ನಾವು ಸಾಮಾನ್ಯವಾಗಿ ಚಾಕೊಲೇಟ್ ಎಂದರೆ ಪುಟ್ಟ ಬಾರ್ಗಳು, ಟ್ರಫಲ್ಸ್ ಅಥವಾ ಸುಂದರವಾದ ಕೇಕ್ಗಳನ್ನು ಕಲ್ಪಿಸಿಕೊಳ್ಳುತ್ತೇವೆ. ಆದರೆ, ಇಟಲಿಯ ಮಿಲನ್ನಲ್ಲಿ ಚಾಕೊಲೇಟ್ ಕೇವಲ ತಿನ್ನುವ ವಸ್ತುವಾಗಿ ಉಳಿಯದೆ, ಒಂದು ಬೃಹತ್ ಕಲಾಕೃತಿಯಾಗಿ ರೂಪಾಂತರಗೊಂಡಿದೆ. ಹೌದು, ಬರೋಬ್ಬರಿ 55.27 ಮೀಟರ್ (181 ಅಡಿ 3 ಇಂಚು) ಉದ್ದದ ಚಾಕೊಲೇಟ್ ರೈಲು ಈಗ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ!
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬೃಹತ್ ರೈಲಿನ ದೃಶ್ಯಗಳು ವೈರಲ್ ಆಗುತ್ತಿವೆ. ಮಾಲ್ಟಾದ ಇನ್ಸ್ಟಿಟ್ಯೂಟ್ ಆಫ್ ಟೂರಿಸಂ ಸ್ಟಡೀಸ್ನ ಆಂಡ್ರ್ಯೂ ಫರುಗ್ಗಿಯಾ ಮತ್ತು ಇಟಲಿಯ ಪೇಸ್ಟ್ರಿ ತಜ್ಞರ ತಂಡ ಸೇರಿ ಈ ಅದ್ಭುತವನ್ನು ಸೃಷ್ಟಿಸಿದೆ. ಈ ರೈಲು ಎಷ್ಟು ದೊಡ್ಡದಿದೆ ಎಂದರೆ, ಇದರ ಉದ್ದ ಒಂದು ಒಲಿಂಪಿಕ್ ಈಜುಕೊಳಕ್ಕಿಂತ ಹೆಚ್ಚಿದೆ ಮತ್ತು ಬೋಯಿಂಗ್ 747 ಜಂಬೋ ಜೆಟ್ ವಿಮಾನದ ರೆಕ್ಕೆಗಳ ಅಗಲಕ್ಕೆ ಹತ್ತಿರದಲ್ಲಿದೆ.
ಬೆಲ್ಜಿಯನ್ ಚಾಕೊಲೇಟ್ನ ಕರಾಮತ್ತು
ಈ ಸಂಪೂರ್ಣ ರೈಲನ್ನು ಅತ್ಯುತ್ತಮ ಗುಣಮಟ್ಟದ ಬೆಲ್ಜಿಯನ್ ಚಾಕೊಲೇಟ್ ಬಳಸಿ ತಯಾರಿಸಲಾಗಿದೆ. ಇದರಲ್ಲಿ ಒಂದು ಇಂಜಿನ್ (ಲೊಕೊಮೊಟಿವ್) ಮತ್ತು 22 ಬೋಗಿಗಳಿವೆ. ವಿಶೇಷವೆಂದರೆ, ಪ್ರತಿಯೊಂದು ಬೋಗಿಯೂ ಸುಮಾರು 160 ಕೆಜಿ ತೂಕ ಹೊಂದಿದೆ.
ಸೂಕ್ಷ್ಮ ಕೆತ್ತನೆಯ ಕಲಾಕೃತಿ
ಈ ರೈಲನ್ನು ಕೇವಲ ಉದ್ದವಾಗಿ ಮಾಡಿಲ್ಲ, ಬದಲಿಗೆ ಅತ್ಯಂತ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆ. ರೈಲಿನ ಮುಂಭಾಗವು ಹಳೆಯ ಕಾಲದ ಹಬೆ ಇಂಜಿನ್ನಂತಿದ್ದು, ಚಿನ್ನದ ಬಣ್ಣದ ವಿವರಣೆಗಳಿಂದ ಕೂಡಿದೆ. ಇದರ ಮೇಲೆ ‘2023’ ಮತ್ತು ‘Express’ ಎಂಬ ಅಕ್ಷರಗಳನ್ನು ಕೆತ್ತಲಾಗಿದೆ.
ಇಂಜಿನ್ನ ಹಿಂದೆ ಇರುವ ಒಂದು ಬೋಗಿಯಲ್ಲಿ ಕಲ್ಲಿದ್ದಲಿನ ತುಂಡುಗಳಂತೆ ಕಾಣುವ ಚಾಕೊಲೇಟ್ ಚೂರುಗಳನ್ನು ತುಂಬಿಸಲಾಗಿದೆ.
ಐಷಾರಾಮಿ ಸೀಟುಗಳು: ಪ್ಯಾಸೆಂಜರ್ ಬೋಗಿಯ ಒಳಗೆ ಇಣುಕಿ ನೋಡಿದರೆ, ಅಲ್ಲಿ ಸಾಲಾಗಿ ಜೋಡಿಸಿದ ಪುಟ್ಟ ಚಾಕೊಲೇಟ್ ಸೀಟುಗಳು ಮತ್ತು ಮೇಜುಗಳು ಕಾಣಸಿಗುತ್ತವೆ. ಪ್ರತಿಯೊಂದು ಆಸನವು ಕ್ವಿಲ್ಟೆಡ್ ಮಾದರಿಯನ್ನು ಹೊಂದಿದೆ. ಅವುಗಳ ನಡುವೆ ಸಣ್ಣ ಮೇಜುಗಳಿದ್ದವು.
ಸಂಪೂರ್ಣವಾಗಿ ಚಾಕೊಲೇಟ್ ಹಳಿಗಳ ಮೇಲೆಯೇ ನಿಂತಿರುವ ಈ ರೈಲು, ಕಲೆಯ ಜೊತೆಗೆ ಇಂಜಿನಿಯರಿಂಗ್ ಚಾತುರ್ಯವನ್ನೂ ಪ್ರದರ್ಶಿಸುತ್ತದೆ. ಸದ್ಯ ಈ “ಸ್ವೀಟ್ ಎಕ್ಸ್ಪ್ರೆಸ್” ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಗೆಲ್ಲುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ