ಉಸಿರಾಟದ ತೊಂದರೆಗೆ 1 ವರ್ಷದ ಮಗುವನ್ನು ಆಸ್ಪತ್ರೆಗೆ ಒಯ್ದರೆ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್‌ ಕಂಡು ವೈದ್ಯರೇ ಶಾಕ್‌ !

ವಡೋದರಾ: ಹಸುಗೂಸುಗಳ ಬಗ್ಗೆ ಪೋಷಕರು ಎಷ್ಟು ಜಾಗರೂಕರಾಗಿರಬೇಕು ಎಂಬ ಎಚ್ಚರಿಕೆ ನೀಡುವ ಘಟನೆಯೊಂದು ವಡೋದರಾದಲ್ಲಿ ವರದಿಯಾಗಿದೆ. ನ್ಯುಮೋನಿಯಾ ಚಿಕಿತ್ಸೆಗೆಂದು ಒಂದು ವರ್ಷದ ಮಗುವನ್ನು ಆಸ್ಪತ್ರೆಗೆ ಒಯ್ದರೆ ಅದರ ಶ್ವಾಸಕೋಶದ ಎಕ್ಸರೇ ನೋಡಿ ವೈದ್ಯರೇ ದಿಗ್ಭ್ರಮೆಗೊಂಡಿದ್ದಾರೆ. ಆನಂದ ಜಿಲ್ಲೆಯ ಮಲ್ಸರ್ ಗ್ರಾಮದ ಒಂದು ವರ್ಷದ ಮಗು ಎಲ್‌ಇಡಿ (LED) ಬಲ್ಬ್ ಅನ್ನು ನುಂಗಿದ್ದು, ಇದರಿಂದಾಗಿ ಸುದೀರ್ಘ ಕಾಲ ಉಸಿರಾಟದ ಸಮಸ್ಯೆಯಿಂದ ಬಳಲುವಂತಾಗಿತ್ತು.
ಕಳೆದ ಒಂದು ತಿಂಗಳಿನಿಂದ ಮಗುವಿಗೆ ನ್ಯುಮೋನಿಯಾ ಇದೆ ಎಂದು ಭಾವಿಸಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗುಣಮುಖವಾಗದ ಕಾರಣ ಮಗುವನ್ನು ಗೋತ್ರಿಯ ಜಿಎಂಇಆರ್ ಎಸ್ (GMERS) ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮಗುವನ್ನು ಪರೀಕ್ಷಿಸಿದಾಗ ಶ್ವಾಸಕೋಶದಲ್ಲಿ ಒಂದು ಸೆಂಟಿಮೀಟರ್ ಗಾತ್ರದ ಎಲ್‌ಇಡಿ ಬಲ್ಬ್ ಸಿಲುಕಿರುವುದು ಪತ್ತೆಯಾಯಿತು. ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಹಿರೇನ್ ಸೋನಿ ನೇತೃತ್ವದ ತಂಡವು ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ಯಶಸ್ವಿಯಾಗಿ ಹೊರತೆಗೆದಿದೆ.

ಘಟನೆಯ ವಿವರ…
ಮಗು ಆಟವಾಡುವಾಗ ಬಾಯಿಗೆ ಹಾಕಿಕೊಂಡಿದ್ದ ಸಣ್ಣ ಬಲ್ಬ್, ಉಸಿರಾಟದ ನಾಳದ ಮೂಲಕ ಶ್ವಾಸಕೋಶದ ಒಳಗೆ ಸೇರಿಕೊಂಡಿತ್ತು. ಆರಂಭದಲ್ಲಿ ನ್ಯುಮೋನಿಯಾ ಲಕ್ಷಣಗಳು ಕಂಡುಬಂದಿದ್ದರಿಂದ ಪೋಷಕರು ಗೊಂದಲಕ್ಕೊಳಗಾಗಿದ್ದರು. ಆದರೆ ಎಕ್ಸ್‌ರೇ ಮತ್ತು ಎಂಡೋಸ್ಕೋಪಿ ಪರೀಕ್ಷೆ ನಡೆಸಿದಾಗ ಶ್ವಾಸಕೋಶದ ಒಳಗೆ ವಸ್ತುವೊಂದು ಇರುವುದು ದೃಢಪಟ್ಟಿತು.
“ಮಗು ಕಳೆದ ಒಂದೂವರೆ ತಿಂಗಳಿನಿಂದ ನೋವು ಅನುಭವಿಸುತ್ತಿತ್ತು. ಎಂಡೋಸ್ಕೋಪಿ ಮಾಡಿದಾಗ ವಸ್ತುವಿನ ಸುತ್ತ ಚರ್ಮ ಬೆಳೆದಿರುವುದು ಕಂಡುಬಂದಿತು. ಅತ್ಯಾಧುನಿಕ ‘ಆಪ್ಟಿಕಲ್ ಬ್ರಾಂಕೋಸ್ಕೋಪಿ’ ತಂತ್ರಜ್ಞಾನ ಬಳಸಿ ಕೇವಲ ಅರ್ಧ ಗಂಟೆಯ ಶಸ್ತ್ರಚಿಕಿತ್ಸೆಯಲ್ಲಿ ಬಲ್ಬ್ ಅನ್ನು ಹೊರತೆಗೆಯಲಾಯಿತು,” ಎಂದು ಡಾ. ಹಿರೇನ್ ಸೋನಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಇದು ತಮ್ಮ 30 ವರ್ಷಗಳ ವೈದ್ಯಕೀಯ ವೃತ್ತಿಜೀವನದಲ್ಲಿ ಅತ್ಯಂತ ಅಪರೂಪದ ಪ್ರಕರಣ ಎಂದು ಅವರು ಬಣ್ಣಿಸಿದ್ದಾರೆ.
ಸಾಮಾನ್ಯವಾಗಿ 9 ತಿಂಗಳಿನಿಂದ 4-5 ವರ್ಷದೊಳಗಿನ ಮಕ್ಕಳಲ್ಲಿ ಇಂತಹ ಘಟನೆಗಳು ಹೆಚ್ಚು. ಅದರಲ್ಲೂ 6 ತಿಂಗಳಿನಿಂದ 2 ವರ್ಷದ ಮಕ್ಕಳು ಕುತೂಹಲದಿಂದ ಕಂಡ ಕಂಡ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ ಎಂದು ವೈದ್ಯರು ಎಚ್ಚರಿಸುತ್ತಾರೆ. ಹಣ್ಣಿನ ಬೀಜಗಳು, ನಾಣ್ಯಗಳು, ಸ್ಕ್ರೂಗಳು, ಮಣಿಗಳು ಮತ್ತು ಸಣ್ಣ ಬ್ಯಾಟರಿಗಳ ಬಗ್ಗೆ ಎಚ್ಚರವಿರಲಿ ಎಂದು ಅವರು ಹೇಳುತ್ತಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement