ಬಾಂಗ್ಲಾದೇಶ ಅಸ್ಥಿರಗೊಳಿಸಲು, ಸಾಂವಿಧಾನಿಕ ಶೂನ್ಯತೆ ಸೃಷ್ಟಿಸಲು ಯತ್ನ : ಮುಹಮ್ಮದ್‌ ಯೂನಸ್ ವಿರುದ್ಧ ಅಧ್ಯಕ್ಷರ ಗಂಭೀರ ಆರೋಪ

ಢಾಕಾ: ತಾರಿಕ್ ರೆಹಮಾನ್ ನೇತೃತ್ವದ ಹೊಸ ಸರ್ಕಾರ ಬಾಂಗ್ಲಾದೇಶದ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ, ಆ ದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಾಜಿ ಮುಖ್ಯ ಸಲಹೆಗಾರ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಯೂನಸ್ ಅವರು ತಮ್ಮನ್ನು ಅಸಂವಿಧಾನಿಕವಾಗಿ ಅಧಿಕಾರದಿಂದ ಕೆಳಗಿಳಿಸಲು “ಸಂಚು” ರೂಪಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಬಾಂಗ್ಲಾದೇಶದ ಬಂಗಾಳಿ ದೈನಿಕ ‘ಕಲೇರ್  ಕಾಂಠೋ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಧ್ಯಕ್ಷ ಶಹಾಬುದ್ದೀನ್ ಅವರು, ಯೂನಸ್ ಅವರ ಅಧಿಕಾರಾವಧಿಯಲ್ಲಿ ದೇಶವನ್ನು ಅಸ್ಥಿರಗೊಳಿಸಲು ಮತ್ತು ಸಾಂವಿಧಾನಿಕ ಶೂನ್ಯತೆಯನ್ನು ಸೃಷ್ಟಿಸಲು ಪ್ರಯತ್ನಗಳು ನಡೆದವು ಎಂದು ಪ್ರತಿಪಾದಿಸಿದ್ದಾರೆ.
“ಕಳೆದ ಒಂದೂವರೆ ವರ್ಷಗಳಲ್ಲಿ ನಾನು ಯಾವುದೇ ಚರ್ಚೆಗಳಲ್ಲಿ ಭಾಗಿಯಾಗಿರಲಿಲ್ಲ, ಆದರೂ ನನ್ನ ವಿರುದ್ಧ ವಿವಿಧ ಪಿತೂರಿಗಳನ್ನು ಹೆಣೆಯಲಾಗುತ್ತಿದೆ. ದೇಶದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಶಾಶ್ವತವಾಗಿ ನಾಶಮಾಡಲು ಮತ್ತು ಸಾಂವಿಧಾನಿಕ ಶೂನ್ಯತೆಯನ್ನು ಸೃಷ್ಟಿಸಲು ಅನೇಕ ಪ್ರಯತ್ನಗಳು ನಡೆದಿವೆ,” ಎಂದು ಅವರು ಢಾಕಾದ ತಮ್ಮ ಅಧಿಕೃತ ನಿವಾಸವಾದ ಬಂಗಭವನದಲ್ಲಿ ಹೇಳಿದ್ದಾರೆ.

ಸಾಂವಿಧಾನಿಕ ಜವಾಬ್ದಾರಿ  ಮರೆತ ಯೂನಸ್
ಮಧ್ಯಂತರ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯ ಸಲಹೆಗಾರ ಯೂನಸ್ ಅವರು ಸಂವಿಧಾನದ ಪ್ರಕಾರ ಅಧ್ಯಕ್ಷರ ಜೊತೆ ನಡೆಸಬೇಕಾದ ಸಂವಹನವನ್ನು ನಡೆಸಿಲ್ಲ ಎಂದು ಶಹಾಬುದ್ದೀನ್ ಹೇಳಿದ್ದಾರೆ. ವಿದೇಶಿ ಪ್ರವಾಸಗಳ ಬಗ್ಗೆಯಾಗಲಿ ಅಥವಾ ಸರ್ಕಾರದಪ್ರಮುಖ ವಿಷಯಗಳ ಬಗ್ಗೆ ಆಗಲಿ ತಮಗೆ ಮಾಹಿತಿ ನೀಡಿರಲಿಲ್ಲ, ಇದು “ಸಾಂವಿಧಾನಿಕ ಉಲ್ಲಂಘನೆ” ಎಂದು ಅವರು ಬಣ್ಣಿಸಿದ್ದಾರೆ.
“ಮುಖ್ಯ ಸಲಹೆಗಾರರು ಸಂವಿಧಾನದ ಯಾವುದೇ ನಿಯಮಗಳನ್ನು ಪಾಲಿಸಲಿಲ್ಲ. ಅವರು ವಿದೇಶಕ್ಕೆ ಹೋದಾಗಲೆಲ್ಲ, ಹಿಂತಿರುಗಿದ ನಂತರ ಅಧ್ಯಕ್ಷರನ್ನು ಭೇಟಿಯಾಗಿ ಪ್ರವಾಸದ ಫಲಿತಾಂಶಗಳ ಬಗ್ಗೆ ಲಿಖಿತವಾಗಿ ತಿಳಿಸಬೇಕಿತ್ತು. ಅವರು 14 ರಿಂದ 15 ಬಾರಿ ವಿದೇಶ ಪ್ರವಾಸ ಮಾಡಿದರು, ಆದರೆ ಒಮ್ಮೆಯೂ ನನಗೆ ಮಾಹಿತಿ ನೀಡಲಿಲ್ಲ. ಅವರು ನನ್ನನ್ನು ಭೇಟಿ ಮಾಡಲೇ ಇಲ್ಲ,” ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅರಮನೆಯ ಕೈದಿ’
ಕಳೆದ ಒಂದೂವರೆ ವರ್ಷಗಳಲ್ಲಿ ತಾನು ‘ಅರಮನೆಯ ಕೈದಿ’ಯಂತಾಗಿದ್ದೆ ಎಂದು ಶಹಾಬುದ್ದೀನ್ ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಯೋಜಿತ ಕೊಸೊವೊ ಮತ್ತು ಕತಾರ್ ವಿದೇಶಿ ಪ್ರವಾಸಗಳನ್ನು ಯೂನಸ್ ಆಡಳಿತವು ತಡೆಹಿಡಿದಿತ್ತು ಎಂದಿದ್ದಾರೆ. 133 ಸುಗ್ರೀವಾಜ್ಞೆಗಳನ್ನು ಹೊರಡಿಸುವಂತಹ ಪ್ರಮುಖ ನಿರ್ಧಾರಗಳ ಸಂದರ್ಭದಲ್ಲೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಚುನಾವಣೆಗೆ ಮುನ್ನ ಅಮೆರಿಕದೊಂದಿಗೆ ಮಾಡಿಕೊಂಡ ಒಪ್ಪಂದದ ಬಗ್ಗೆಯೂ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಸರ್ಕಾರದ ಇಂತಹ ಒಪ್ಪಂದಗಳ ಬಗ್ಗೆ ನನಗೆ ಮಾಹಿತಿ ನೀಡಬೇಕಿತ್ತು. ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಹಿಂದಿನ ಸರ್ಕಾರದ ಮುಖ್ಯಸ್ಥರು ಅಧ್ಯಕ್ಷರಿಗೆ ಮಾಹಿತಿ ನೀಡುತ್ತಿದ್ದರು. ಆದರೆ ಯೂನಸ್ ಅವರು ಮೌಖಿಕವಾಗಿಯೂ ಅಥವಾ ಲಿಖಿತವಾಗಿಯೂ ನನಗೆ ತಿಳಿಸಲಿಲ್ಲ,” ಎಂದಿದ್ದಾರೆ.

ಪಿತೂರಿಯ ಆರೋಪ
ತಮ್ಮನ್ನು ಅಧಿಕಾರದಿಂದ ತೆಗೆದುಹಾಕಲು ಮಾಜಿ ಮುಖ್ಯ ನ್ಯಾಯಾಧೀಶರೊಬ್ಬರನ್ನು ತಂದು ಕೂರಿಸುವ ಸಂಚು ನಡೆದಿತ್ತು ಎಂದು ಶಹಾಬುದ್ದೀನ್ ಬಹಿರಂಗಪಡಿಸಿದ್ದಾರೆ. ಆದರೆ ಸಾಂವಿಧಾನಿಕ ಅಡೆತಡೆಗಳನ್ನು ಉಲ್ಲೇಖಿಸಿ ನ್ಯಾಯಾಧೀಶರೊಬ್ಬರು ಆ ಪ್ರಸ್ತಾಪವನ್ನು ತಿರಸ್ಕರಿಸಿದರು ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 22, 2024 ರಂದು ಬಂಗಭವನದ ಹೊರಗೆ ನಡೆದ ಪ್ರತಿಭಟನೆಯನ್ನು “ಭೀಕರ ರಾತ್ರಿ” ಎಂದು ಬಣ್ಣಿಸಿದ ಅವರು, ಅಧ್ಯಕ್ಷರ ನಿವಾಸವನ್ನು ಲೂಟಿ ಮಾಡಲು ಪ್ರಯತ್ನಿಸಲಾಗಿತ್ತು, ನಂತರ ಮಿಲಿಟರಿ ನಿಯೋಜನೆಯೊಂದಿಗೆ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು ಎಂದು ನೆನಪಿಸಿಕೊಂಡಿದ್ದಾರೆ.
ಸೇನೆ ಮತ್ತು ಬಿಎನ್‌ಪಿ ಬೆಂಬಲ
ಸಾಂವಿಧಾನಿಕ  ನಿರಂತರತೆಯನ್ನು ಕಾಪಾಡಿಕೊಳ್ಳಲು ಬಾಂಗ್ಲಾದೇಶದ ಸೇನೆ ಮತ್ತು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ನಾಯಕತ್ವವು ತಮಗೆ ಸಹಾಯ ಮಾಡಿದೆ ಎಂದು ಶಹಾಬುದ್ದೀನ್ ಹೇಳಿದರು. “ನೀವು ಸಶಸ್ತ್ರ ಪಡೆಗಳ ಪರಮೋಚ್ಚ ಕಮಾಂಡರ್. ನಿಮ್ಮ ಸೋಲು ಎಂದರೆ ಇಡೀ ಸಶಸ್ತ್ರ ಪಡೆಗಳ ಸೋಲು. ನಾವು ಅದನ್ನು ಯಾವುದೇ ಬೆಲೆಯಲ್ಲಿ ತಡೆಯುತ್ತೇವೆ,” ಎಂದು ಮೂರು ಸೇನಾ ಪಡೆಗಳ ಮುಖ್ಯಸ್ಥರು ತಮಗೆ ಭರವಸೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement