ಲಂಡನ್: ಜಾಗತಿಕ ತಾಪಮಾನ ಏರಿಕೆಯು ಅಪಾಯಕಾರಿ ಮಟ್ಟವನ್ನು ತಲುಪುತ್ತಿದ್ದು, ಮುಂದಿನ ಕೆಲವು ದಶಕಗಳಲ್ಲಿ ಭೂಮಿಯ ಅರ್ಧದಷ್ಟು ಜನಸಂಖ್ಯೆ ಎಂದರೆ ಸುಮಾರು 379 ಕೋಟಿ ಜನರು ತೀವ್ರತರವಾದ ಶಾಖದ ಅಲೆಗಳಿಗೆ (Extreme Heat) ತುತ್ತಾಗಲಿದ್ದಾರೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನೆ ಎಚ್ಚರಿಸಿದೆ.
ಸಂಶೋಧನೆಯ ಪ್ರಕಾರ ಕೈಗಾರಿಕಾ ಪೂರ್ವ ಯುಗಕ್ಕೆ ಹೋಲಿಸಿದರೆ ಜಾಗತಿಕ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ, ಅದು ಮಾನವಕುಲದ ಮೇಲೆ ಅಭೂತಪೂರ್ವ ಪರಿಣಾಮ ಬೀರಲಿದೆ.
2010ರಲ್ಲಿ ವಿಶ್ವದ ಜನಸಂಖ್ಯೆಯ ಶೇ. 23ರಷ್ಟು ಜನರು ತೀವ್ರ ಶಾಖದ ಸಮಸ್ಯೆಯನ್ನು ಎದುರಿಸುತ್ತಿದ್ದರು.
2050ರ ವೇಳೆಗೆ ಈ ಪ್ರಮಾಣವು ಶೇ. 41ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಈ ಸಂಶೋಧನೆ ಹೇಳಿದೆ.
ವಿಶೇಷವಾಗಿ 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ದಾಟುವ ಮೊದಲೇ ಈ ತೀವ್ರ ಬದಲಾವಣೆಗಳು ಕಂಡುಬರಲಿವೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಅಪಾಯದಲ್ಲಿರುವ ದೇಶಗಳು
ಈ ಬಿಸಿಲ ಬೇಗೆಯು ಎಲ್ಲ ದೇಶಗಳ ಮೇಲೆ ಸಮಾನವಾಗಿ ಪರಿಣಾಮ ಬೀರುವುದಿಲ್ಲ. ಸಂಶೋಧನೆಯು ಎರಡು ರೀತಿಯ ಅಪಾಯಗಳನ್ನು ಗುರುತಿಸಿದೆ.
ವೇಗದ ಏರಿಕೆ: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ನೈಜೀರಿಯಾ, ದಕ್ಷಿಣ ಸುಡಾನ್, ಲಾವೋಸ್ ಮತ್ತು ಬ್ರೆಜಿಲ್ ದೇಶಗಳಲ್ಲಿ ತಾಪಮಾನದ ತೀವ್ರತೆ ಅತ್ಯಂತ ವೇಗವಾಗಿ ಹೆಚ್ಚಾಗಲಿದೆ.
ಹೆಚ್ಚಿನ ಜನಸಂಖ್ಯೆಗೆ ಬಾಧೆ: ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ನಂತಹ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಕೋಟ್ಯಂತರ ಜನರು ಈ ಅಪಾಯಕ್ಕೆ ಸಿಲುಕಲಿದ್ದಾರೆ.
ತಂಪಾದ ದೇಶಗಳಿಗೂ ತಪ್ಪದ ಬಿಸಿ
ಇದುವರೆಗೆ ಶೀತಲ ಹವಾಮಾನಕ್ಕೆ ಹೆಸರುವಾಸಿಯಾಗಿದ್ದ ದೇಶಗಳೂ ಸಹ ಈ ಬದಲಾವಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಶೋಧನೆ ಹೇಳಿದೆ. ಕೆನಡಾ ಮತ್ತು ಆಸ್ಟ್ರಿಯಾದಲ್ಲಿ ಬಿಸಿ ದಿನಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಲಿದೆ ಎಂದು ಅದು ಹೇಳಿದೆ. ನಾರ್ವೆ (ಶೇ. 200) ಮತ್ತು ಐರ್ಲೆಂಡ್ (ಶೇ. 230) ದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಉಷ್ಣಾಂಶ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.
ಆಕ್ಸ್‌ಫರ್ಡ್‌ನ ಇಂಜಿನಿಯರಿಂಗ್ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜೀಸಸ್ ಲಿಜಾನಾ ಅವರ ಪ್ರಕಾರ, “ನೀತಿ ನಿರೂಪಕರು ಅಂದುಕೊಂಡಿದ್ದಕ್ಕಿಂತಲೂ ಮುಂಚಿತವಾಗಿ ನಾವು ಈ ಪರಿಸ್ಥಿತಿಗೆ ಹೊಂದಿಕೊಳ್ಳುವ (Adaptation) ಕ್ರಮಗಳನ್ನು ಕೈಗೊಳ್ಳಬೇಕಿದೆಎಂದು ಹೇಳಿದ್ದಾರೆ.
ಕಟ್ಟಡಗಳು ಮತ್ತು ಮೂಲಸೌಕರ್ಯಗಳ ಸವಾಲು
ಯುರೋಪ್ ಮತ್ತು ಉತ್ತರ ಅಮೆರಿಕಾದಂತಹ ದೇಶಗಳಲ್ಲಿನ ಮನೆಗಳು ಮತ್ತು ಮೂಲಸೌಕರ್ಯಗಳನ್ನು ಚಳಿಯಿಂದ ರಕ್ಷಿಸಿಕೊಳ್ಳಲು (ಶಾಖವನ್ನು ಉಳಿಸಿಕೊಳ್ಳಲು) ವಿನ್ಯಾಸಗೊಳಿಸಲಾಗಿದೆ. ಆದರೆ, ಈಗ ಹೆಚ್ಚುತ್ತಿರುವ ಶಾಖವನ್ನು ಹೊರಹಾಕಲು ಈ ಕಟ್ಟಡಗಳು ಸಜ್ಜಾಗಿಲ್ಲ. ಮುಂದಿನ ಐದು ವರ್ಷಗಳಲ್ಲಿ ಲಕ್ಷಾಂತರ ಮನೆಗಳಿಗೆ ಹವಾನಿಯಂತ್ರಣ (Air-conditioning) ವ್ಯವಸ್ಥೆಯ ಅಗತ್ಯವಿರಲಿದೆ. ಇದು ವಿದ್ಯುತ್ ಬಳಕೆಯನ್ನು ಹೆಚ್ಚಿಸಿ, ಪರಿಸರದ ಮೇಲೆ ಮತ್ತಷ್ಟು ಒತ್ತಡ ಹೇರುವ ಸಾಧ್ಯತೆಯಿದೆ.
ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು
ಈ ಕುರಿತು ಮಾತನಾಡಿರುವ ಆಕ್ಸ್‌ಫರ್ಡ್ ಮಾರ್ಟಿನ್ ಕಾರ್ಯಕ್ರಮದ ಮುಖ್ಯಸ್ಥೆ ಡಾ. ರಾಧಿಕಾ ಖೋಸ್ಲಾ, “ತಾಪಮಾನ ಏರಿಕೆಯು ಕೇವಲ ಹವಾಮಾನಕ್ಕೆ ಸೀಮಿತವಾಗಿಲ್ಲ. ಇದು ಶಿಕ್ಷಣ, ಆರೋಗ್ಯ, ವಲಸೆ ಮತ್ತು ಕೃಷಿ ಕ್ಷೇತ್ರಗಳ ಮೇಲೆ ಗಂಭೀರವಾದ ಪ್ರಭಾವ ಬೀರಲಿದೆ,” ಎಂದಿದ್ದಾರೆ.
ಜಾಗತಿಕವಾಗಿ 2050ರ ವೇಳೆಗೆ ‘ನೆಟ್-ಝೀರೋ’ (Net-zero) ಗುರಿ ತಲುಪಬೇಕಾದರೆ, ಕಟ್ಟಡ ನಿರ್ಮಾಣ ವಲಯದಲ್ಲಿ ತಕ್ಷಣದ ಬದಲಾವಣೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ತಂತ್ರಜ್ಞಾನಗಳ ಅಳವಡಿಕೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ