ಕೇವಲ 24 ಗಂಟೆಗಳಲ್ಲಿ ಇರಾನಿನ 1000 ಟಾರ್ಗೆಟ್‌ಗಳ ಮೇಲೆ ಅಮೆರಿಕದ ದಾಳಿಗೆ ʼಎಐ(AI)ʼ ಸಹಾಯ ಮಾಡಿದ್ದು ಹೇಗೆ ಗೊತ್ತೆ…?

 2026ರ ಯುದ್ಧಗಳೆಂದರೆ ಕೇವಲ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಸೈನಿಕರ ಹೋರಾಟ ಎಂದು ಭಾವಿಸಿದ್ದರೆ, ನಮ್ಮ ಆಲೋಚನೆ ಬದಲಿಸಿಕೊಳ್ಳುವ ಸಮಯ ಬಂದಿದೆ. ಈ ವರ್ಷ ಇರಾನ್‌ನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಕಾರ್ಯಾಚರಣೆ ನಡೆಸುತ್ತಿರುವಾಗ ಯುದ್ಧ ತಂತ್ರದ ಮುಂಚೂಣಿಯಲ್ಲಿ ನಿಂತಿದ್ದು ಸೈನಿಕರಲ್ಲ, ಬದಲಿಗೆ ಆಂಥ್ರೋಪಿಕ್ (Anthropic) ಕಂಪನಿಯ ‘ಕ್ಲಾಡ್ ಎಐ’ ಎಂಬ ಅಚ್ಚರಿಯ ಕೃತಕ ಬುದ್ಧಿಮತ್ತೆಯ  ತಾಂತ್ರಿಕ ಸಾಧನ !
ಸಾಮಾನ್ಯ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾದ ಈ ಭಾಷಾ ಮಾದರಿಯನ್ನು (LLM) ಈಗ ಮಿಲಿಟರಿ ಗುಪ್ತಚರ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದು ಬೃಹತ್ ಪ್ರಮಾಣದ ದತ್ತಾಂಶಗಳನ್ನು ವಿಶ್ಲೇಷಿಸಲು ಮತ್ತು ಯುದ್ಧದ ಸಮಯದಲ್ಲಿ ಕಮಾಂಡರ್‌ಗಳು ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಿದೆ.
 
ಮಾಹಿತಿಯಿಂದ ಹಿಡಿದು ಕಾರ್ಯಾಚರಣೆಯವರೆಗೆ
ಇರಾನ್ ಕಾರ್ಯಾಚರಣೆಯ ಮೊದಲ 24 ಗಂಟೆಗಳಲ್ಲೇ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಸುಮಾರು 1,000 ಸ್ಟ್ರೈಕ್ ಟಾರ್ಗೆಟ್‌ಗಳನ್ನು (ದಾಳಿ ನಡೆಸಬೇಕಾದ ಸ್ಥಳಗಳು) ಗುರುತಿಸಿ ಆದ್ಯತೆ ನೀಡಿದ್ದವು. ಇದಕ್ಕೆ ಪ್ರಮುಖ ಕಾರಣ ಎಐ ತಂತ್ರಜ್ಞಾನ.
ಆಧುನಿಕ ಯುದ್ಧಗಳಲ್ಲಿ ಸ್ಯಾಟಲೈಟ್ ಚಿತ್ರಗಳು, ಡ್ರೋನ್ ದೃಶ್ಯಾವಳಿಗಳು ಮತ್ತು ಗುಪ್ತಚರ ವರದಿಗಳಿಂದ ಅಪಾರ ಪ್ರಮಾಣದ ಮಾಹಿತಿ ಪ್ರವಾಹದಂತೆ ಹರಿದುಬರುತ್ತದೆ. ಇದನ್ನು ಮಾನವರು ಕ್ಷಿಪ್ರವಾಗಿ ನೈಜ ಸಮಯ(real time)ದಲ್ಲಿ ವಿಶ್ಲೇಷಿಸುವುದು ಕಷ್ಟಸಾಧ್ಯ. ಪೆಂಟಗನ್‌ನ ‘ಮಾವೆನ್ ಸ್ಮಾರ್ಟ್ ಸಿಸ್ಟಮ್’ನಲ್ಲಿ ಅಳವಡಿಸಲಾದ ಕ್ಲಾಡ್ ಎಐ, ಈ ಎಲ್ಲಾ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಸ್ಕ್ಯಾನ್ ಮಾಡಿ, ಮಾದರಿಗಳನ್ನು ಗುರುತಿಸಿ, ಸಂಭವನೀಯ ದಾಳಿ ಮಾಡಬೇಕಾದ ಸ್ಥಗಳನ್ನು ಪಟ್ಟಿ ಮಾಡುತ್ತದೆ. ‘ದಿ ಗಾರ್ಡಿಯನ್’ ವರದಿಯ ಪ್ರಕಾರ, ಈ ಎಐ ಬಳಕೆಯಿಂದ ದಾಳಿಯ ಯೋಜನೆಯ ಸಮಯವು ದಿನಗಳಿಂದ ಕೇವಲ ಗಂಟೆಗಳಿಗೆ ಇಳಿಕೆಯಾಗಿದೆ.
ನಿರ್ಧಾರ ತೆಗೆದುಕೊಳ್ಳುವಲ್ಲಿ ಎಐ ಪಾತ್ರ
ಕ್ಲಾಡ್ ಎಐ ಮಾನವ ತೆಗೆದುಕೊಳ್ಳುವ ನಿರ್ಧಾರಗಳನ್ನು ಸಂಪೂರ್ಣವಾಗಿ ಬದಲಿಸದಿದ್ದರೂ, ಯುದ್ಧದ ಸಂಭವನೀಯ ರಿಸಲ್ಟ್‌ಗಳ ಸಾಧ್ಯತೆಯನ್ನು ಊಹಿಸುವ ಮೂಲಕ ಮಾರ್ಗದರ್ಶನ ನೀಡುತ್ತದೆ. ಈ ತಂತ್ರಜ್ಞಾನವು ಈಗ ಮಿಲಿಟರಿ ವ್ಯವಸ್ಥೆಯಲ್ಲಿ ಅತ್ಯಗತ್ಯ ಭಾಗವಾಗಿ ಮಾರ್ಪಟ್ಟಿದೆ.
ಕ್ಲಾಡ್ ಮಾತ್ರವಲ್ಲದೆ, ಶತ್ರುಗಳ ಚಲನವಲನಗಳ ಬಗ್ಗೆ ಮುನ್ಸೂಚನೆ ನೀಡುವ ‘ಪ್ರೆಡಿಕ್ಟಿವ್ ಮಾಡೆಲಿಂಗ್’ ಮತ್ತು ವರ್ಚುವಲ್ ಯುದ್ಧ ಪ್ರಯೋಗಾಲಯ(battle labs)ಗಳನ್ನು ರಚಿಸುವ ಎಐ ಉಪಕರಣಗಳು ಕೂಡ ಆಧುನಿಕ ಸಮರ ಕಲೆಗೆ ಹೊಸ ರೂಪ ನೀಡುತ್ತಿವೆ.
ಯುದ್ಧದ ವೇಗ ಮತ್ತು ಎದುರಾಗಿರುವ ಸವಾಲುಗಳು
ಎಐ ಬಳಕೆಯಿಂದ ಯುದ್ಧದ ನಿರ್ಧಾರಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ. ಇದನ್ನು ತಜ್ಞರು “ಡಿಸಿಷನ್ ಕಂಪ್ರೆಷನ್” (ನಿರ್ಧಾರಗಳ ಸಂಕೋಚನ) ಎಂದು ಕರೆಯುತ್ತಾರೆ. ಆದರೆ ಇದು ಅಪಾಯಕಾರಿ ಕೂಡ ಹೌದು. ‘ನೇಚರ್’ ಪತ್ರಿಕೆಯ ಪ್ರಕಾರ, ಎಐ ನೀಡುವ ವೇಗದ ಶಿಫಾರಸುಗಳಿಂದಾಗಿ ಮಾನವ ಆಳವಾಗಿ ಯೋಚಿಸದೆ ಕೇವಲ ‘ರಬ್ಬರ್ ಸ್ಟಾಂಪ್’ಗಳಂತೆ ನಿರ್ಧಾರಗಳನ್ನು ಅನುಮೋದಿಸುವ ಅಪಾಯವಿದೆ.
ಆಂಥ್ರೋಪಿಕ್ ಮತ್ತು ಟ್ರಂಪ್ ನಡುವಿನ ರಾಜಕೀಯ ಸಂಘರ್ಷ
ಕ್ಲಾಡ್ ಎಐ ಅನ್ನು ಅಭಿವೃದ್ಧಿಪಡಿಸಿದ ಆಂಥ್ರೋಪಿಕ್ ಸಂಸ್ಥೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿವೆ. ಇರಾನ್ ಕಾರ್ಯಾಚರಣೆಯಲ್ಲಿ ಈ ಎಐ ಬಳಕೆಯಾಗುತ್ತಿದ್ದರೂ, ಟ್ರಂಪ್ ಆಡಳಿತವು ಆಂಥ್ರೋಪಿಕ್ ತಂತ್ರಜ್ಞಾನವನ್ನು ಬಳಸದಂತೆ ಫೆಡರಲ್ ಏಜೆನ್ಸಿಗಳಿಗೆ ನಿರ್ಬಂಧ ಹೇರಿದೆ. ಸಾಮೂಹಿಕ ಕಣ್ಗಾವಲು ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರ ವ್ಯವಸ್ಥೆಗಳ ಬಳಕೆಯ ವಿಚಾರದಲ್ಲಿ ಪೆಂಟಗನ್ ಮತ್ತು ಕಂಪನಿಯ ನಡುವೆ ಉಂಟಾದ ವಿವಾದವೇ ಇದಕ್ಕೆ ಕಾರಣ ಎನ್ನಲಾಗಿದೆ.
ಆದರೂ, ಮಿಲಿಟರಿ ವ್ಯವಸ್ಥೆಯಲ್ಲಿ ಕ್ಲಾಡ್ ಎಐನ ಪ್ರಾಮುಖ್ಯತೆ ಎಷ್ಟು ಹೆಚ್ಚಿದೆಯೆಂದರೆ, ಈ ನಿಷೇಧದ ನಡುವೆಯೂ ರಹಸ್ಯ ಕಾರ್ಯಾಚರಣೆಗಳಲ್ಲಿ ಇದರ ಬಳಕೆ ಮುಂದುವರಿದಿದೆ.
ಇರಾನ್ ಸಂಘರ್ಷವು ಯುದ್ಧ ಭೂಮಿಯಲ್ಲಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (ಎಐ) ಎಂತಹ ಕ್ರಾಂತಿ ಮಾಡಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ತಾಂತ್ರಿಕ ದಕ್ಷತೆ ಮತ್ತು ನೈತಿಕ ಹೊಣೆಗಾರಿಕೆಯ ಮಧ್ಯೆಸಮತೋಲನ ಕಾಯ್ದುಕೊಳ್ಳುವುದು ಈಗ ಜಗತ್ತಿನ ಮುಂದಿರುವ ದೊಡ್ಡ ಸವಾಲು. ಭವಿಷ್ಯದ ಯುದ್ಧಗಳಲ್ಲಿ ಮನುಷ್ಯ ಮತ್ತು ಕೃತಕ ಬುದ್ಧಿಮತ್ತೆ ಬೇರ್ಪಡಿಸಲಾಗದಂತೆ ಬೆಸೆದುಕೊಂಡಿರುತ್ತವೆ ಎಂಬುದಕ್ಕೆ ಇದು ಸ್ಪಷ್ಟ ಮುನ್ಸೂಚನೆಯಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement