ಸೂರತ್: ಗುಜರಾತ್ನ ಸೂರತ್ನಲ್ಲಿ 10,000 ರೂಪಾಯಿ ವಿತ್ಡ್ರಾ ಮಾಡಲು ಹೋದ ಗ್ರಾಹಕನೊಬ್ಬನಿಗೆ ಎದುರಾದ ತಾಂತ್ರಿಕ ದೋಷ, ಈಗ ಬ್ಯಾಂಕ್ಗೆ ಅತಿ ದೊಡ್ಡ ಮೊತ್ತದ ದಂಡವಾಗಿ ಪರಿಣಮಿಸಿದೆ. ಸುಮಾರು 9 ವರ್ಷಗಳ ಸುದೀರ್ಘ ಹೋರಾಟದ ನಂತರ, ಬ್ಯಾಂಕ್ ಆಫ್ ಬರೋಡಾ (BoB) ಈಗ ಅಸಲು ಮೊತ್ತಕ್ಕಿಂತ ಸುಮಾರು 30 ಪಟ್ಟು ಹೆಚ್ಚು ಹಣವನ್ನು ಗ್ರಾಹಕನಿಗೆ ಪಾವತಿಸಬೇಕಾದ ಪರಿಸ್ಥಿತಿ ಬಂದಿದೆ.
ಈ ಪ್ರಕರಣವು ಫೆಬ್ರವರಿ 18, 2017 ರಂದು ನಡೆಯಿತು. ಸೂರತ್ನ ಉಧ್ನಾ ಪ್ರದೇಶದ ಗ್ರಾಹಕರೊಬ್ಬರು ಎಸ್ಬಿಐ (SBI) ಎಟಿಎಂನಿಂದ 10,000 ರೂಪಾಯಿ ತೆಗೆಯಲು ಪ್ರಯತ್ನಿಸಿದ್ದರು. ಕಾರ್ಡ್ ಹಾಕಿ ಪಿನ್ ನಮೂದಿಸಿದರೂ ಹಣ ಬರಲಿಲ್ಲ, ರಶೀದಿಯೂ ಸಿಗಲಿಲ್ಲ. ಆದರೆ, ಕೆಲವೇ ಕ್ಷಣಗಳಲ್ಲಿ ಅವರ ಖಾತೆಯಿಂದ 10,000 ರೂಪಾಯಿ ಕಡಿತವಾಗಿರುವ (Debited) ಸಂದೇಶ ಬಂದಾಗ ಅವರು ದಿಗ್ಭ್ರಮೆಗೊಂಡರು.
ದೂರು ನೀಡಿದರೂ ಸಿಗದ ಸ್ಪಂದನೆ
ಗ್ರಾಹಕರು ಫೆಬ್ರವರಿ 21, 2017 ರಂದು ಬ್ಯಾಂಕ್ ಆಫ್ ಬರೋಡಾದ ಡುಂಭಾಲ್ ಶಾಖೆಗೆ ಲಿಖಿತ ದೂರು ನೀಡಿದ್ದರು. ಮೇ ತಿಂಗಳವರೆಗೆ ಸತತವಾಗಿ ಇಮೇಲ್ ಮೂಲಕ ಫಾಲೋ-ಅಪ್ ಮಾಡಿದ್ದಲ್ಲದೆ, ಆರ್ಬಿಐ (RBI) ಮೆಟ್ಟಿಲೇರಿದ್ದರು. ಸಿಸಿಟಿವಿ ದೃಶ್ಯಾವಳಿಗಾಗಿ ಎಸ್ಬಿಐಗೆ ಆರ್ಟಿಐ (RTI) ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ಎಲ್ಲಿಯೂ ಅವರಿಗೆ ನ್ಯಾಯ ಸಿಗದಿದ್ದಾಗ, ಡಿಸೆಂಬರ್ 20, 2017 ರಂದು ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿದರು.
ವಿಚಾರಣೆ ವೇಳೆ ಬ್ಯಾಂಕ್ ಆಫ್ ಬರೋಡಾ, “ಅದು ಎಸ್ಬಿಐ ಎಟಿಎಂ ಆಗಿತ್ತು ಮತ್ತು ನಮ್ಮ ದಾಖಲೆಗಳಲ್ಲಿ ವಹಿವಾಟು ಯಶಸ್ವಿಯಾಗಿದೆ ಎಂದು ತೋರಿಸುತ್ತಿದೆ, ಆದ್ದರಿಂದ ನಾವು ಜವಾಬ್ದಾರರಲ್ಲ” ಎಂದು ವಾದಿಸಿತ್ತು.
ಬ್ಯಾಂಕ್ನ ವಾದವನ್ನು ತಳ್ಳಿಹಾಕಿದ ಗ್ರಾಹಕ ಆಯೋಗವು, ವಹಿವಾಟು ವಿಫಲವಾಗಿಲ್ಲ ಎಂಬುದಕ್ಕೆ ಬ್ಯಾಂಕ್ ಭದ್ರವಾದ ಪುರಾವೆ ಒದಗಿಸಬೇಕು ಎಂದು ಹೇಳಿತು. ಅಲ್ಲದೆ, ಆರ್ಬಿಐ ನಿಯಮಗಳ ಪ್ರಕಾರ 5 ದಿನಗಳೊಳಗೆ ಹಣವನ್ನು ಮರುಪಾವತಿಸಬೇಕಿತ್ತು, ಅದನ್ನು ಬ್ಯಾಂಕ್ ಮಾಡಿಲ್ಲ ಎಂದು ಆಯೋಗ ಗಮನಿಸಿತು.
ಆಯೋಗವು ನೀಡಿದ ಅಂತಿಮ ಆದೇಶ ನೀಡಿದ್ದು, ಅಸಲು ಮೊತ್ತ 10,000 ರೂ. ಗಳನ್ನು ವಾರ್ಷಿಕ 9% ಬಡ್ಡಿಯೊಂದಿಗೆ ಮರುಪಾವತಿಸಬೇಕು. ವಿಳಂಬವಾದ ಪ್ರತಿ ದಿನಕ್ಕೆ 100 ರೂ. ನೀಡಬೇಕು. ಫೆಬ್ರವರಿ 26, 2026 ರ ಹೊತ್ತಿಗೆ ವಿಳಂಬವು 3,288 ದಿನಗಳಾಗಿದ್ದು, ಈ ಮೊತ್ತವೇ 3,28,800 ರೂ. ಆಗುತ್ತದೆ. ಜೊತೆಗೆ ಮಾನಸಿಕ ಕಿರುಕುಳಕ್ಕಾಗಿ 3,000 ರೂ. ಮತ್ತು ಕಾನೂನು ವೆಚ್ಚಕ್ಕಾಗಿ 2,000 ರೂ. ಪಾವತಿಸಲು ಆದೇಶಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ