ವೀಡಿಯೊ : ಎಲ್ಲರೂ ನೋಡನೋಡುತ್ತಿದ್ದಂತೆ ನದಿಗೆ ಬಿದ್ದು ಮುಳುಗಿದ ಬಸ್ ; 24 ಪ್ರಯಾಣಿಕರು ಸಾವು

ಢಾಕಾ: ಬಾಂಗ್ಲಾದೇಶದ ರಾಜಬರಿ ಜಿಲ್ಲೆಯಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 24 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪ್ರಯಾಣಿಕರಿದ್ದ ಬಸ್ಸೊಂದು ಫೆರ್ರಿ (ಸಾರಿಗೆ ದೋಣಿ) ಹತ್ತಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಪದ್ಮಾ ನದಿಗೆ ಬಿದ್ದು ಮುಳುಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಮಾರ್ಚ್ 25, ಬುಧವಾರ ಸಂಜೆ ಸುಮಾರು 5:15ರ ಸುಮಾರಿಗೆ ರಾಜಬರಿ ಜಿಲ್ಲೆಯ ದೌಲತ್‌ದಿಯಾ ಟರ್ಮಿನಲ್‌ನಲ್ಲಿ ಈ ಅಪಘಾತ ನಡೆದಿದೆ. ಸುಮಾರು 40 ರಿಂದ 50 ಪ್ರಯಾಣಿಕರನ್ನು ಹೊತ್ತಿದ್ದ ಈ ಬಸ್ ರಾಜಬರಿಯಿಂದ ಢಾಕಾಕ್ಕೆ ಪ್ರಯಾಣಿಸುತ್ತಿತ್ತು. ದೋಣಿಯ ಮೇಲೆ ಬಸ್ ಹತ್ತುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ:
ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ, ನೌಕಾಪಡೆ, ಪೊಲೀಸ್ ಮತ್ತು ಮುಳುಗುತಜ್ಞರ ತಂಡಗಳು ಜಂಟಿಯಾಗಿ ರಕ್ಷಣಾ ಕಾರ್ಯ ಆರಂಭಿಸಿದವು. ಸುಮಾರು ಆರು ಗಂಟೆಗಳ ಸತತ ಪ್ರಯತ್ನದ ನಂತರ, ‘ಹಮ್ಜಾ’ ಎಂಬ ರಕ್ಷಣಾ ಹಡಗಿನ ಕ್ರೇನ್ ಬಳಸಿ ರಾತ್ರಿ 11:30ರ ಸುಮಾರಿಗೆ ಮುಳುಗಿದ್ದ ಬಸ್ಸನ್ನು ನದಿಯಿಂದ ಹೊರತೆಗೆಯಲಾಯಿತು.
ಪೊಲೀಸ್ ಇನ್ಸ್‌ಪೆಕ್ಟರ್ ರಸೆಲ್ ಮೊಲ್ಲಾ ಮಾತನಾಡಿ, “ಇದುವರೆಗೆ 23 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕತ್ತಲೆಯ ಕಾರಣದಿಂದಾಗಿ ಸದ್ಯಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಗುರುವಾರ ಬೆಳಿಗ್ಗೆ ಮತ್ತೆ ಮುಂದುವರಿಸಲಾಗುವುದು,” ಎಂದು ತಿಳಿಸಿದ್ದಾರೆ. ಸುಮಾರು 11 ಪ್ರಯಾಣಿಕರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಕಣ್ಣೀರಿನ ಕಡಲಾದ ಪದ್ಮಾ ನದಿ ತೀರ:
ಅಪಘಾತಕ್ಕೀಡಾದವರಲ್ಲಿ ಅನೇಕರು ಒಂದೇ ಕುಟುಂಬದ ಸದಸ್ಯರಾಗಿದ್ದಾರೆ. ಬಸ್‌ನಿಂದ ಹೊರಗೆ ನಿಂತಿದ್ದ ಕೆಲವರು ನೋಡನೋಡುತ್ತಿದ್ದಂತೆಯೇ ಬಸ್‌ ಮುಂದಕ್ಕೆ ಚಲಿಸಿ ನದಿಗೆ ಬಿದ್ದಿದೆ. ಅವರ ಕಣ್ಣೆದುರೇ ಬಸ್‌ನ ಒಳಗಿದ್ದ ಸಂಬಂಧಿಕರು ನದಿಯಲ್ಲಿ ಮುಳುಗಿದ್ದಾರೆ. ಮೃತರ ಮತ್ತು ನಾಪತ್ತೆಯಾದವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವೈರಲ್‌ ಆಗಿರುವ ವೀಡಿಯೊದಲ್ಲಿ ಬಸ್‌ ನದಿಗೆ ಬೀಳುತ್ತಿರುವ ದೃಶ್ಯ ಸೆರೆಯಾಗಿದೆ. ಬಸ್‌ ನದಿಗೆ ಬೀಳುತ್ತಿರುವಾಗ ನೋಡುತ್ತಿದ್ದವರು ಹಾಗೂ ಬಸ್‌ ಒಳಗಿದ್ದವರು ಕೂಗುವುದು ಕೇಳುತ್ತದೆ.
ತನಿಖೆಗೆ ಪ್ರಧಾನಿ ಆದೇಶ:
ಘಟನೆಯ ಬಗ್ಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ತಾರಿಕ್ ರೆಹಮಾನ್, ರಾಜ್‌ಬರಿ ಜಿಲ್ಲಾಡಳಿತಕ್ಕೆ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement