ಇರಾನ್ ಸುಪ್ರೀಂ ನಾಯಕ ಖಮೇನಿ ಸಾವಿನ ನಂತ್ರ ಉತ್ತರ ಪ್ರದೇಶ ಹಳ್ಳಿಗೂ ಇರಾನ್ ಆಡಳಿತಕ್ಕೂ ಇರುವ ನಂಟು ಮತ್ತೆ ಮುನ್ನೆಲೆಗೆ

ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಮಧ್ಯಪ್ರಾಚ್ಯದಲ್ಲಿ ಯುಧದ ಆತಂಕ ಎದುರಾಗಿದೆ. ಈ ಘಟನೆಯ ನಡುವೆಯೇ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ‘ಕಿಂತೂರ್’ ಎಂಬ ಪುಟ್ಟ ಗ್ರಾಮವೊಂದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ, ಖಮೇನಿಗೂ ಈ ಹಳ್ಳಿಗೂ ಇರುವ ಆಳವಾದ ಪೂರ್ವಜರ ಸಂಬಂಧ.
ಶಿಯಾ ವಿದ್ವಾಂಸರ ಕೇಂದ್ರವೆಂದೇ ಐತಿಹಾಸಿಕವಾಗಿ ಹೆಸರುವಾಸಿಯಾದ ಉತ್ತರ ಪ್ರದೇಶದ ಕಿಂತೂರ್ ಗ್ರಾಮವು, 1979ರ ಇಸ್ಲಾಮಿಕ್ ಕ್ರಾಂತಿಯ ರೂವಾರಿ ಮತ್ತು ಇರಾನ್ ಗಣರಾಜ್ಯದ ಸ್ಥಾಪಕ ಆಯತೊಲ್ಲಾ ರುಹೊಲ್ಲಾ ಮುಸಾವಿ ಖೊಮೇನಿ ಕುಟುಂಬದ ಮೂಲ ಮನೆಯಾಗಿದೆ.

ಖೊಮೇನಿಯ ಭಾರತದ ನಂಟು
ಆಯತೊಲ್ಲಾ ರುಹೊಲ್ಲಾ ಮುಸಾವಿ ಖೊಮೇನಿಯವರ ಅಜ್ಜ ಸೈಯದ್ ಅಹ್ಮದ್ ಮುಸಾವಿ ಜನಿಸಿದ್ದು ಇದೇ ಕಿಂತೂರ್ ಗ್ರಾಮದಲ್ಲಿ. 19ನೇ ಶತಮಾನದ ಆರಂಭದಲ್ಲಿ ಜನಿಸಿದ ಮುಸಾವಿ, ಶಿಕ್ಷಣಕ್ಕಾಗಿ ಭಾರತವನ್ನು ತೊರೆದು ಇರಾಕ್‌ನ ನಜಾಫ್‌ಗೆ ತೆರಳಿದರು. ನಂತರ 1834ರಲ್ಲಿ ಇರಾನ್‌ನ ‘ಖೊಮೇನ್’ ಎಂಬ ನಗರದಲ್ಲಿ ನೆಲೆಸಿದರು. ಅಲ್ಲಿಂದ ಬೆಳೆದ ಅವರ ಕುಟುಂಬವು ಒಂದು ಶತಮಾನದ ನಂತರ ಇರಾನ್‌ನಲ್ಲಿ ಅತ್ಯುನ್ನತ ರಾಜಕೀಯ ಮತ್ತು ಧಾರ್ಮಿಕ ಅಧಿಕಾರವನ್ನು ಪಡೆಯಿತು. ಮುಸಾವಿ ಅವರು ತಮ್ಮ ಹೆಸರಿನ ಜೊತೆಗೆ “ಹಿಂದಿ” ಎಂಬ ಬಿರುದನ್ನು ಉಳಿಸಿಕೊಂಡಿದ್ದರು, ಇದು ಅವರ ಭಾರತೀಯ ಮೂಲದ ಗುರುತಾಗಿದೆ.

ಯಾರು ಈ ಆಯತೊಲ್ಲಾ ಖೊಮೇನಿ?
1979ರಲ್ಲಿ ಮೊಹಮ್ಮದ್ ರೆಜಾ ಪಹ್ಲವಿಯ ರಾಜಪ್ರಭುತ್ವವನ್ನು ಉರುಳಿಸಿ ಇರಾನ್‌ನಲ್ಲಿ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಿದವರು ಆಯತೊಲ್ಲಾ ಖೊಮೇನಿ. ಇವರು ಇರಾನ್‌ನ ಮೊದಲ ಸುಪ್ರೀಂ ಲೀಡರ್ ಆಗಿ ವಿದೇಶಾಂಗ ನೀತಿ ಮತ್ತು ಧಾರ್ಮಿಕ ಗುರುತನ್ನು ಮರುರೂಪಿಸಿದರು. ಬೆಂಬಲಿಗರಿಗೆ ಇವರು ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದರೆ, ವಿಮರ್ಶಕರಿಗೆ ಕಟ್ಟುನಿಟ್ಟಾದ ಧಾರ್ಮಿಕ ಆಡಳಿತದ ಸೃಷ್ಟಿಕರ್ತರಾಗಿದ್ದರು.

ಉತ್ತರಾಧಿಕಾರದ ಪ್ರಶ್ನೆ
1989ರಲ್ಲಿ ಖೊಮೇನಿ ನಿಧನದ ನಂತರ ಅಲಿ ಖಮೇನಿ ಅಧಿಕಾರ ವಹಿಸಿಕೊಂಡರು. ಅವರು ಖೊಮೇನಿಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿದರು ಮತ್ತು ‘ಕ್ರಾಂತಿಕಾರಿ ಕಾವಲು ಪಡೆ’ಯನ್ನು (Revolutionary Guard) ಬಲಪಡಿಸಿದರು. ಸುಮಾರು 88 ಸದಸ್ಯರನ್ನೊಳಗೊಂಡ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ (ಧಾರ್ಮಿಕ ಪಂಡಿತರ ಮಂಡಳಿ) ಖಮೇನಿಯ ಉತ್ತರಾಧಿಕಾರಿಯನ್ನು ಆರಿಸಬೇಕಿದೆ. ಆದರೆ ಸದ್ಯಕ್ಕೆ ಯಾರು ಆ ಸ್ಥಾನಕ್ಕೆ ಏರುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿಯಲ್ಲಿ ದಾಳಿ ನಡೆಸುವ ಸಂದರ್ಭದಲ್ಲಿ, ಇರಾನ್ ಜನತೆಗೆ ತಮ್ಮ ಸರ್ಕಾರವನ್ನು ತಾವೇ ವಹಿಸಿಕೊಳ್ಳುವಂತೆ ಕರೆ ನೀಡಿದ್ದರು. ಇರಾನ್‌ನ 9 ಕೋಟಿ ಜನಸಂಖ್ಯೆಯಲ್ಲಿ ಅನೇಕರು ಆಡಳಿತದ ವಿರುದ್ಧ ಅಸಮಾಧಾನ ಹೊಂದಿದ್ದರೂ, ಅಧಿಕಾರವನ್ನು ಉಳಿಸಿಕೊಳ್ಳಲು ಕ್ರಾಂತಿಕಾರಿ ಕಾವಲು ಪಡೆ ಎಂತಹ ಬಲಪ್ರಯೋಗಕ್ಕೂ ಮುಂದಾಗಬಹುದು ಎಂಬ ಆತಂಕವಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement