ಊಹಿಸಲೂ ಆಗದೇ ಇರುವುದರ ಬಗ್ಗೆ ಸಿದ್ಧರಾಗಿ : ಮಧ್ಯಪ್ರಾಚ್ಯ ಸಂಘರ್ಷ; ಜಾಗತಿಕ ಹಣದುಬ್ಬರದ ಬಗ್ಗೆ ಐಎಂಎಫ್ ಮುಖ್ಯಸ್ಥೆ ಎಚ್ಚರಿಕೆ

ಟೋಕಿಯೋ/ನವದೆಹಲಿ: ಮಧ್ಯಪ್ರಾಚ್ಯದಲ್ಲಿ (Middle East) ನಡೆಯುತ್ತಿರುವ ನಿರಂತರ ಸಂಘರ್ಷಗಳು ಜಾಗತಿಕ ಹಣದುಬ್ಬರದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಸೋಮವಾರ ಎಚ್ಚರಿಸಿದ್ದಾರೆ. ಒಂದು ವೇಳೆ ತೈಲ ಬೆಲೆಗಳು ದೀರ್ಘಕಾಲದವರೆಗೆ ಏರಿಕೆಯಲ್ಲೇ ಮುಂದುವರಿದರೆ ವಿಶ್ವದ ಆರ್ಥಿಕ ಚೇತರಿಕೆಗೆ ಹಿನ್ನಡೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
 ಜಪಾನ್‌ನ ಹಣಕಾಸು ಸಚಿವಾಲಯ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಜಾರ್ಜಿವಾ ಅವರು, ತೈಲ ಬೆಲೆಯಲ್ಲಿ 10% ಏರಿಕೆಯಾದರೆ, ಅದು ಜಾಗತಿಕ ಹಣದುಬ್ಬರವನ್ನು ಸುಮಾರು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಬಹುದು ಎಂದು ಜಾರ್ಜೀವಾ ತಿಳಿಸಿದ್ದಾರೆ
. “ಈ ಹೊಸ ಜಾಗತಿಕ ಪರಿಸರದಲ್ಲಿ ನೀತಿ ನಿರೂಪಕರಿಗೆ ನನ್ನ ಸಲಹೆಯೆಂದರೆ ಯೋಚಿಸಲಾಗದ ಬಗ್ಗೆ ಯೋಚಿಸಿ ಮತ್ತು ಅದಕ್ಕೆ ಸಿದ್ಧರಾಗಿರಿ” ಎಂದು ಅವರು ಹೇಳಿದ್ದಾರೆ.
 ಭಾರತದ ಹಣಕಾಸು ಸಚಿವಾಲಯದ ವರದಿಯ ಪ್ರಕಾರ, ಈ ಬಿಕ್ಕಟ್ಟು ಮುಂದುವರಿದರೆ ರೂಪಾಯಿ ಮೌಲ್ಯ ಕುಸಿತ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ದೇಶದಲ್ಲಿ ಹಣದುಬ್ಬರ ಹೆಚ್ಚಾಗಬಹುದು.
ಜಗತ್ತಿನ ಒಟ್ಟು ತೈಲ ಪೂರೈಕೆಯ ಶೇ. 20ರಷ್ಟು ಭಾಗ ಸಾಗುವ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಸಂಘರ್ಷದ ಹಿನ್ನೆಲೆ ಹಡಗು ಸಂಚಾರಕ್ಕೆ ಅಡ್ಡಿಯಾಗಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ರೆಂಟ್  ಬ್ಯಾರೆಲ್‌ಗೆ ಸುಮಾರು 9 ಪ್ರತಿಶತದಷ್ಟು ಏರಿಕೆಯಾಗಿ ಸುಮಾರು 80 ಡಾಲರ್‌ಗೆ ತಲುಪಿದ್ದರೆ, ದ್ರವೀಕೃತ
ನೈಸರ್ಗಿಕ ಅನಿಲ (LNG) ಬೆಲೆ 50% ರಷ್ಟು ಜಿಗಿತ ಕಂಡಿದೆ.
ಭಾರತದ ಸ್ಥಿತಿಗತಿ ಹೇಗಿದೆ?
ಭಾರತದ ಆರ್ಥಿಕತೆಯು ಸದ್ಯಕ್ಕೆ ಭದ್ರವಾದ ಅಡಿಪಾಯ ಹೊಂದಿದೆ ಎಂದು ಹಣಕಾಸು ಸಚಿವಾಲಯದ ಫೆಬ್ರವರಿ ತಿಂಗಳ ಆರ್ಥಿಕ ಪರಾಮರ್ಶೆ ವರದಿ ತಿಳಿಸಿದೆ. 2025-26ರ ಆರ್ಥಿಕ ವರ್ಷದಲ್ಲಿ ಭಾರತದ ನೈಜ ಜಿಡಿಪಿ ಬೆಳವಣಿಗೆ 7.6% ಇರಲಿದೆ ಎಂದು ಅಂದಾಜಿಸಲಾಗಿದೆ. ಭಾರತವು ಸಾಕಷ್ಟು ವಿದೇಶಿ ವಿನಿಮಯ ಮೀಸಲು ಹೊಂದಿದ್ದು, ಜಾಗತಿಕ ಏರಿಳಿತಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ವರದಿ ಹೇಳಿದೆ.
ಪಾಕಿಸ್ತಾನದಲ್ಲಿ ತೈಲ ಬೆಲೆ ಸ್ಫೋಟ
ಈ ಜಾಗತಿಕ ಬಿಕ್ಕಟ್ಟಿನ ನೇರ ಹೊಡೆತ ಪಾಕಿಸ್ತಾನಕ್ಕೆ ಬಿದ್ದಿದೆ. ಅಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 55 ರೂಪಾಯಿಗಳಷ್ಟು (PKR) ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ಬೆಲೆ ₹321.17 ಆಗಿದೆ. ಡೀಸೆಲ್‌ ಬೆಲೆ ₹335.86 ಕ್ಕೆ ತಲುಪಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement