ಕಾಂತಾರ ಮಿಮಿಕ್ರಿ ಪ್ರಕರಣ ; ನಟ ರಣವೀರ್‌ ಸಿಂಗ್‌ ಗೆ ಕರ್ನಾಟಕ ಹೈಕೋರ್ಟ್‌ ತರಾಟೆ

ಬೆಂಗಳೂರು : ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್ ಬಂಧನದಿಂದ ತಾತ್ಕಾಲಿಕ ಸಮಾಧಾನ ನೀಡಿದೆಯಾದರೂ, ಅವರ ವರ್ತನೆಯ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, “ಸೆಲೆಬ್ರಿಟಿಯಾದ ತಕ್ಷಣ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳಿದ್ದಾರೆ.
ಕೋರ್ಟ್ ಮಾರ್ಚ್ 2ರವರೆಗೆ ರಣವೀರ್ ಅವರನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಿದೆ, ಆದರೆ ಅದಕ್ಕೂ ಮುನ್ನ ನಟನಿಗೆ ಜವಾಬ್ದಾರಿಯ ಬಗ್ಗೆ ಕಟುವಾದ ಮಾತುಗಳಲ್ಲಿ ಬುದ್ಧಿವಾದ ಹೇಳಿದೆ.
“ನೀವು ರಣವೀರ್ ಸಿಂಗ್ ಆಗಿರಲಿ ಅಥವಾ ಯಾರೇ ಆಗಿರಲಿ, ನಾಲಿಗೆ ಹಗುರವಾಗಿರಬಾರದು! ಈ ಕೃತ್ಯದ ಹಿಂದೆ ಕೆಟ್ಟ ಉದ್ದೇಶ (mens rea) ಇತ್ತೇ ಎಂದು ನಾವು ನೋಡುತ್ತೇವೆ. ಆದರೆ ಒಬ್ಬ ನಟನಾಗಿ ನೀವು ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರುತ್ತೀರಿ, ನೀವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನೀವು ದೈವದ ಬಗ್ಗೆ ಮಾತನಾಡುವಾಗ ಅವುಗಳನ್ನು ‘ಭೂತ’ (Ghost) ಎಂದು ಕರೆಯಲು ಸಾಧ್ಯವಿಲ್ಲ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಕ್ಕು ಇಲ್ಲ ಎಂದರು.  ರಣವೀರ್‌ ಸಿಂಗ್‌ ಸೂಪರ್‌ ಸ್ಟಾರ್‌ ಆದ ಮಾತ್ರಕ್ಕೆ ಅವರು ಕಾನೂನಿನಿಗಿಂತ ಮೇಲಿಲ್ಲ” ಎಂದು ಪೀಠ ಹೇಳಿತು.
ಏನಿದು ವಿವಾದ? (IFFI ಘಟನೆ)
ಕಳೆದ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು. ವೇದಿಕೆಯ ಮೇಲೆ ಬಂದ ರಣವೀರ್ ಸಿಂಗ್, ‘ಕಾಂತಾರ’ ಚಿತ್ರದ ರಿಷಬ್ ಶೆಟ್ಟಿ ಅವರ ದೈವ ನರ್ತನವನ್ನು ಅನುಕರಿಸಲು ಪ್ರಯತ್ನಿಸಿದ್ದರು. ಆದರೆ ಅದನ್ನು ಗೌರವಯುತವಾಗಿ ಮಾಡುವ ಬದಲು, ವಿಚಿತ್ರವಾದ ಹಾವಭಾವಗಳ ಮೂಲಕ ಅಣಕ ಮಾಡಿದ್ದರು. ಅಷ್ಟೇ ಅಲ್ಲದೆ, ದೈವಗಳನ್ನು ‘ಭೂತಗಳು’ (Ghosts) ಎಂದು ಕರೆದಿದ್ದರು.
ವೇದಿಕೆಯ ಮೇಲಿದ್ದ ರಿಷಬ್ ಶೆಟ್ಟಿ ಅವರು ರಣವೀರ್ ಅವರನ್ನು ಎರಡು ಬಾರಿ ತಡೆಯಲು ಪ್ರಯತ್ನಿಸಿದ್ದರು. ಆದರೂ ರಣವೀರ್ ಅದನ್ನು ಮುಂದುವರಿಸಿದ್ದು ಭಕ್ತ ಸಮೂಹದ ಆಕ್ರೋಶಕ್ಕೆ ಕಾರಣವಾಗಿತ್ತು.
 ಮಾರ್ಚ್ 2ರವರೆಗೆ ರಣವೀರ್ ಸಿಂಗ್‌ಗೆ  ಬಂಧನದಿಂದ ಹೈಕೋರ್ಟ್‌ ರಕ್ಷಣೆ ನೀಡಿದೆ. ಅಲ್ಲಿಯವರೆಗೆ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಳ್ಳುವಂತಿಲ್ಲ. ಆದರೆ, ನಟ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement