ಜೆರುಸಲೆಮ್: ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಅವರು ಪೋರ್ಟ್ ಅಬ್ಬಾಸ್ನಲ್ಲಿ ನಡೆದ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಹಾರ್ಮುಜ್ ಜಲಸಂಧಿಯ ಬಳಿ ಇರುವ ಪ್ರಮುಖ ಇರಾನಿನ ಬಂದರು ನಗರವಾದ ಪೋರ್ಟ್ ಅಬ್ಬಾಸ್ನಲ್ಲಿ ನಡೆದ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಗುರುವಾರ ದಿ ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.
ವಿಶ್ವದ ಪ್ರಮುಖ ತೈಲ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ ಬಂದ್ ಮಾಡುವ ಬೆದರಿಕೆ ಹಾಕಿದ್ದ ಈ ಕಮಾಂಡರ್ ಸಾವು ಇರಾನ್ಗೆ ದೊಡ್ಡ ಹೊಡೆತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇರಾನಿನ ಪೋರ್ಟ್ ಅಬ್ಬಾಸ್ ಎಂಬಲ್ಲಿ ಈ ದಾಳಿ ನಡೆದಿದೆ. ಇದು ಜಾಗತಿಕವಾಗಿ ಶೇ. 20 ರಷ್ಟು ತೈಲ ಮತ್ತು ಅನಿಲ ಸಾಗಣೆಯಾಗುವ ಆಯಕಟ್ಟಿನ ಪ್ರದೇಶವಾಗಿದೆ. ಈ ದಾಳಿಯನ್ನು ಇಸ್ರೇಲ್ ನಡೆಸಿದೆಯೇ ಅಥವಾ ಅಮೆರಿಕಾ ಸೇನೆ ನಡೆಸಿದೆಯೇ ಎಂಬ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಇಸ್ರೇಲ್ ರಕ್ಷಣಾ ಪಡೆ (IDF) ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಕಮಾಂಡರ್ ಸಾವಿನ ಬಗ್ಗೆ ಇರಾನ್ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.
ಯಾರು ಈ ಅಲಿರೆಜಾ ತಂಗ್ಸಿರಿ?
ಇರಾನಿನ ಬುಶೆಹ್ರ್ ಪ್ರಾಂತ್ಯದವರಾದ ತಂಗ್ಸಿರಿ, ಇರಾನ್-ಇರಾಕ್ ಯುದ್ಧ ಮತ್ತು 1980ರ ದಶಕದ ‘ಟ್ಯಾಂಕರ್ ವಾರ್’ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 2018ರಲ್ಲಿ ಐಆರ್ಜಿಸಿ ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದ ಇವರು, ಗಲ್ಫ್ ಪ್ರದೇಶದಲ್ಲಿ ಇರಾನ್ನ ಪ್ರಭಾವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕಳೆದ ವಾರವಷ್ಟೇ ಇವರು ಅಮೆರಿಕಾದ ನೌಕಾ ನೆಲೆಗಳು ಮತ್ತು ತೈಲ ಕೇಂದ್ರಗಳ ಮೇಲೆ ದಾಳಿ ನಡೆಸುವುದಾಗಿ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು. ಅಮೆರಿಕವು ಇರಾನ್ನ ನೌಕಾ ಶಕ್ತಿಯನ್ನು ಕುಂದಿಸುವುದನ್ನು ತನ್ನ ಮೊದಲ ಆದ್ಯತೆ ಎಂದು ಘೋಷಿಸಿತ್ತು. ವರದಿಗಳ ಪ್ರಕಾರ, ಈ ಸಂಘರ್ಷದ ಆರಂಭದಿಂದ ಈವರೆಗೆ ಇರಾನ್ ನೌಕಾಪಡೆಗೆ ಸೇರಿದ ಸುಮಾರು 100 ಹಡಗುಗಳನ್ನು ಅಮೆರಿಕಾ ನಾಶಪಡಿಸಿದೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ