ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸತ್ಯವನ್ನು ಅಮೆರಿಕ ಈಗ ಅಧಿಕೃತವಾಗಿ ಎತ್ತಿಹಿಡಿದಿದೆ. ಪಾಕಿಸ್ತಾನದ ವಾದಗಳಿಗೆ ವಿರುದ್ಧವಾಗಿ, ಜಗತ್ತಿನ ದೊಡ್ಡಣ್ಣ ಅಮೆರಿಕ ಭಾರತದ ರಾಜಕೀಯ ಭೂಪಟವನ್ನು ಅಂಗೀಕರಿಸುವ ಮೂಲಕ ಪಾಕಿಸ್ತಾನಕ್ಕೆ ಪ್ರಬಲ ರಾಜತಾಂತ್ರಿಕ ಏಟು ನೀಡಿದೆ.
ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (USTR) ಬಿಡುಗಡೆ ಮಾಡಿರುವ ಭಾರತದ ನೂತನ ಭೂಪಟದಲ್ಲಿ, ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತದ ಭೂಭಾಗವೆಂದು ತೋರಿಸಲಾಗಿದೆ. ವಿಶೇಷವೆಂದರೆ, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ‘ಪಾಕ್ ಆಕ್ರಮಿತ ಕಾಶ್ಮೀರ’ವನ್ನೂ (PoK) ಈ ಭೂಪಟದಲ್ಲಿ ಭಾರತದ ಗಡಿಯೊಳಗೇ ಸೇರಿಸಲಾಗಿದೆ. ಇದು ಅಮೆರಿಕದ ನಿಲುವು ಹಾಗೂ ಭಾರತದ ಪ್ರಾದೇಶಿಕ ಸಮಗ್ರತೆಗೆ ಅಮೆರಿಕ ನೀಡಿದ ಬೆಂಬಲವನ್ನು ಸ್ಪಷ್ಟಪಡಿಸುತ್ತದೆ.
ಪಾಕಿಸ್ತಾನಕ್ಕೆ ಮರ್ಮಾಘಾತ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ನಿಕಟ ಸಂಬಂಧ ಬೆಳೆಸಲು ಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಇದು ದೊಡ್ಡ ಆಘಾತ ತಂದಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಾಷಿಂಗ್ಟನ್‌ನಲ್ಲಿ ಎಷ್ಟೇ ಲಾಬಿ ನಡೆಸಿದರೂ, ಪಾಕಿಸ್ತಾನದ ಸುಳ್ಳು ವಾದಗಳನ್ನು ಒಪ್ಪಲು ಅಮೆರಿಕ ನಿರಾಕರಿಸಿದೆ. ಪಾಕಿಸ್ತಾನದ ಖನಿಜ ಸಂಪತ್ತು ಮತ್ತು ಸೇನಾ ವ್ಯವಹಾರಗಳಲ್ಲಿ ಅಮೆರಿಕಕ್ಕೆ ಆಸಕ್ತಿ ಇದ್ದರೂ, ಪ್ರಾದೇಶಿಕ ಗಡಿ ವಿಚಾರದಲ್ಲಿ ಭಾರತದ ಸತ್ಯವನ್ನೇ ಅದು ಎತ್ತಿಹಿಡಿದಿದೆ.
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ
ಭಾರತವು ಅಮೆರಿಕದ ರಫ್ತು ವಸ್ತುಗಳ ಮೇಲಿನ ಸುಂಕವನ್ನು (Tariff) ಕಡಿತಗೊಳಿಸಿರುವ ಕುರಿತು ಅಮೆರಿಕ ಹಂಚಿಕೊಂಡಿರುವ ಗ್ರಾಫಿಕ್ ಚಿತ್ರದಲ್ಲಿ ಈ ಭೂಪಟ ಕಾಣಿಸಿಕೊಂಡಿದೆ.
ಅಮೆರಿಕದ ಒಣ ಹಣ್ಣುಗಳು (Tree nuts), ಕೆಂಪು ಜೋಳ, ಸಂಸ್ಕರಿಸಿದ ಹಣ್ಣುಗಳು ಮತ್ತು ವೈನ್ ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಭಾರತ ಸುಂಕವನ್ನು ತೆಗೆದುಹಾಕಿದೆ ಅಥವಾ ಕಡಿಮೆ ಮಾಡಿದೆ. ಪ್ರತಿಯಾಗಿ ಅಮೆರಿಕ ಕೂಡ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಶೇ. 50 ರಿಂದ ಶೇ. 18ಕ್ಕೆ ಇಳಿಸಲು ಮತ್ತು ಹೆಚ್ಚುವರಿ ಶೇ. 25ರಷ್ಟು ಸುಂಕವನ್ನು ಹಿಂತೆಗೆದುಕೊಳ್ಳಲು ಸಮ್ಮತಿಸಿದೆ.
ಒಟ್ಟಾರೆಯಾಗಿ ಭೂಪಟದ ಮೂಲಕ ಅಮೆರಿಕ ನೀಡಿದ ಈ ಸಂದೇಶವು ಜಾಗತಿಕ ರಾಜಕಾರಣದಲ್ಲಿ ಪಾಕಿಸ್ತಾನಕ್ಕಿಂತ ಭಾರತವೇ ಅಮೆರಿಕದ ಪ್ರಬಲ ಮತ್ತು ಅನಿವಾರ್ಯ ಪಾಲುದಾರ ಎಂಬುದನ್ನು ಸಾಬೀತುಪಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ