ನವದೆಹಲಿ: ಅಮೆರಿಕದ ಮಿಲಿಟರಿ ದಾಳಿಯಿಂದಾಗಿ ಇರಾನ್ನ ನೌಕಾಪಡೆಯ ಹಡಗೊಂದು ಸಮುದ್ರದ ಮಧ್ಯೆ ಸ್ಫೋಟಗೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪರ್ಷಿಯನ್ ಗಲ್ಫ್ನ ‘ಪೋರ್ಟ್ ಲೆಂಗೆಹ್’ (Bandar Lengeh) ಸಮೀಪ ಈ ಘಟನೆ ನಡೆದಿದೆ ಎಂದು ರಕ್ಷಣಾ ವ್ಯವಹಾರಗಳ ಮೇಲೆ ನಿಗಾ ಇಡುವ ಹಲವಾರು ಸಾಮಾಜಿಕ ಜಾಲತಾಣದ ಅಕೌಂಟ್ಸ್ಗಳು ವರದಿ ಮಾಡಿವೆ. ಈ ವಿಡಿಯೋದಲ್ಲಿರುವ ಹಡಗು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆಯ(IRGCN) ‘ಶಾಹಿದ್ ಸುಲೈಮಾನಿ’ (Shahid Soleimani) ವರ್ಗದ ಕ್ಷಿಪಣಿ ಕಾರ್ವೆಟ್ ನೌಕೆ ಎಂದು ನಂಬಲಾಗಿದೆ.
ವಿಡಿಯೋದಲ್ಲಿ ಹಡಗಿನ ಮೇಲೆ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸುವುದು, ನಂತರ ಬೆಂಕಿ ಮತ್ತು ದಟ್ಟವಾದ ಹೊಗೆ ಆವರಿಸುವುದನ್ನು ಕಾಣಬಹುದು.
ಏನಿದು ಶಾಹಿದ್ ಸುಲೈಮಾನಿ ವರ್ಗದ ಕಾರ್ವೆಟ್?
ಇದು ಇರಾನ್ ನೌಕಾಪಡೆಯ ಅತ್ಯಂತ ಆಧುನಿಕ ಮತ್ತು ಹೊಸ ಮಾದರಿಯ ಯುದ್ಧನೌಕೆಗಳಲ್ಲಿ ಒಂದಾಗಿದೆ.ಅತಿ ವೇಗವಾಗಿ ಚಲಿಸುವಂತೆ ವಿನ್ಯಾಸಗೊಳಿಸಲಾದ ಈ ಹಡಗುಗಳು ಕ್ಷಿಪಣಿಗಳು, ವಾಯು ರಕ್ಷಣಾ ವ್ಯವಸ್ಥೆ ಮತ್ತು ಹಡಗು ವಿರೋಧಿ ಶಸ್ತ್ರಾಸ್ತ್ರಗಳನ್ನು ಹೊಂದಿವೆ.
ಇದರ ‘ಕ್ಯಾಟಮರನ್’ (catamaran) ಮಾದರಿಯ ವಿನ್ಯಾಸವು ಜಾಗತಿಕ ತೈಲ ವ್ಯಾಪಾರದ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಂತಹ ಆಯಕಟ್ಟಿನ ಪ್ರದೇಶಗಳಲ್ಲಿ ವೇಗವಾಗಿ ಸಂಚರಿಸಲು ಸಹಕಾರಿಯಾಗಿದೆ.
ಉಲ್ಬಣಗೊಂಡ ಉದ್ವಿಗ್ನತೆ
ವರದಿಗಳ ಪ್ರಕಾರ, ಇದಕ್ಕೂ ಕೆಲವು ದಿನಗಳ ಹಿಂದೆ ಪೋರ್ಟ್ ಅಬ್ಬಾಸ್ ಬಂದರಿನ ಸಮೀಪ ಇದೇ ವರ್ಗದ ಮತ್ತೊಂದು ನೌಕೆಯ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿದ್ದವು. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pete Hegseth) ಇತ್ತೀಚೆಗೆ ಪ್ರತಿಕ್ರಿಯಿಸಿ, ಅಮೆರಿಕದ ಪಡೆಗಳು “ಸುಲೈಮಾನಿ” ಹೆಸರಿನ ಇರಾನ್ ಯುದ್ಧನೌಕೆಯನ್ನು ಮುಳುಗಿಸಿವೆ ಎಂದು ತಿಳಿಸಿದ್ದರು.
ಇನ್ನೊಂದು ವರದಿಯ ಪ್ರಕಾರ, ಶ್ರೀಲಂಕಾ ಸಮೀಪದ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಂತರ್ಗಾಮಿ (Submarine) ನೌಕೆಯು ಇರಾನ್ ನೌಕಾ ಪಡೆಯ ನೌಕೆಯೊಂದನ್ನು ಟಾರ್ಪಿಡೊ ಕ್ಷಿಪಣಿ ಬಳಸಿ ಮುಳುಗಿಸಿದೆ. ಇತ್ತೀಚಿನ ದಶಕಗಳಲ್ಲಿ ಜಲಂತರ್ಗಾಮಿ ಮೂಲಕ ಯುದ್ಧನೌಕೆಯನ್ನು ಮುಳುಗಿಸಿದ ಅಪರೂಪದ ಘಟನೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಪರ್ಷಿಯನ್ ಗಲ್ಫ್ ಮತ್ತು ಸುತ್ತಮುತ್ತಲಿನ ಸಮುದ್ರ ಪ್ರದೇಶಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮಿಲಿಟರಿ ಉದ್ವಿಗ್ನತೆ ತಾರಕಕ್ಕೇರಿದೆ.


ನಿಮ್ಮ ಕಾಮೆಂಟ್ ಬರೆಯಿರಿ