ಮತದಾರರ ಪಟ್ಟಿ ಪರಿಷ್ಕರಣೆಗೆ ಅಡ್ಡಿಪಡಿಸಲು ಬಿಡಲ್ಲ : ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಯಾವುದೇ ರೀತಿಯ ಅಡೆತಡೆಗಳನ್ನು ಸಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಚುನಾವಣಾ ಆಯೋಗಕ್ಕೆ (ECI) ನಿಯೋಜಿಸಲಾದ 8,000ಕ್ಕೂ ಹೆಚ್ಚು ಅಧಿಕಾರಿಗಳು ಮಂಗಳವಾರ ಸಂಜೆಯೊಳಗೆ ಆಯಾ ಜಿಲ್ಲಾ ಚುನಾವಣಾ ಅಧಿಕಾರಿಗಳ ಮುಂದೆ ವರದಿ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ. ಅಲ್ಲದೆ, ಪಶ್ಚಿಮ ಬಂಗಾಳದ ಪರಿಷ್ಕರಣಾ ಕಾರ್ಯದ ಗಡುವನ್ನು ಒಂದು ವಾರಗಳ ಕಾಲ ವಿಸ್ತರಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. “ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಅಡ್ಡಿಯನ್ನು ನಾವು ಸಹಿಸುವುದಿಲ್ಲ. ಇದು ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವ ಸ್ಪಷ್ಟ ಸಂದೇಶ,” ಎಂದು ಸಿಜೆಐ ಸೂರ್ಯ ಕಾಂತ ಎಚ್ಚರಿಸಿದ್ದಾರೆ.

ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ (SIR) ಸಂಬಂಧಿತ ಕರ್ತವ್ಯಕ್ಕಾಗಿ ಚುನಾವಣಾ ಆಯೋಗಕ್ಕೆ ನಿಯೋಜಿಸಲಾದ ಪಶ್ಚಿಮ ಬಂಗಾಳದ 8,000ಕ್ಕೂ ಹೆಚ್ಚು ಅಧಿಕಾರಿಗಳು ಮಂಗಳವಾರ ಸಂಜೆಗೊಳಗೆ ತಮ್ಮ ತಮ್ಮ ಜಿಲ್ಲೆಗಳ ಚುನಾವಣಾಧಿಕಾರಿಗಳೆದುರು ಹಾಜರಾಗುವಂತೆ ಪಶ್ಚಿಮ ಬಂಗಾಳ ಸರ್ಕಾರ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶಿಸಿದೆ.
ಎಸ್‌ಐಆರ್‌ ಪ್ರಕ್ರಿಯೆ ಸುಗಮವಾಗಿ ನಡೆಯಲಯ ಅಗತ್ಯ ನಿರ್ದೇಶನ ನೀಡಲಾಗುತ್ತಿದ್ದು ಈ ಪ್ರಕ್ರಿಯೆಗೆ ಯಾವುದೇ ರೀತಿ ಅಡ್ಡಿ ಉಂಟು ಮಾಡುವುದನ್ನು ಸಹಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹಾಗೂ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಮತ್ತು ಎನ್‌ ವಿ ಅಂಜಾರಿಯಾ ಅವರಿದ್ದ ಪೀಠ ತಿಳಿಸಿದೆ.
ಪಶ್ಚಿಮ ಬಂಗಾಳ ಸರ್ಕಾರ ಚುನಾವಣಾ ಸಂಸ್ಥೆಗೆ ಸಮರ್ಪಕ ಸಹಕಾರ ನೀಡುತ್ತಿಲ್ಲ ಎಂದು ಚುನಾವಣಾ ಆಯೋಗ ದೂರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರ ಸ್ಪಷ್ಟಪಡಿಸಿತು. ಎಸ್‌ಐಆರ್‌ ಪ್ರಕ್ರಿಯೆಯು ಹಿಂಸಾಚಾರ, ಬೆದರಿಕೆ ಹಾಗೂ ನಿರಂತರ ರಾಜಕೀಯ ಹಸ್ತಕ್ಷೇಪದಿಂದ ತೊಂದರೆಗೆ ಒಳಗಾಗಿದೆ ಎಂಬ ಆಯೋಗದ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸ್ಪಷ್ಟ ನಿರ್ದೇಶನ ಈಗಾಗಲೇ ನೀಡಲಾಗಿದೆ ಎಂದು ಪೀಠ ಪುನರುಚ್ಚರಿಸಿತು. ಜೊತೆಗೆ, ರಾಜ್ಯದ ವಿರುದ್ಧದ ಆರೋಪಗಳ ಕುರಿತು ಪಶ್ಚಿಮ ಬಂಗಾಳ ಡಿಜಿಪಿ ಖುದ್ದು ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಬೇಕೆಂದು ಅದು ನಿರ್ದೇಶಿಸಿತು.
ರಾಜ್ಯ ಸರ್ಕಾರದಿಂದ ಇನ್ನೂ 8,500 ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುವ ಪ್ರಸ್ತಾವನೆಯಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದರೆ, ಈ ಅಧಿಕಾರಿಗಳ ಪೂರ್ಣ ವಿವರಗಳನ್ನು ಸರಿಯಾಗಿ ನೀಡಿಲ್ಲ ಎಂದು ಆಯೋಗ ಆಕ್ಷೇಪ ವ್ಯಕ್ತಪಡಿಸಿತು. ಹೆಸರುಗಳೊಂದಿಗೆ ಸಂಪೂರ್ಣ ಮಾಹಿತಿ ನೀಡಬೇಕಾಗಿತ್ತು ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಮೈಕ್ರೊ ಅಬ್ಸರ್ವರ್‌ಗಳಿಗೆ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲ ಅವರು ಕೇವಲ ಇಆರ್‌ಒಗಳಿಗೆ ಸಹಾಯ ಮಾಡುವ ಪಾತ್ರ ನಿರ್ವಹಿಸಬೇಕು. ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಇಆರ್‌ಒಗೆ ಸೇರಿದೆ ಎಂದು ಅದು ಹೇಳಿತು.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪರಿಷ್ಕರಣಾ ಕಾರ್ಯದ ಗಡುವನ್ನು ಫೆಬ್ರವರಿ 14 ರಿಂದ ಒಂದು ವಾರಗಳ ಕಾಲ ವಿಸ್ತರಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement