ಮಹಿಳೆಯೊಬ್ಬರು ತನ್ನ ಮಗುವನ್ನು ಸ್ಕೂಟರ್ನ ಸೀಟ್ ಕೆಳಗಿನ ಸ್ಟೋರೇಜ್ ಕಂಪಾರ್ಟ್ಮೆಂಟ್ (ಡಿಕ್ಕಿ) ಒಳಗೆ ಮಲಗಿಸಿ, ಗಾಡಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ಕಂಡ ಹಲವರು ಮಹಿಳೆಯ ನಡೆಯನ್ನು ಖಂಡಿಸಿದ್ದಾರೆ.
ವೈರಲ್ ಆಗಿರುವ ಈ ಕ್ಲಿಪ್ನಲ್ಲಿ, ಮಹಿಳೆಯೊಬ್ಬರು ಮನೆಯ ಪ್ರವೇಶ ದ್ವಾರದ ಬಳಿ ನಿಂತಿರುವುದು ಕಂಡುಬರುತ್ತದೆ. ಅವರ ಕೈಯಲ್ಲಿ ಒಂದು ಸಣ್ಣ ಮಗು ಇದೆ. ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಸ್ಕೂಟರ್ನ ಸೀಟನ್ನು ಮೇಲಕ್ಕೆತ್ತಿ, ಅದರ ಕೆಳಗಿರುವ ಸಾಮಾನು ಇಡುವ ಜಾಗದಲ್ಲಿ (Storage box) ಮಗುವನ್ನು ಅತ್ಯಂತ ಜಾಗರೂಕತೆಯಿಂದ ಮಲಗಿಸುತ್ತಾರೆ. ಮಗು ತಲೆಗೆ ಟೋಪಿ ಧರಿಸಿದ್ದು, ಸುಮ್ಮನೆ ಮಲಗಿರುವುದು ವಿಡಿಯೋದಲ್ಲಿದೆ.
ಮಗುವನ್ನು ಒಳಗೆ ಇರಿಸಿದ ನಂತರ, ಆಕೆ ಸ್ಕೂಟರ್ ಸೀಟನ್ನು ಕೆಳಕ್ಕೆ ಇಳಿಸಿ ಲಾಕ್ ಮಾಡುತ್ತಾರೆ. ಸೀಟು ಮುಚ್ಚಿದ ತಕ್ಷಣ ಮಗು ಹೊರಗಿನವರಿಗೆ ಕಾಣಿಸುವುದಿಲ್ಲ. ನಂತರ ಆಕೆ ಸ್ಕೂಟರ್ ಏರಿ ಅಲ್ಲಿಂದ ಹೊರಟು ಹೋಗುತ್ತಾರೆ.
ವಿಡಿಯೋದಲ್ಲಿರುವ ಸ್ಕೂಟರ್ನ ನಂಬರ್ ಪ್ಲೇಟ್ ಗಮನಿಸಿದರೆ, ಅದು “MP” (ಮಧ್ಯಪ್ರದೇಶ) ನೋಂದಣಿ ಕೋಡ್ನಿಂದ ಆರಂಭವಾಗುತ್ತದೆ. ಇದರಿಂದ ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಸಾಮಾನ್ಯವಾಗಿ ಸ್ಕೂಟರ್ನ ಸ್ಟೋರೇಜ್ ಬಾಕ್ಸ್ ಅನ್ನು ಹೆಲ್ಮೆಟ್, ಬ್ಯಾಗ್ ಅಥವಾ ಇತರ ವಸ್ತುಗಳನ್ನು ಇಡಲು ಬಳಸಲಾಗುತ್ತದೆ. ಆದರೆ ಉಸಿರಾಟಕ್ಕೂ ತೊಂದರೆಯಾಗಬಹುದಾದ ಇಂತಹ ಕಿರಿದಾದ ಜಾಗದಲ್ಲಿ ಮಗುವನ್ನು ಇಟ್ಟಿರುವುದು ಜನರನ್ನು ಬೆಚ್ಚಿಬೀಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ, ಅನೇಕರು ಇದನ್ನು “ಬೇಜವಾಬ್ದಾರಿ” ಎಂದು ಕರೆದಿದ್ದಾರೆ. ಇಂತಹ ಕೃತ್ಯಗಳು ಮಗುವಿನ ಜೀವಕ್ಕೆ ಅಪಾಯ ತಂದೊಡ್ಡಬಹುದು ಮತ್ತು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ