ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ, ಇರಾನ್ ತನ್ನ ಕ್ಷಿಪಣಿ ದಾಳಿಯ ನಡುವೆ ಭಾರತ ಸೇರಿದಂತೆ ಕೆಲವು ದೇಶಗಳಿಗೆ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದೆ. ಇಸ್ರೇಲ್ ಗುರಿಯಾಗಿಸಿ ಉಡಾವಣೆ ಮಾಡಿದ ಕ್ಷಿಪಣಿಗಳ ಮೇಲೆ “ಭಾರತದ ಜನತೆಗೆ ಧನ್ಯವಾದಗಳು” ಎಂದು ಬರೆಯುವ ಮೂಲಕ ಇರಾನ್ ತನ್ನ ಬೆಂಬಲಕ್ಕೆ ನಿಂತ ದೇಶಗಳನ್ನು ಸ್ಮರಿಸಿದೆ.
ಫೆಬ್ರವರಿ 28 ರಿಂದ ಆರಂಭವಾದ ಅಮೆರಿಕ ಮತ್ತು ಇಸ್ರೇಲ್ನ ಬಾಂಬ್ ದಾಳಿಗೆ ಪ್ರತಿಯಾಗಿ ಇರಾನ್ ನಡೆಸುತ್ತಿರುವ ‘ಆಪರೇಷನ್ ಟ್ರೂ ಪ್ರಾಮಿಸ್ 4’ (Operation True Promise 4) ಕಾರ್ಯಾಚರಣೆಯ ವೇಳೆ ಈ ಘಟನೆ ನಡೆದಿದೆ. ಮುಂಬೈನಲ್ಲಿರುವ ಇರಾನ್ ರಾಯಭಾರ ಕಚೇರಿಯು ಹಂಚಿಕೊಂಡಿರುವ ದೃಶ್ಯಗಳಲ್ಲಿ, ಇರಾನ್ ಮಿಲಿಟರಿ ಸಿಬ್ಬಂದಿ ನೀಲಿ ಮಾರ್ಕರ್ ಬಳಸಿ ಕ್ಷಿಪಣಿಗಳ ಮೇಲೆ ಧನ್ಯವಾದದ ಸಂದೇಶಗಳನ್ನು ಬರೆಯುತ್ತಿರುವುದು ಕಂಡುಬಂದಿದೆ.
ಒಂದು ಕ್ಷಿಪಣಿಯ ಮೇಲೆ “ಭಾರತದ ಜನತೆಗೆ ಧನ್ಯವಾದಗಳು” (Thank you, people of India) ಎಂದು ಬರೆಯಲಾಗಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತದ ಜೊತೆಗೆ ಪಾಕಿಸ್ತಾನ, ಸ್ಪೇನ್ ಮತ್ತು ಜರ್ಮನಿಯ ಜನರಿಗೂ ಇರಾನ್ನ ಏರೋಸ್ಪೇಸ್ ಫೋರ್ಸ್ ಕೃತಜ್ಞತೆ ಸಲ್ಲಿಸಿದೆ.
ಸಮುದ್ರ ಮಾರ್ಗ ಬಂದ್: ಭಾರತಕ್ಕೆ ಅವಕಾಶ
ಇದೇ ವೇಳೆ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸಮುದ್ರ ಸಂಚಾರದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದೆ. ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಯಾವುದೇ ಹಡಗುಗಳು ತನ್ನ ವ್ಯಾಪ್ತಿಯ ಸಮುದ್ರ ಮಾರ್ಗಗಳಲ್ಲಿ ಸಂಚರಿಸುವಂತಿಲ್ಲ ಎಂದು ಇರಾನ್ ಹೇಳಿದೆ.
ಆದರೆ, ವಿಶ್ವದ ಅತ್ಯಂತ ಪ್ರಮುಖ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ (Strait of Hormuz) ಯನ್ನು ಇರಾನ್ ಬಹುತೇಕ ಮುಚ್ಚಿದ್ದರೂ, ಭಾರತದ ಹಡಗುಗಳಿಗೆ ಅಲ್ಲಿ ಸಂಚರಿಸಲು ಅವಕಾಶ ಸಿಕ್ಕಿದೆ. ಭಾರತದ ಧ್ವಜವಿರುವ ನಾಲ್ಕು ಹಡಗುಗಳು ಈ ಮಾರ್ಗದ ಮೂಲಕ ಯಶಸ್ವಿಯಾಗಿ ಸಾಗಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ದೃಢಪಡಿಸಿದೆ. ಇದು ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ರಾಜತಾಂತ್ರಿಕ ಪ್ರಭಾವವನ್ನು ಎತ್ತಿ ತೋರಿಸಿದೆ.
ಮಾನವೀಯ ನೆರವಿಗೆ ಮುಂದಾದ ಕಾಶ್ಮೀರ ಜನತೆ
ಇರಾನ್ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಭಾರತದ ಜನರು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ನಾಗರಿಕರು ದೊಡ್ಡ ಮಟ್ಟದ ಮಾನವೀಯ ನೆರವು ನೀಡುತ್ತಿದ್ದಾರೆ. ಕಳೆದ ಕೆಲವು ವಾರಗಳಿಂದ ಕಾಶ್ಮೀರದ ವಿವಿಧ ಭಾಗಗಳಲ್ಲಿ ದೇಣಿಗೆ ಸಂಗ್ರಹ ಅಭಿಯಾನಗಳು ನಡೆಯುತ್ತಿವೆ. ಯುದ್ಧ ಸಂತ್ರಸ್ತರಿಗಾಗಿ ಜನರು ನಗದು, ಚಿನ್ನಾಭರಣ ಮತ್ತು ಗೃಹೋಪಯೋಗಿ ವಸ್ತುಗಳನ್ನು ಸ್ವಯಂಪ್ರೇರಿತರಾಗಿ ನೀಡುತ್ತಿದ್ದಾರೆ. ಅನೇಕರು ತಮ್ಮ ವೈಯಕ್ತಿಕ ಉಳಿತಾಯವನ್ನು ಇರಾನ್ನ ಜನರ ನೆರವಿಗಾಗಿ ನೀಡುತ್ತಿರುವುದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ