ತಾರಿಕ್ ರೆಹಮಾನ್ ಪ್ರಧಾನಿಯಾದ ನಂತರ ಕ್ಷಿಪ್ರ ನಿರ್ಧಾರ: ಭಾರತೀಯರಿಗೆ ವೀಸಾ ಸೇವೆ ಪುನಃಸ್ಥಾಪಿಸಿದ ಬಾಂಗ್ಲಾದೇಶ

ಢಾಕಾ/ನವದೆಹಲಿ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ನಾಯಕ ತಾರಿಕ್ ರೆಹಮಾನ್ ಅವರು ಫೆಬ್ರವರಿ 17ರಂದು (ಮಂಗಳವಾರ) ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮುಂದಾಗಿರುವ ಅವರು, ಭಾರತೀಯ ನಾಗರಿಕರಿಗೆ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ವೀಸಾ ಸೇವೆಗಳನ್ನು ಪುನರಾರಂಭಿಸಲು ಆದೇಶಿಸಿದ್ದಾರೆ.
ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಶುಕ್ರವಾರದಿಂದ (ಫೆಬ್ರವರಿ 20) ಈ ಆದೇಶ ಜಾರಿಗೆ ಬಂದಿದ್ದು, ಇದರಿಂದಾಗಿ ಕಳೆದ ಎರಡು ತಿಂಗಳಿನಿಂದ ಉಂಟಾಗಿದ್ದ ಅನಿಶ್ಚಿತತೆ ಅಂತ್ಯಗೊಂಡಿದೆ.
ಎಲ್ಲಾ ವೀಸಾ ವಿಭಾಗಗಳು ಮುಕ್ತ: ಪ್ರವಾಸಿ (Tourist), ವೈದ್ಯಕೀಯ (Medical), ವಾಣಿಜ್ಯ (Business) ಮತ್ತು ಉದ್ಯೋಗ ಸೇರಿದಂತೆ ಎಲ್ಲಾ ವಿಭಾಗದ ವೀಸಾಗಳಿಗೆ ಭಾರತೀಯರು ಇನ್ನು ಮುಂದೆ ಅರ್ಜಿ ಸಲ್ಲಿಸಬಹುದು.
2025ರ ಡಿಸೆಂಬರ್‌ನಲ್ಲಿ ಭಾರತ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ರೆಹಮಾನ್ ಸರ್ಕಾರ ಇದನ್ನು ರದ್ದುಗೊಳಿಸುವ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಸಹಜಸ್ಥಿತಿಗೆ ತರಲು ಮೊದಲ ಹೆಜ್ಜೆ ಇಟ್ಟಿದೆ.
ಸಿಲ್ಹೆಟ್‌ನಲ್ಲಿ ಮಾತನಾಡಿದ ಭಾರತದ ಹಿರಿಯ ರಾಯಭಾರಿ ಅಧಿಕಾರಿ ಅನಿರುದ್ಧ ದಾಸ್, ಬಾಂಗ್ಲಾದೇಶಿ ನಾಗರಿಕರಿಗೂ ಶೀಘ್ರದಲ್ಲೇ ಪೂರ್ಣ ಪ್ರಮಾಣದ ವೀಸಾ ಸೇವೆಗಳನ್ನು ಭಾರತ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.
ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ವಿಶೇಷವಾಗಿ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರ ನಡೆದ ಪ್ರತಿಭಟನೆಗಳು ಸಂಬಂಧವನ್ನು ಮತ್ತಷ್ಟು ಹದಗೆಡಿಸಿದ್ದವು. ಆದರೆ, ತಾರಿಕ್ ರೆಹಮಾನ್ ಅವರ ಪದಗ್ರಹಣ ಸಮಾರಂಭಕ್ಕೆ ಭಾರತದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಹಾಜರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಮಂತ್ರಣ ಪತ್ರವನ್ನು ಹಸ್ತಾಂತರಿಸಿರುವುದು ಉಭಯ ದೇಶಗಳ ನಡುವೆ ಹೊಸ ಸ್ನೇಹದ ಮುನ್ಸೂಚನೆ ನೀಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement