ಮದುವೆ ಮಾಡಿಸುವುದಾಗಿ ನಂಬಿಸಿ ಪಂಗನಾಮ : ದಿಬ್ಬಣದ ಸಮೇತ ತೆರಳಿದ್ದ ಗೋರಕ್ಷಕ ಬಿಟ್ಟು ಬಜರಂಗಿ ವಧು ಸಿಗದೆ ವಾಪಸ್‌…

ಹರಿಯಾಣ ಮೂಲದ ಗೋರಕ್ಷಕ ಬಿಟ್ಟು ಬಜರಂಗಿ ಅವರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ 30,000 ರೂ. ವಂಚಿಸಿರುವ ಘಟನೆ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
2023 ರ ನೂಹ್ ಕೋಮು ಗಲಭೆಯಲ್ಲಿ ಆರೋಪಿಯಾಗಿರುವ ಬಜರಂಗಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಮತ್ತು ಆತನ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರಿನ ಪ್ರಕಾರ, ಬಜರಂಗಿ ತನ್ನ ಪಕ್ಕದ ಮನೆಯ ಸಂಬಂಧಿಯಾದ ಬಂಟಿ ಎಂಬಾತನಿಗೆ ತಾನು ಮದುವೆಯಾಗಲು ಬಯಸುತ್ತಿರುವುದಾಗಿ ಮತ್ತು ಯಾವುದಾದರೂ ಸೂಕ್ತ ವಧು ಇದ್ದರೆ ತಿಳಿಸುವಂತೆ ಹೇಳಿದ್ದರು.
 ಬಂಟಿ ಎಂಬಾತ ಬಜರಂಗಿಗೆ ರಾಣಿ ಎಂಬ ಮಹಿಳೆಯನ್ನು ಪರಿಚಯಿಸಿದ್ದ. ಇವರಿಬ್ಬರು ಸೇರಿ ಮದುವೆ ಸಂಬಂಧ ಹೆಣ್ಣು ನೋಡಲು ಬಜರಂಗಿಯನ್ನು ಮೂರು ಬಾರಿ ಅಲಿಗಢಕ್ಕೆ ಕರೆದೊಯ್ದಿದ್ದರು, ಆದರೆ ಅಲ್ಲಿ ಯಾವುದೇ ಸಂಬಂಧ ಬಜರಂಗಿಗೆ ಇಷ್ಟವಾಗಿರಲಿಲ್ಲ.
 ನಂತರ ಬಂಟಿ ಒಬ್ಬ ಯುವತಿಯ ಫೋಟೋವನ್ನು ಬಜರಂಗಿಗೆ ಕಳುಹಿಸಿದ್ದ. ಅದು ಬಜರಂಗಿಗೆ ಇಷ್ಟವಾಗಿತ್ತು. ಸೆಪ್ಟೆಂಬರ್ 5, 2025 ರಂದು ಆರೋಪಿಗಳು ಆ ಯುವತಿ ಮತ್ತು ಆಕೆಯ ಕುಟುಂಬದೊಂದಿಗೆ ಬಜರಂಗಿಯ ಮನೆಗೆ ಬಂದಿದ್ದರು. ಫೆಬ್ರವರಿ 7 ರಂದು ಮದುವೆ ನಿಶ್ಚಯವಾಗಿತ್ತು.
ಮದುವೆಯ ತಯಾರಿಗಾಗಿ ಬಜರಂಗಿ ಫೆಬ್ರವರಿ 6 ರಂದು ಬಂಟಿಗೆ 30,000 ರೂ. ವರ್ಗಾಯಿಸಿದ್ದರು. ಆದರೆ, ಮದುವೆಯ ಮೆರವಣಿಗೆಯೊಂದಿಗೆ ಬಜರಂಗಿ ಅಲಿಗಢಕ್ಕೆ ತಲುಪಿದಾಗ, ಆರೋಪಿಗಳು ಅಲ್ಲಿರಲಿಲ್ಲ ಮತ್ತು ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು.
“ನಾನು ವಧುವಿಗೆ ಕರೆ ಮಾಡಿದಾಗ, ತನಗೆ ಮದುವೆಯ ಬಗ್ಗೆ ಏನೂ ತಿಳಿದಿಲ್ಲ ಎಂದು ಆಕೆ ಹೇಳಿದಳು. ನಾನು ಬರಿಗೈಲಿ ವಾಪಸ್ ಬರಬೇಕಾಯಿತು,” ಎಂದು ಬಜರಂಗಿ ದೂರಿನಲ್ಲಿ ತಿಳಿಸಿದ್ದಾರೆ.
ಬಜರಂಗಿಯ ಮನೆಯಲ್ಲಿ ವಧುವನ್ನು ಸ್ವಾಗತಿಸಲು ಎಲ್ಲಾ ಸಿದ್ಧತೆಗಳು ನಡೆದಿದ್ದವು, ಆದರೆ ಕೊನೆಯಲ್ಲಿ ಎಲ್ಲವೂ ಅಸ್ತವ್ಯಸ್ತಗೊಂಡಿತು ಎಂದು ಅಕ್ಕಪಕ್ಕದವರು ತಿಳಿಸಿದ್ದಾರೆ.
ಪೊಲೀಸರ ಕ್ರಮ:
ಒಟ್ಟು 1.20 ಲಕ್ಷ ರೂಪಾಯಿ ನೀಡುವ ಮಾತುಕತೆಯ ಭಾಗವಾಗಿ ಈ ಹಣವನ್ನು ನೀಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಶರಣ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಬಂಟಿ, ರಾಣಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement