ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ತೆರಳುತ್ತಿದ್ದ ಥೈಲ್ಯಾಂಡ್‌ ಸರಕು ಹಡಗಿನ ಮೇಲೆ ದಾಳಿ

ಮಸ್ಕತ್/ಬ್ಯಾಂಕಾಕ್: ಅರಬ್ ರಾಷ್ಟ್ರಗಳ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಥೈಲ್ಯಾಂಡ್ ಧ್ವಜ ಇರುವ ‘ಮಯೂರಿ ನಾರಿ’ (Mayuree Naree) ಎಂಬ ಸರಕು ಹಡಗಿನ ಮೇಲೆ ಬುಧವಾರ ಅಪರಿಚಿತ ಕ್ಷಿಪಣಿ ದಾಳಿ ನಡೆದಿದೆ ಎಂದು ಥೈಲ್ಯಾಂಡ್ ನೌಕಾಪಡೆ ಮತ್ತು ಬಿಬಿಸಿ ವರದಿ ಮಾಡಿದೆ. ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ ಎಂದು ವರದಿಯಾಗಿದೆ.
ಹಡಗಿನಲ್ಲಿ 23 ಮಂದಿ ಥೈಲ್ಯಾಂಡ್ ಪ್ರಜೆಗಳಿದ್ದರು. ದಾಳಿಯ ಬೆನ್ನಲ್ಲೇ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿಗಳು ತಕ್ಷಣ ಹಡಗಿನಿಂದ ಹೊರಬಂದಿದ್ದಾರೆ. ಓಮನ್ ನೌಕಾಪಡೆಯು ಸಕಾಲದಲ್ಲಿ ಸ್ಪಂದಿಸಿ 20 ಸಿಬ್ಬಂದಿಗಳನ್ನು ರಕ್ಷಿಸಿದೆ. ಇನ್ನುಳಿದ ಮೂವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಹಡಗು ಭಾರತದ ಗುಜರಾತಿನ ಕಾಂಡ್ಲಾ ಬಂದರಿಗೆ ತೆರಳುತ್ತಿದ್ದಾಗ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವಾಗ ದಾಳಿಗೆ ಒಳಗಾಯಿತು.

ಈ ಹಡಗು ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಖಲೀಫಾ ಬಂದರಿನಿಂದ ಹೊರಟ ಕೆಲವು ಗಂಟೆಗಳಲ್ಲೇ ಈ ಘಟನೆ ಸಂಭವಿಸಿದೆ. ಓಮನ್‌ನಿಂದ ಸುಮಾರು 11 ನಾಟಿಕಲ್ ಮೈಲಿ ದೂರದಲ್ಲಿ ಈ ದಾಳಿ ನಡೆದಿದೆ ಎಂದು ಬ್ರಿಟನ್‌ನ ಕಡಲ ವ್ಯಾಪಾರ ಸಂಸ್ಥೆ (UKMTO) ದೃಢಪಡಿಸಿದೆ.
ಕೇವಲ ‘ಮಯೂರಿ ನಾರಿ’ ಮಾತ್ರವಲ್ಲದೆ, ಅದೇ ದಿನ ಇನ್ನೂ ಎರಡು ಹಡಗುಗಳು ದಾಳಿಗೆ ತುತ್ತಾಗಿವೆ. ಒನ್ ಮೆಜೆಸ್ಟಿ (ಜಪಾನ್ ಧ್ವಜದ ಹಡಗು) ಯುಎಇಯ ರಾಸ್ ಅಲ್ ಖೈಮಾ ಬಳಿ ಸಣ್ಣಪ್ರಮಾಣದ ಹಾನಿಗೊಳಗಾಗಿದೆ. ಅಲ್ಲದೆ, ಸ್ಟಾರ್ ಗ್ವಿನೆತ್ (ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ಹಡಗು) ಹಡಗಿನ ಹೊರಭಾಗಕ್ಕೂ ಕ್ಷಿಪಣಿ ದಾಳಿಯಿಂದ ಹಾನಿಯಾಗಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಲ್ಲಿ 100 ವರ್ಷಗಳಿಗೂ ಹಳೆಯ ಹಿಂದೂ ದೇವಾಲಯ ಧ್ವಂಸ : ವರದಿ

ಹೆಚ್ಚುತ್ತಿರುವ ಭದ್ರತಾ ಆತಂಕ
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದಂದಿನಿಂದ ಈ ಪ್ರದೇಶದಲ್ಲಿ ಈವರೆಗೆ ಒಟ್ಟು 13 ಹಡಗುಗಳನ್ನು ಗುರಿಯಾಗಿಸಲಾಗಿದೆ. ಹಾರ್ಮುಜ್ ಜಲಸಂಧಿ ಮತ್ತು ಓಮನ್ ಕೊಲ್ಲಿಯ ಸುತ್ತಮುತ್ತ ಒಟ್ಟು 17 ಕಡಲ ಭದ್ರತಾ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ.
ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದು, ಈ ಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ಗುರಿಯಾಗಿಸುವುದಾಗಿ ಎಚ್ಚರಿಕೆ ನೀಡಿದೆ. ಇದು ಜಾಗತಿಕ ತೈಲ ಸರಬರಾಜು ಮತ್ತು ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರುವ ಆತಂಕ ಮೂಡಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement