ಪ್ರಾಮಾಣಿಕತೆಗೆ ಸಾಟಿಯಿಲ್ಲ : ಅಚಾತುರ್ಯದಿಂದ ಗುಜರಿಗೆ ಹೋಗಿದ್ದ 15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು 4 ತಿಂಗಳ ನಂತರ ಹಿಂದಿರುಗಿಸಿದ ವ್ಯಾಪಾರಿ…!

ಫರೀದಾಬಾದ್: ಹಳೆಯ ಸಾಮಾನುಗಳ ಜೊತೆ ಅಚಾತುರ್ಯದಿಂದ ಮಾರಾಟ ಮಾಡಲಾಗಿದ್ದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಗುಜರಿ ವ್ಯಾಪಾರಿಯೊಬ್ಬರು ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಫರೀದಾಬಾದ್ ನಿವಾಸಿ ಅಶೋಕ ಶರ್ಮಾ ಎಂಬವರು ಕಳೆದ ವರ್ಷ ಜನವರಿಯಲ್ಲಿ ಕುಂಭಮೇಳಕ್ಕೆ ಹೋಗುವ ಮುನ್ನ, ಕಳ್ಳರ ಭಯದಿಂದ ತಮ್ಮ ಮನೆಯಲ್ಲಿದ್ದ ಸುಮಾರು 100 ಗ್ರಾಂ ಚಿನ್ನದ ಆಭರಣಗಳನ್ನು ಒಂದು ಸಣ್ಣ ಬಾಕ್ಸ್‌ನಲ್ಲಿ ಇಟ್ಟು, ಅದನ್ನು ಹಳೆಯ ಚೀಲವೊಂದರೊಳಗೆ ಅಡಗಿಸಿಟ್ಟಿದ್ದರು. ಆದರೆ, ದೀಪಾವಳಿ ಹಬ್ಬದ ಸಮಯದಲ್ಲಿ ಮನೆ ಸ್ವಚ್ಛಗೊಳಿಸುವಾಗ, ಈ ಚೀಲವನ್ನು ಕಸವೆಂದು ಭಾವಿಸಿ ಗುಜರಿ ವ್ಯಾಪಾರಿಗೆ ಮಾರಾಟ ಮಾಡಲಾಗಿತ್ತು.
ಮನೆಯವರು ನಂತರ ತಮ್ಮ ತಪ್ಪನ್ನು ಅರಿತು ಗುಜರಿ ವ್ಯಾಪಾರಿಯನ್ನು ಸಂಪರ್ಕಿಸಿದರಾದರೂ, ಆಗ ಆಭರಣಗಳು ಪತ್ತೆಯಾಗಿರಲಿಲ್ಲ. ಇದರಿಂದ ನಿರಾಶರಾದ ಶರ್ಮಾ ಕುಟುಂಬದವರು ಆಭರಣ ಸಿಗುವ ಭರವಸೆಯನ್ನೇ ಬಿಟ್ಟಿದ್ದರು.

ನಾಲ್ಕು ತಿಂಗಳ ನಂತರ ಸಿಕ್ಕ ಚಿನ್ನ
ಗುಜರಿ ವ್ಯಾಪಾರಿ ಹಾಜಿ ಅಖ್ತರ್ ಖಾನ್ ಅವರು ಸುಮಾರು ನಾಲ್ಕು ತಿಂಗಳ ನಂತರ ತಮ್ಮ ಬಳಿಯಿದ್ದ ಹಳೆಯ ಸಾಮಾನುಗಳನ್ನು ವಿಂಗಡಿಸುವಾಗ, ಕಾಗದದಲ್ಲಿ ಸುತ್ತಿಟ್ಟಿದ್ದ ಈ ಚಿನ್ನದ ಆಭರಣಗಳು ಪತ್ತೆಯಾಗಿವೆ. ತಡಮಾಡದ ಖಾನ್, ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಎಸಿಪಿ ಜಿತೇಶ್ ಮಲ್ಹೋತ್ರಾ ಅವರ ಸಮ್ಮುಖದಲ್ಲಿ ಆಭರಣಗಳನ್ನು ಅಶೋಕ ಶರ್ಮಾ ಅವರಿಗೆ ಹಸ್ತಾಂತರಿಸಿದ್ದಾರೆ.
“ಈ ಚಿನ್ನ ಕಂಡ ತಕ್ಷಣ ಅದನ್ನು ಅದರ ವಾರಸುದಾರರಿಗೆ ತಲುಪಿಸುವುದು ನನ್ನ ಜವಾಬ್ದಾರಿ ಎಂದು ನನಗನ್ನಿಸಿತು. ನನ್ನ ಕುಟುಂಬ ಕೂಡ ನನ್ನ ನಿರ್ಧಾರಕ್ಕೆ ಬೆಂಬಲ ನೀಡಿತು,” ಎಂದು ಹಾಜಿ ಅಖ್ತರ್ ಖಾನ್ ಹೆಮ್ಮೆಯಿಂದ ಹೇಳಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಪೊಲೀಸರಿಂದ ಶ್ಲಾಘನೆ
ಗುಜರಿ ವ್ಯಾಪಾರಿಯ ಈ ಪ್ರಾಮಾಣಿಕ ಕಾರ್ಯವನ್ನು ಬಲ್ಲಬ್‌ಗಢ ಎಸಿಪಿ ಜಿತೇಶ ಮಲ್ಹೋತ್ರಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಇಂದಿನ ಕಾಲದಲ್ಲೂ ಪ್ರಾಮಾಣಿಕತೆ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅದೇ ಸಮಯದಲ್ಲಿ ಸಾರ್ವಜನಿಕರು ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರದಿಂದಿರಬೇಕು,” ಎಂದು ಅವರು ಕಿವಿಮಾತು ಹೇಳಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement