ವೀಡಿಯೊ | ರೀಲ್ಸ್‌ ಹುಚ್ಚಿಗೆ ಬಿದ್ದು ತಂದೆಯನ್ನೇ ಮೂಟೆಕಟ್ಟಿ ‘ಕೊರಿಯರ್’ ಮಾಡಲು ಹೋದ ಬೆಂಗಳೂರು ಮಹಿಳೆ : ಮುಂದಾಗಿದ್ದು..?

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’ ಆಗುವ ಹಪಾಹಪಿಗೆ ಬಿದ್ದ ಕುಟುಂಬವೊಂದು, ವಯಸ್ಸಾದ ವ್ಯಕ್ತಿಯನ್ನೇ ಪಾರ್ಸೆಲ್ ಬಾಕ್ಸ್‌ನಲ್ಲಿ ತುರುಕಿ ಕೊರಿಯರ್ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಮಂಗಳವಾರ (ಮಾರ್ಚ್‌ ೧೭) ಮಹಿಳೆ, ಆಕೆಯ ಪತಿ, ಅತ್ತೆ ಮತ್ತು ಮೈದುನ ಸೇರಿದಂತೆ ಒಂದೇ ಕುಟುಂಬದ ಐವರು ಸದಸ್ಯರು ವೈಯಾಲಿಕಾವಲ್‌ನ ಕೊರಿಯರ್ ಕಚೇರಿಗೆ ದೊಡ್ಡ ಪಾರ್ಸೆಲ್ ಒಂದನ್ನು ಹೊತ್ತು ತಂದಿದ್ದರು. ಬಾಕ್ಸ್‌ನಲ್ಲೇನಿದೆ ಎಂದು ಸಿಬ್ಬಂದಿ ಪ್ರಶ್ನಿಸಿದಾಗ ಕುಟುಂಬದವರು ಮೌನ ವಹಿಸಿದ್ದು ಅನುಮಾನಕ್ಕೆ ಕಾರಣವಾಯಿತು. ಸಿಬ್ಬಂದಿಯ ಒತ್ತಾಯದ ಮೇರೆಗೆ ಬಾಕ್ಸ್ ತೆರೆದಾಗ, ಅಲ್ಲಿ ಮಹಿಳೆಯ ವಯಸ್ಸಾದ ತಂದೆಯನ್ನು ಬಾಕ್ಸ್ ಒಳಗೆ ತುರುಕಲಾಗಿತ್ತು! ತಂದೆಯ ಸ್ಥಿತಿ ಕಂಡು ಸಿಬ್ಬಂದಿ ಶಾಕ್ ಆಗಿದ್ದಾರೆ. ಬಾಕ್ಸ್‌ನಿಂದ ಹೊರಬಂದಾಗ ವೃದ್ಧರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂತು.

ಕುಟುಂಬದ ವಿಚಿತ್ರ ವಾದ!
ಸಿಬ್ಬಂದಿ ಈ ಕೃತ್ಯವನ್ನು ಪ್ರಶ್ನಿಸಿದಾಗ ಕುಟುಂಬದವರು ಕಿಂಚಿತ್ತೂ ಪಶ್ಚಾತ್ತಾಪ ಪಡಲಿಲ್ಲ. ಬದಲಾಗಿ, “ನಾವು ಇಷ್ಟು ದೂರದಿಂದ ಕಷ್ಟಪಟ್ಟು ಪಾರ್ಸೆಲ್ ತಂದಿದ್ದೇವೆ, ಇದನ್ನು ನೀವು ಸ್ವೀಕರಿಸಲೇಬೇಕು” ಎಂದು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ಕೊರಿಯರ್‌ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಡೀ ಕುಟುಂಬವನ್ನು ಠಾಣೆಗೆ ಕರೆದೊಯ್ದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸ್ ವಿಚಾರಣೆಯ ವೇಳೆ ಈ ಕುಟುಂಬ ಅಚ್ಚರಿಯ ಹೇಳಿಕೆ ನೀಡಿದೆ. “ಯುಗಾದಿ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್‌ಗಳ ಕೊರತೆ ಎದುರಾಗುತ್ತದೆ. ಅಂತಹ ಸಮಯದಲ್ಲಿ ಮನುಷ್ಯರನ್ನೇ ಕೊರಿಯರ್ ಮಾಡುವುದು ಏಕೈಕ ದಾರಿ ಎಂಬ ಸಂದೇಶ ಸಾರಲು ನಾವು ಈ ರೀಲ್ಸ್ ಮಾಡಲು ಮುಂದಾಗಿದ್ದೆವು” ಎಂದು ಸಮರ್ಥಿಸಿಕೊಂಡಿದ್ದಾರೆ.

ಕೇವಲ ಒಂದು ಸೋಶಿಯಲ್ ಮೀಡಿಯಾ ವಿಡಿಯೋಗಾಗಿ ವೃದ್ಧನ ಜೀವವನ್ನೇ ಪಣಕ್ಕಿಟ್ಟ ಕುಟುಂಬದ ವರ್ತನೆಗೆ ಪೊಲೀಸರು ಕೆಂಡಾಮಂಡಲವಾಗಿದ್ದಾರೆ.
ನಂತರ ಕುಟುಂಬದವರಿಂದ ಕ್ಷಮಾಪಣಾ ವಿಡಿಯೋ ರೆಕಾರ್ಡ್ ಮಾಡಿಸಿಕೊಂಡು, “ಮತ್ತೆ ಇಂತಹ ಅಪಾಯಕಾರಿ ಹುಚ್ಚಾಟಗಳಲ್ಲಿ ತೊಡಗಬೇಡಿ” ಎಂದು ಕಠಿಣ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾ ಪ್ರಸಿದ್ಧಿಗಾಗಿ ಪ್ರಾಣಕ್ಕೆ ಸಂಚಕಾರ ತರುವ ಇಂತಹ ಕೃತ್ಯಗಳು ಕಾನೂನುಬಾಹಿರ ಹಾಗೂ ಅಮಾನವೀಯವಾಗಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement