ದುರಸ್ತಿ ಸಾಧ್ಯವಾಗದೇ ‘ಆಪರೇಷನ್ ಸಿಂಧೂರ’ ವೇಳೆ ಭಾರತದ ದಾಳಿಗೆ ಧ್ವಂಸಗೊಂಡಿದ್ದ ಮುರಿದ್ ವಾಯುನೆಲೆ ಕಟ್ಟಡ ನೆಲಸಮ ಮಾಡಿದ ಪಾಕಿಸ್ತಾನ !

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ ಭೀಕರ ದಾಳಿಯನಂತರ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆ (IAF) ನಡೆಸಿದ ವೈಮಾನಿಕ ದಾಳಿಯಿಂದ ಪಾಕಿಸ್ತಾನದ ಅತ್ಯಂತ ಪ್ರಮುಖ ‘ಮುರಿದ್’ (Murid) ವಾಯುನೆಲೆ ಸಂಪೂರ್ಣವಾಗಿ ನುಚ್ಚುನೂರಾಗಿದೆ. ದಾಳಿಗೊಳಗಾದ ಅಲ್ಲಿನ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಪುನರ್ನಿರ್ಮಿಸಲು ಪಾಕಿಸ್ತಾನ ನಡೆಸಿದ ಸತತ ಪ್ರಯತ್ನಗಳು ವಿಫಲವಾಗಿದ್ದು, ಇಡೀ ಕಟ್ಟಡವನ್ನು ಈಗ ನೆಲಸಮಗೊಳಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಉಪಗ್ರಹ ಚಿತ್ರಗಳಿಂದ ಬಹಿರಂಗವಾಗಿದೆ ಎಂದು ವರದಿಗಳು ತಿಳಿಸಿವೆ.
ಫೆಬ್ರವರಿ 28ರಂದು ‘ವಾಂಟೋರ್’ (Vantor) ಸಂಸ್ಥೆ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳ ಪ್ರಕಾರ, ಚಕ್ವಾಲ್ ಬಳಿಯಿರುವ ಮುರಿದ್ ವಾಯುನೆಲೆಯ ಮುಖ್ಯ ಕಟ್ಟಡವು ಈಗ ಅವಶೇಷಗಳ ರಾಶಿಯಾಗಿದೆ. 2025ರ ಮೇ ತಿಂಗಳಲ್ಲಿ ನಡೆದ ದಾಳಿಯ ನಂತರ, ಈ ಕಟ್ಟಡವನ್ನು ಪ್ಲಾಸ್ಟಿಕ್ ಕವರ್‌ಗಳಿಂದ (Tarpaulins) ಮುಚ್ಚಿ ದುರಸ್ತಿ ಮಾಡಲು ಪಾಕಿಸ್ತಾನ ಪ್ರಯತ್ನಿಸಿತ್ತು. ಆದರೆ, ಈಗ ಅಲ್ಲಿ ಕೇವಲ ಗುಲಾಬಿ-ಕೆಂಪು ಬಣ್ಣದ ಅವಶೇಷಗಳು ಮತ್ತು ಬರಿದಾದ ನೆಲ ಮಾತ್ರ ಕಾಣಿಸುತ್ತಿದೆ. ಇದು ದುರಸ್ತಿ ಸಾಧ್ಯವಾಗದೆ ಕಟ್ಟಡವನ್ನು ಕೆಡವಿರುವುದನ್ನು ಪುಷ್ಟೀಕರಿಸುತ್ತದೆ.
ವಾಯುಪಡೆಯ ‘ಬ್ರಹ್ಮಾಸ್ತ್ರ’ಕ್ಕೆ ನಲುಗಿದ ನೆಲೆ:
ಉಪಗ್ರಹ ಚಿತ್ರ ವಿಶ್ಲೇಷಕ ಡ್ಯಾಮಿಯನ್ ಸೈಮನ್ ಅವರ ಪ್ರಕಾರ, “ಈ ಬೆಳವಣಿಗೆಯು ಭಾರತದ ದಾಳಿಯ ತೀವ್ರತೆಯನ್ನು ತೋರಿಸುತ್ತದೆ. ಬಾಂಬ್‌ಗಳು ಕೇವಲ ಮೇಲ್ಛಾವಣಿಯನ್ನಷ್ಟೇ ಅಲ್ಲದೆ, ಕಟ್ಟಡದ ಅಡಿಪಾಯದವರೆಗೂ ಹಾನಿ ಮಾಡಿದ್ದವು. ಸುಮಾರು 35×30 ಮೀಟರ್ ವಿಸ್ತೀರ್ಣದ ಈ ಬೃಹತ್ ಕಟ್ಟಡವು ದುರಸ್ತಿಗೆ ಅಸಾಧ್ಯವಾದ ಕಾರಣ ಅದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದಾಳಿಯ ಪ್ರಮುಖ ಅಂಶಗಳು:
ಡ್ರೋನ್ ನಿಯಂತ್ರಣ ಕೇಂದ್ರ: ಧ್ವಂಸಗೊಂಡ ಈ ಕಟ್ಟಡವು ಪಾಕಿಸ್ತಾನದ ‘ಮಾನವರಹಿತ ವೈಮಾನಿಕ ವಾಹನಗಳ’ (UAV/Drones) ಕಾರ್ಯಾಚರಣೆಯನ್ನು ನಿಯಂತ್ರಿಸುವ ಕೇಂದ್ರವಾಗಿತ್ತು.
 ಇದೇ ವಾಯುನೆಲೆಯಲ್ಲಿದ್ದ ಭೂಗತ ಕೇಂದ್ರದ ಪ್ರವೇಶ ದ್ವಾರದ ಕೇವಲ 30 ಮೀಟರ್ ದೂರದಲ್ಲಿ 3 ಮೀಟರ್ ಅಗಲದ ಬೃಹತ್ ಗುಂಡಿ (Crater) ಬಿದ್ದಿರುವುದು ಪತ್ತೆಯಾಗಿದೆ.
 2025ರ ಮೇ 10ರಂದು ಬೆಳಗಿನ ಜಾವ 2 ರಿಂದ 5 ಗಂಟೆಯ ಅವಧಿಯಲ್ಲಿ ಭಾರತೀಯ ವಾಯುಪಡೆ ಪಾಕಿಸ್ತಾನದ 10 ವಾಯುನೆಲೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿತ್ತು.
ಬಳಕೆಯಾಗಿದ್ದೇ ‘ಸ್ಕಲ್ಪ್‌’ (SCALP) ಕ್ಷಿಪಣಿ?
ಭಾರತ ಸರ್ಕಾರ ಅಧಿಕೃತವಾಗಿ ಶಸ್ತ್ರಾಸ್ತ್ರಗಳ ಹೆಸರನ್ನು ಬಹಿರಂಗಪಡಿಸದಿದ್ದರೂ, ಹಾನಿಯ ಸ್ವರೂಪವನ್ನು ಗಮನಿಸಿದರೆ ಭಾರತೀಯ ರಫೇಲ್ (Rafale) ಯುದ್ಧ ವಿಮಾನಗಳಿಂದ ಉಡಾಯಿಸಲಾದ ‘ಸ್ಕಲ್ಪ್‌’ (SCALP) ಕ್ಷಿಪಣಿಗಳನ್ನು ಬಳಸಿರುವ ಸಾಧ್ಯತೆಯಿದೆ.
ಇದು 450 ಕೆಜಿ ತೂಕದ ಎರಡು ಹಂತದ ಸಿಡಿತಲೆಯನ್ನು ಹೊಂದಿರುತ್ತದೆ. ಮೊದಲ ಹಂತವು ಬಲವರ್ಧಿತ ಕಾಂಕ್ರೀಟ್ ಗೋಡೆಯನ್ನು ತೂರಿ ತೂತು ಮಾಡಿದರೆ, ಎರಡನೇ ಹಂತವು ಕಟ್ಟಡದ ಒಳಗೆ ಹೋಗಿ ಸ್ಫೋಟಗೊಳ್ಳುವ ಮೂಲಕ ಆಂತರಿಕವಾಗಿ ಸಂಪೂರ್ಣ ನಾಶಪಡಿಸುತ್ತದೆ.
ವಿಫಲವಾದ ಪಾಕ್ ಪ್ರಯತ್ನ:
ಜೂನ್ 2025ರಲ್ಲಿ ಹಸಿರು ಪ್ಲಾಸ್ಟಿಕ್ ಕವರ್‌ಗಳಿಂದ ಹಾನಿಯನ್ನು ಮುಚ್ಚಿಡಲು ಪ್ರಯತ್ನಿಸಿದ್ದ ಪಾಕಿಸ್ತಾನ, ಡಿಸೆಂಬರ್ ವೇಳೆಗೆ ಇಡೀ ಸಂಕೀರ್ಣವನ್ನೇ ನಿರ್ಮಾಣ ಜಾಲರಿಯಿಂದ (Construction Mesh) ಮುಚ್ಚಿತ್ತು. ಆದರೆ, ಹತ್ತು ತಿಂಗಳಾದರೂ ಕಟ್ಟಡವನ್ನು ಸರಿಪಡಿಸಲು ಸಾಧ್ಯವಾಗದೆ, ಅಂತಿಮವಾಗಿ ಅದನ್ನು ನೆಲಸಮಗೊಳಿಸಲಾಗಿದೆ ಎನ್ನಲಾಗಿದೆ..
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement