವರ 27 ವರ್ಷದ ಮಗ ಶಾರ್ದೂಲ್ ತಕ್ಷಣವೇ ಕೋಣೆಯಿಂದ ಹೊರಗೆ ಓಡಿ ಬಂದಿದ್ದಾನೆ. ಆಗ ಚಿರತೆಯು ಬಾಬುಭಾಯಿಯವರನ್ನು ಬಿಟ್ಟು ಶಾರ್ದೂಲ್ ಮೇಲೆ ಪ್ರಾಣಾಂತಿಕ ದಾಳಿ ನಡೆಸಿದೆ. ಇದರಿಂದ ಮಗನಿಗೆ ವಿಪರೀತ ರಕ್ತಸ್ರಾವವಾಗಿದೆ.
ಆರಂಭಿಕ ದಾಳಿಯಲ್ಲಿ ತಂದೆಗೂ ಗಾಯಗಳಾಗಿದ್ದರೂ, ಮಗನ ಪ್ರಾಣಾಪಾಯ ಕಂಡು ಚಿರತೆ ಮೇಲೆ ಪ್ರತಿದಾಳಿಗೆ ಮುಂದಾದರು. ಕೂಡಲೇ ಹತ್ತಿರದಲ್ಲಿದ್ದ ಈಟಿ (Spear) ಮತ್ತು ಕೊಡಲಿಯನ್ನು (Sickle) ಕೈಗೆತ್ತಿಕೊಂಡು ಚಿರತೆಯೊಂದಿಗೆ ಹೋರಾಡಿದರು. ಗ್ರಾಮಸ್ಥರ ಪ್ರಕಾರ, ಸುಮಾರು ಹೊತ್ತು ನಡೆದ ಈ ರಕ್ತಸಿಕ್ತ ಕಾಳಗದಲ್ಲಿ ತಂದೆಯ ಸತತ ಏಟುಗಳಿಗೆ ತತ್ತರಿಸಿದ ಚಿರತೆಯು ಸ್ಥಳದಲ್ಲೇ ಮೃತಪಟ್ಟಿದೆ.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ತಂದೆ ಮತ್ತು ಮಗನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಶವವನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಗುಜರಾತ್ನಲ್ಲಿ ಚಿರತೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ರಾಜ್ಯಾದ್ಯಂತ ಸುಮಾರು 2,200ಕ್ಕೂ ಹೆಚ್ಚು ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಸೌರಾಷ್ಟ್ರ ಮತ್ತು ಕಚ್ ಪ್ರಾಂತ್ಯಗಳಲ್ಲಿ ಕೇಂದ್ರೀಕೃತವಾಗಿವೆ.
ಚಿರತೆಗಳು ಸಿಂಹಗಳಿಗಿಂತ ಭಿನ್ನವಾಗಿದ್ದು, ಆಹಾರಕ್ಕಾಗಿ ಜನವಸತಿ ಪ್ರದೇಶಗಳ ಹತ್ತಿರ ಸುಳಿಯುತ್ತವೆ. ಇದು ಮನುಷ್ಯ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ