ನವದೆಹಲಿ: 92,700 ಮೆಟ್ರಿಕ್ ಟನ್ ಎಲ್‌ಪಿಜಿ (LPG) ಹೊತ್ತುಭಾರತಕ್ಕೆ ಬರುತ್ತಿರುವ ಎರಡು ಹಡಗುಗಳು ಇರಾನ್ ಕರಾವಳಿಯ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ ಮತ್ತು ಮಾರ್ಚ್ 16-17 ರೊಳಗೆ ಭಾರತದ ಬಂದರು ತಲುಪಲಿವೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ “ಎಲ್‌ಪಿಜಿ ಪೂರೈಕೆಯು ಸರ್ಕಾರದ ಪಾಲಿಗೆ ಕಳವಳಕಾರಿ ವಿಷಯವಾಗಿದೆ” ಎಂದು ಸರ್ಕಾರ ಹೇಳಿದೆಯಾದರೂ, ಯಾವುದೇ ವಿತರಣಾ ಕೇಂದ್ರಗಳಲ್ಲಿ ದಾಸ್ತಾನು ಖಾಲಿಯಾದ (dry outs) ವರದಿಗಳಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಗತ್ತಿನಾದ್ಯಂತ ತೈಲ ಮತ್ತು ಅನಿಲ ಪೂರೈಕೆ ಸರಪಳಿಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗಿದ್ದು, ಗ್ಯಾಸ್ ಸಿಲಿಂಡರ್‌ಗಳ ‘ಪ್ಯಾನಿಕ್ ಬುಕಿಂಗ್’ (ಅತಿಯಾದ ಮುಂಗಡ ಕಾಯ್ದಿರಿಸುವಿಕೆ) ಗಣನೀಯವಾಗಿ ಏರಿಕೆಯಾಗಿದೆ ಎಂದು ಸರ್ಕಾರ ಗಮನಿಸಿದೆ.
ಭಾರತದತ್ತ ಮುಖ ಮಾಡಿರುವ ಎಲ್‌ಪಿಜಿ ಹಡಗುಗಳು
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶಕುಮಾರ ಸಿನ್ಹಾ, “92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಭಾರತದ ಧ್ವಜ ಹೊಂದಿರುವ ‘ಶಿವಾಲಿಕ’ ಮತ್ತು ‘ನಂದಾದೇವಿ’ ಎಂಬ ಎರಡು ಹಡಗುಗಳು ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ್ದು, ಈಗ ಭಾರತದತ್ತ ಬರುತ್ತಿವೆ,” ಎಂದು ತಿಳಿಸಿದರು.
“ಈ ಹಡಗುಗಳು ಮುದ್ರಾ ಮತ್ತು ಕಾಂಡ್ಲಾ ಬಂದರುಗಳಿಗೆ ಅನುಕ್ರಮವಾಗಿ ಮಾರ್ಚ್ 16 ಮತ್ತು ಮಾರ್ಚ್ 17 ರಂದು ಬಂದು ತಲುಪುವ ನಿರೀಕ್ಷೆಯಿದೆ,” ಎಂದು ಅವರು ಹೇಳಿದರು.
ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಅವರಿಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಸಿನ್ಹಾ ವಿವರಿಸಿದರು. “ಸದ್ಯಕ್ಕೆ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಭಾರತದ ಧ್ವಜ ಹೊಂದಿರುವ 22 ಹಡಗುಗಳಿದ್ದು, ಅವುಗಳಲ್ಲಿ ಒಟ್ಟು 611 ಭಾರತೀಯ ನಾವಿಕರಿದ್ದಾರೆ,” ಎಂದು ಅವರು ಮಾಹಿತಿ ನೀಡಿದರು.
ಭಾರತೀಯ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಡಗು ಮಾಲೀಕರೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಿರುವುದಾಗಿ ಕಾರ್ಯದರ್ಶಿಗಳು ತಿಳಿಸಿದರು.
“ಹಡಗು ಸಚಿವಾಲಯ, ಅದರಲ್ಲೂ ವಿಶೇಷವಾಗಿ ಡಿಜಿ ಶಿಪ್ಪಿಂಗ್ (DG Shipping), ಈ ಎಲ್ಲಾ ಹಡಗುಗಳು ಮತ್ತು ಅವುಗಳಲ್ಲಿರುವ ಭಾರತೀಯ ನಾವಿಕರ ಸ್ಥಿತಿಗತಿಯನ್ನು ಹಡಗು ಮಾಲೀಕರು, ಆರ್‌ಪಿಎಸ್‌ಎನ್ (RPSN) ಏಜೆನ್ಸಿಗಳು ಮತ್ತು ಭಾರತೀಯ ರಾಜತಾಂತ್ರಿಕ ಕಚೇರಿಗಳೊಂದಿಗೆ ಸೇರಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಡಿಜಿ ಶಿಪ್ಪಿಂಗ್‌ನ ಸಂವಹನ ಕೇಂದ್ರಕ್ಕೆ 312 ಫೋನ್ ಕರೆಗಳು ಮತ್ತು 460 ಇಮೇಲ್‌ಗಳು ಬಂದಿವೆ,” ಎಂದು ಅವರು ಹೇಳಿದರು.
“ನಾವಿಕರು, ಅವರ ಕುಟುಂಬ ಸದಸ್ಯರು ಮತ್ತು ಇತರ ಪಾಲುದಾರರಿಂದ ಬಂದ ಈ ಕರೆ ಮತ್ತು ಇಮೇಲ್‌ಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗಿದೆ. ಕಳೆದ 15 ದಿನಗಳಲ್ಲಿ ಸುಮಾರು 2,500 ಕ್ಕೂ ಹೆಚ್ಚು ಕರೆಗಳು ಮತ್ತು 5,000 ಇಮೇಲ್‌ಗಳನ್ನು ಸ್ವೀಕರಿಸಲಾಗಿದ್ದು, ಎಲ್ಲದಕ್ಕೂ ಉತ್ತರಿಸಲಾಗಿದೆ,” ಎಂದು ಅವರು ತಿಳಿಸಿದರು.
ದೇಶದ ಎಲ್‌ಪಿಜಿ ಪೂರೈಕೆ ಕುರಿತು ಕೇಂದ್ರದ ಮಾಹಿತಿ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಾತನಾಡಿ, “ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ ಪೂರೈಕೆಯು ಕೇಂದ್ರಕ್ಕೆ ಕಳವಳಕಾರಿ ವಿಷಯವಾಗಿದೆ. ಆದರೆ ಇದುವರೆಗೆ ಎಲ್ಲಿಯೂ ದಾಸ್ತಾನು ಕೊರತೆಯಾಗಿಲ್ಲ. ಆದರೆ ಭೀತಿಯಿಂದಾಗಿ ಜನರು ಮಾಡುವ ಬುಕಿಂಗ್ ಪ್ರಮಾಣ ತೀವ್ರವಾಗಿ ಏರಿಕೆಯಾಗಿದ್ದು, ದಿನಕ್ಕೆ 80 ಲಕ್ಷ ಬುಕಿಂಗ್‌ಗಳು ನಡೆಯುತ್ತಿವೆ,” ಎಂದರು.
“ಎಲ್‌ಪಿಜಿ ಪೂರೈಕೆಗೆ ಸಂಬಂಧಿಸಿದಂತೆ, ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ನಮಗೆ ಆತಂಕವಿದೆ ನಿಜ; ಆದರೆ ಇದುವರೆಗೆ ಸ್ಟಾಕ್ ಖಾಲಿಯಾದ ಯಾವುದೇ ಘಟನೆ ನಡೆದಿಲ್ಲ. ನಾನು ಒಂದು ವಿಷಯವನ್ನು ಒತ್ತಿ ಹೇಳಲು ಬಯಸುತ್ತೇನೆ: ಪ್ಯಾನಿಕ್ ಬುಕಿಂಗ್‌ಗಳು ವಿಪರೀತವಾಗಿವೆ. ನಿನ್ನೆ 75 ರಿಂದ 76 ಲಕ್ಷದಷ್ಟಿದ್ದ ಬುಕಿಂಗ್ ಸಂಖ್ಯೆ ಇಂದು ಸುಮಾರು 88 ಲಕ್ಷಕ್ಕೆ ಏರಿದೆ,” ಎಂದು ಅವರು ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ