ನವದೆಹಲಿ: ಭಾರತೀಯ ವಾಯುಪಡೆಯ (IAF) ಬಲವರ್ಧನೆಗಾಗಿ ಕೇಂದ್ರ ಸರ್ಕಾರವು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದೆ. ಸುಮಾರು ₹3.25 ಲಕ್ಷ ಕೋಟಿ ವೆಚ್ಚದಲ್ಲಿ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯವು ಅಧಿಕೃತ ಒಪ್ಪಿಗೆ ನೀಡಿದೆ. ಇದು ದೇಶದ ರಕ್ಷಣಾ ಖರೀದಿ ಇತಿಹಾಸದಲ್ಲೇ ಅತಿದೊಡ್ಡ ಒಪ್ಪಂದ ಎಂದು ಗುರುತಿಸಲ್ಪಟ್ಟಿದೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (DAC) ಸಭೆಯಲ್ಲಿ ಈ ಯೋಜನೆಗೆ ‘ಅಗತ್ಯದ ಅಂಗೀಕಾರ’ (Acceptance of Necessity – AoN) ನೀಡಲಾಯಿತು. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಭಾರತ ಭೇಟಿಗೆ ಮುನ್ನವೇ ಈ ನಿರ್ಧಾರ ಹೊರಬಿದ್ದಿರುವುದು ವಿಶೇಷವಾಗಿದೆ.
‘ಮೇಕ್ ಇನ್ ಇಂಡಿಯಾ’ಕ್ಕೆ ಭಾರಿ ಉತ್ತೇಜನ
ಒಟ್ಟು 114 ರಫೇಲ್ ವಿಮಾನಗಳ ಪೈಕಿ 18 ವಿಮಾನಗಳು ಫ್ರಾನ್ಸ್‌ನ ದಸಾಲ್ಟ್ ಏವಿಯೇಷನ್‌ನಿಂದ ನೇರವಾಗಿ ಸಿದ್ಧ ರೂಪದಲ್ಲಿ (Off-the-shelf) ಖರೀದಿಸಲಾಗುತ್ತದೆ. 96 ವಿಮಾನಗಳು ಭಾರತದಲ್ಲೇ ತಯಾರಾಗಲಿವೆ. ಈ ಒಪ್ಪಂದದ ಭಾಗವಾಗಿ ಸುಧಾರಿತ ಯುದ್ಧ ವಿಮಾನ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸಲಾಗುತ್ತದೆ. ಇದು ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಮತ್ತು ವ್ಯೂಹಾತ್ಮಕ ಸಹಭಾಗಿತ್ವಕ್ಕೆ ದೊಡ್ಡ ಶಕ್ತಿ ತುಂಬಲಿದೆ. ಮುಂದಿನ ಹಂತದಲ್ಲಿ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಕ್ಯಾಬಿನೆಟ್ ಸಮಿತಿ (CCS) ಅಂತಿಮ ಮುದ್ರೆ ಒತ್ತಲಿದೆ.
₹3.60 ಲಕ್ಷ ಕೋಟಿ ಮೊತ್ತದ ಇತರ ಪ್ರಮುಖ ಯೋಜನೆಗಳು
ಕೇವಲ ರಫೇಲ್ ಮಾತ್ರವಲ್ಲದೆ, ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗೆ ಸಂಬಂಧಿಸಿದ ಒಟ್ಟು ₹3.60 ಲಕ್ಷ ಕೋಟಿ ಮೌಲ್ಯದ ವಿವಿಧ ಪ್ರಸ್ತಾವನೆಗಳಿಗೆ ಡಿಎಸಿ ಚಾಲನೆ ನೀಡಿದೆ.
ಭಾರತೀಯ ವಾಯುಪಡೆ (IAF)
ಯುದ್ಧ ಕ್ಷಿಪಣಿಗಳು: ಭೂಮಿಯ ಮೇಲಿನ ಗುರಿಗಳನ್ನು ನಿಖರವಾಗಿ ನಾಶಪಡಿಸುವ ‘ಸ್ಟ್ಯಾಂಡ್-ಆಫ್’ ಸಾಮರ್ಥ್ಯದ ಯುದ್ಧ ಕ್ಷಿಪಣಿಗಳ ಖರೀದಿ.
AS-HAPS ಉಪಗ್ರಹ: ಹೈ ಆಲ್ಟಿಟ್ಯೂಡ್ ಸ್ಯೂಡೋ ಸ್ಯಾಟಲೈಟ್ ಮೂಲಕ ನಿರಂತರ ನಿಗಾ (ISR), ಸಂವಹನ ಮತ್ತು ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಬಲವರ್ಧನೆ ಉಪಕರಣಗಳಿಗೆ ಅನುಮೋದನೆ ನೀಡಲಾಗಿದೆ.
ಭಾರತೀಯ ಭೂಸೇನೆ (Army)
ವಿಭವ್ ; ಶತ್ರು ಪಡೆಗಳ ಮುನ್ನಡೆಯನ್ನು ತಡೆಯಲು ಸುಧಾರಿತ ಟ್ಯಾಂಕ್ ವಿರೋಧಿ ಮೈನ್ ವಿಭವ್ (Vibhav) ಖರೀದಿ ಹಾಗೂ ಟಿ-72 ಟ್ಯಾಂಕ್‌ಗಳು, ಬಿಎಂಪಿ-II ಮತ್ತು ಶಸ್ತ್ರಸಜ್ಜಿತ ರಿಕವರಿ ವಾಹನಗಳ ಜೀವಿತಾವಧಿ ಹೆಚ್ಚಿಸಲು ದುರಸ್ತಿ ಕಾರ್ಯಕ್ಕೆ ಅನುಮೋದನೆ ನೀಡಲಾಗಿದೆ.
ಭಾರತೀಯ ನೌಕಾಸೇನೆ ಮತ್ತು ಕರಾವಳಿ ರಕ್ಷಣೆ (Navy & ICG)
ಪಿ-8ಐ (P-8I) ವಿಮಾನ: ಸಮುದ್ರದ ಮೇಲೆ ನಿಗಾ ಇರಿಸಲು ಮತ್ತು ಜಲಂತರ್ಗಾಮಿ ನಿರೋಧಕ ಕಾರ್ಯಾಚರಣೆಗಾಗಿ ಹೆಚ್ಚುವರಿ ಪಿ-8ಐ ವಿಮಾನಗಳ ಖರೀದಿ.
ಗ್ಯಾಸ್ ಟರ್ಬೈನ್ ಜನರೇಟರ್: 04 ಮೆಗಾವ್ಯಾಟ್ ಸಾಮರ್ಥ್ಯದ ಮೆರೈನ್ ಗ್ಯಾಸ್ ಟರ್ಬೈನ್ ಆಧಾರಿತ ವಿದ್ಯುತ್ ಜನರೇಟರ್‌ಗಳ ಅಳವಡಿಕೆ.
ಡೋರ್ನಿಯರ್ ವಿಮಾನ: ಕರಾವಳಿ ರಕ್ಷಣಾ ಪಡೆಯ ಡೋರ್ನಿಯರ್ ವಿಮಾನಗಳಿಗೆ ಎಲೆಕ್ಟ್ರೋ-ಆಪ್ಟಿಕಲ್/ಇನ್ಫ್ರಾ-ರೆಡ್ ಸಿಸ್ಟಮ್‌ಗಳ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ.
ರಫೇಲ್ ಬಲ
ಪ್ರಸ್ತುತ ಭಾರತೀಯ ವಾಯುಪಡೆಯು ಎರಡು ಸ್ಕ್ವಾಡ್ರನ್‌ಗಳಲ್ಲಿ 36 ರಫೇಲ್ ವಿಮಾನಗಳನ್ನು ನಿರ್ವಹಿಸುತ್ತಿದೆ. ಇದರೊಂದಿಗೆ ನೌಕಾಸೇನೆಗಾಗಿ ₹63,000 ಕೋಟಿ ವೆಚ್ಚದಲ್ಲಿ 26 ರಫೇಲ್ ‘M’ (ನೌಕಾ ಆವೃತ್ತಿ) ವಿಮಾನಗಳನ್ನು ಈಗಾಗಲೇ ಆರ್ಡರ್ ಮಾಡಲಾಗಿದ್ದು, ಇವು ಐಎನ್‌ಎಸ್ ವಿಕ್ರಾಂತ ಮತ್ತು ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಗಳಿಂದ ಕಾರ್ಯನಿರ್ವಹಿಸಲಿವೆ.
ಈ ಹೊಸ 114 ರಫೇಲ್ ವಿಮಾನಗಳ ಸೇರ್ಪಡೆಯು ದೀರ್ಘ ವ್ಯಾಪ್ತಿಯ ಆಕ್ರಮಣಕಾರಿ ಸಾಮರ್ಥ್ಯವನ್ನು ಹೆಚ್ಚಿಸಲಿದ್ದು, ನೆರೆಯ ರಾಷ್ಟ್ರಗಳ ಸವಾಲುಗಳ ನಡುವೆ ಭಾರತದ ರಕ್ಷಣಾ ಕವಚವನ್ನು ಮತ್ತಷ್ಟು ಭದ್ರಪಡಿಸಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ