ತೆಹ್ರಾನ್: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿರುವ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಶನಿವಾರ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. “ಹಾರ್ಮುಜ್ ಜಲಸಂಧಿಯು ಎಲ್ಲರಿಗೂ ಮುಚ್ಚಿಲ್ಲ; ಇದು ಕೇವಲ ಅಮೆರಿಕ, ಇಸ್ರೇಲ್ ಮತ್ತು ಅವರ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಮಾತ್ರ ಬಂದ್ ಆಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶತ್ರು ರಾಷ್ಟ್ರಗಳಿಗೆ ಮಾತ್ರ ನಿರ್ಬಂಧ
ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅರಾಗ್ಚಿ, “ವಾಸ್ತವವಾಗಿ ಹಾರ್ಮುಜ್ ಜಲಸಂಧಿ ಮುಕ್ತವಾಗಿದೆ. ನಮ್ಮ ಮೇಲೆ ದಾಳಿ ಮಾಡುತ್ತಿರುವ ಶತ್ರುಗಳು ಮತ್ತು ಅವರ ಮಿತ್ರ ರಾಷ್ಟ್ರಗಳ ಟ್ಯಾಂಕರ್‌ಗಳಿಗೆ ಮಾತ್ರ ಪ್ರವೇಶ ನಿರಾಕರಿಸಲಾಗಿದೆ. ಉಳಿದ ದೇಶಗಳ ಹಡಗುಗಳು ಮುಕ್ತವಾಗಿ ಸಂಚರಿಸಬಹುದು,” ಎಂದು ಹೇಳಿದ್ದಾರೆ. ಅನೇಕ ಹಡಗುಗಳು ಸುರಕ್ಷತೆಯ ಭೀತಿಯಿಂದ ಈ ಮಾರ್ಗವನ್ನು ಬಳಸುತ್ತಿಲ್ಲವೇ ಹೊರತು, ಇರಾನ್ ಅವುಗಳನ್ನು ತಡೆದಿಲ್ಲ ಎಂದು ಅವರು ಹೇಳಿದ್ದಾರೆ.
ನೂರಾರು ಹಡಗುಗಳು ಸ್ಥಗಿತ; ಇಂಧನ ಪೂರೈಕೆಯಲ್ಲಿ ವ್ಯತ್ಯಯ
ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ನಂತರ ಈ ಮಾರ್ಗದಲ್ಲಿ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ವಿಶ್ವದ ಒಟ್ಟು ತೈಲ ಪೂರೈಕೆಯ ಶೇಕಡಾ 20ರಷ್ಟು ಭಾಗ ಸಾಗುವ ಈ ಕಿರಿದಾದ ಸಮುದ್ರ ಮಾರ್ಗದಲ್ಲಿ ಪ್ರಸ್ತುತ ಭಾರತೀಯ ನೌಕೆಗಳು ಸೇರಿದಂತೆ ನೂರಾರು ಹಡಗುಗಳು ಸಿಲುಕಿಕೊಂಡಿವೆ. ಇದು ಜಾಗತಿಕವಾಗಿ ತೈಲ ಮತ್ತು ಅಡುಗೆ ಅನಿಲದ (LPG) ಕೊರತೆಗೆ ಕಾರಣವಾಗಿದೆ.
ಸಾಮಾನ್ಯ ಸಂದರ್ಭಗಳಲ್ಲಿ, ದಿನಕ್ಕೆ ಸುಮಾರು 13 ಮಿಲಿಯನ್ ಬ್ಯಾರೆಲ್ ತೈಲವು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ, ಇದು ಜಾಗತಿಕ ತೈಲ ಸಾಗಣೆಯ ಸರಿಸುಮಾರು ಶೇಕಡಾ 31 ರಷ್ಟಿದೆ. ಈ ಪ್ರಮುಖ ಮಾರ್ಗವನ್ನು ನಿರ್ಬಂಧಿಸುವುದರಿಂದ ಜಾಗತಿಕ ತೈಲ ಬೆಲೆಗಳು ಹೆಚ್ಚಾಗುತ್ತವೆ.
ಈ ಮಾರ್ಗದ ಮುಚ್ಚುವಿಕೆಯು ಇರಾನ್ ಜೊತೆಗೆ ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಮುಖ ಬಂದರುಗಳ ಮೇಲೂ ಪರಿಣಾಮ ಬೀರುತ್ತದೆ. ಈ ದೇಶಗಳಿಗೆ, ಹಾರ್ಮುಜ್ ಜಲಸಂಧಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ತೈಲವನ್ನು ರಫ್ತು ಮಾಡುವ ಪ್ರಾಥಮಿಕ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.
ಈ ಮಾರ್ಗದ ಮುಚ್ಚುವಿಕೆಯು ಇರಾನ್ ಜೊತೆಗೆ ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಮುಖ ಬಂದರುಗಳ ಮೇಲೂ ಪರಿಣಾಮ ಬೀರುತ್ತದೆ. ಈ ದೇಶಗಳಿಗೆ, ಹಾರ್ಮುಜ್ ಜಲಸಂಧಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ತೈಲವನ್ನು ರಫ್ತು ಮಾಡುವ ಪ್ರಾಥಮಿಕ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.
ಭಾರತಕ್ಕೆ ವಿನಾಯಿತಿ: ನೌಕಾಪಡೆ ರಕ್ಷಣೆಯಲ್ಲಿ ದಾಟಿದ ಟ್ಯಾಂಕರ್‌ಗಳು
ಈ ಬಿಕ್ಕಟ್ಟಿನ ನಡುವೆಯೂ ಭಾರತದ ಮೇಲೆ ಇರಾನ್ ಮೃದು ಧೋರಣೆ ತಳೆದಿದೆ. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಸೇರಿದ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಾದ ‘ಶಿವಾಲಿಕ’ ಮತ್ತು ‘ನಂದಾದೇವಿ’, ಮಾರ್ಚ್ 14ರಂದು ಭಾರತೀಯ ನೌಕಾಪಡೆಯ ರಕ್ಷಣೆಯೊಂದಿಗೆ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ. ಭಾರತದೊಂದಿಗಿನ ದೀರ್ಘಕಾಲದ ಉತ್ತಮ ಸಂಬಂಧದ ಹಿನ್ನೆಲೆಯಲ್ಲಿ ಈ ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ತಿಳಿಸಿದ್ದಾರೆ.
ಮೈತ್ರಿಕೂಟದ ನೆರವು ಕೋರಿದ ಡೊನಾಲ್ಡ್ ಟ್ರಂಪ್
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಜಲಸಂಧಿಯ ಸುರಕ್ಷತೆಗಾಗಿ ಅಂತಾರಾಷ್ಟ್ರೀಯ ಸಮುದಾಯದ ಮೊರೆ ಹೋಗಿದ್ದಾರೆ. ಈ ಮಾರ್ಗದ ಮೂಲಕ ತೈಲ ಆಮದು ಮಾಡಿಕೊಳ್ಳುವ ಚೀನಾ, ಜಪಾನ್, ಫ್ರಾನ್ಸ್, ದಕ್ಷಿಣ ಕೊರಿಯಾ ಮತ್ತು ಬ್ರಿಟನ್ ದೇಶಗಳು ತಮ್ಮ ನೌಕಾಪಡೆಯನ್ನು ಕಳುಹಿಸುವ ಮೂಲಕ ಮಾರ್ಗದ ರಕ್ಷಣೆಗೆ ಸಹಕರಿಸಬೇಕು ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ