ಟಿ20 ವಿಶ್ವಕಪ್ : ಯು-ಟರ್ನ್ ಹೊಡೆದ ಪಾಕಿಸ್ತಾನ ; ಭಾರತದ ವಿರುದ್ಧದ ಪಂದ್ಯ ಆಡಲು ನಿರ್ಧಾರ…!

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)  ಯೂ ಟರ್ನ್‌ ಹೊಡೆದಿದೆ. ಐಸಿಸಿ (ICC) ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ, ಅದು ತಾನು ಈ ಹಿಂದೆ  ಘೋಷಿಸಿದ್ದ ಭಾರತದ ವಿರುದ್ಧದ ಪಂದ್ಯದ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಮೂಲಕ 2026ರ ಟಿ20 ವಿಶ್ವಕಪ್‌ನಲ್ಲಿ ನಿಗದಿಯಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಖಚಿತವಾಗಿದೆ.
ಪಾಕಿಸ್ತಾನ ಸರ್ಕಾರದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಈ ಪ್ರಕಟಣೆಯನ್ನು ದೃಢಪಡಿಸಲಾಗಿದೆ. “ಬಹುವಿಧದ ಚರ್ಚೆಗಳಲ್ಲಿ ಲಭಿಸಿದ ಫಲಿತಾಂಶಗಳು ಹಾಗೂ ಸ್ನೇಹಪರ ರಾಷ್ಟ್ರಗಳ ವಿನಂತಿಯನ್ನು ಪರಿಗಣಿಸಿ, ಪಾಕಿಸ್ತಾನ ಸರ್ಕಾರವು ತನ್ನ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಫೆಬ್ರವರಿ 15, 2026 ರಂದು ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ನಿಗದಿತ ಪಂದ್ಯದಲ್ಲಿ ಕಣಕ್ಕಿಳಿಯುವಂತೆ ಸೂಚನೆ ನೀಡಿದೆ,” ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.
ಅಲ್ಲದೆ, “ಕ್ರಿಕೆಟ್‌ನ ಕ್ರೀಡಾ ಮನೋಭಾವವನ್ನು ರಕ್ಷಿಸುವ ಉದ್ದೇಶದಿಂದ ಮತ್ತು ಎಲ್ಲಾ ಭಾಗವಹಿಸುವ ರಾಷ್ಟ್ರಗಳಲ್ಲಿ ಈ ಜಾಗತಿಕ ಕ್ರೀಡೆಯ ನಿರಂತರತೆಯನ್ನು ಬೆಂಬಲಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,” ಎಂದು ಅದು ಹೇಳಿದೆ.
“ಪಿಸಿಬಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರು ಐಸಿಸಿ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಪ್ರತಿನಿಧಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಮಾಲೋಚನೆಯ ವಿವರಗಳನ್ನು ಪಾಕಿಸ್ತಾನದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶೆಹಬಾಜ್ ಷರೀಫ್ ಅವರಿಗೆ ಔಪಚಾರಿಕವಾಗಿ ವಿವರಿಸಿದ್ದಾರೆ.”
ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿದ ಹಿನ್ನೆಲೆಯಲ್ಲಿ, ಅವರಿಗೆ ಬೆಂಬಲ ಸೂಚಿಸಲು ಪಾಕಿಸ್ತಾನವು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿತ್ತು. ಆದರೆ, ಐಸಿಸಿ ಬಾಂಗ್ಲಾದೇಶದ ವಿಷಯದಲ್ಲಿ ಸಮನ್ವಯದ ಹಾದಿ ಹಿಡಿದಿರುವುದರಿಂದ, ಪಿಸಿಬಿ ಈಗ ತನ್ನ ನಿಲುವನ್ನು ಬದಲಿಸಿಕೊಂಡಿದೆ.
ಪ್ರಸ್ತುತ, ಭಾರತ ಮತ್ತು ಪಾಕಿಸ್ತಾನ ಎರಡೂ ಟಿ 20 ವಿಶ್ವಕಪ್ 2026 ರಲ್ಲಿ ತಲಾ ಒಂದು ಪಂದ್ಯವನ್ನು ಆಡಿವೆ. ಎರಡೂ ತಂಡಗಳು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಭಾರತ ಅಮೆರಿಕವನ್ನು ಸೋಲಿಸಿದೆ ಮತ್ತು ಪಾಕಿಸ್ತಾನ ನೆದರ್ಲ್ಯಾಂಡ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement