ಮೈ ಜುಂ ಎನ್ನುವ ವೀಡಿಯೊ | ಆಗಸದಲ್ಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನ-ಸೇನಾ ಹೆಲಿಕಾಪ್ಟರ್ ಡಿಕ್ಕಿಯ ಭೀಕರ ದೃಶ್ಯ ವೈರಲ್‌

ವಾಷಿಂಗ್ಟನ್: ಕಳೆದ ವರ್ಷ ಅಮೆರಿಕದ ವಾಷಿಂಗ್ಟನ್‌ನ ರೋನಾಲ್ಡ್ ರೇಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ ವಿಮಾನ ಅಪಘಾತದ ಮೈಮನ ಜುಂ ಎನಿಸುವ ದೃಶ್ಯಗಳು ಈಗ ಬಿಡುಗಡೆಯಾಗಿವೆ. ಅಮೆರಿಕನ್ ಏರ್‌ಲೈನ್ಸ್‌ನ ಪ್ರಯಾಣಿಕರ ವಿಮಾನ ಮತ್ತು ಅಮೆರಿಕ ಭೂಸೇನೆಯ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡು ಆಕಾಶದಲ್ಲೇ ಪರಸ್ಪರ ಡಿಕ್ಕಿ ಹೊಡೆದ ಕ್ಷಣದ ವಿಡಿಯೋ ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ.
’60 ಮಿನಿಟ್ಸ್’ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ವೇಗವಾಗಿ ಬಂದ ವಿಮಾನಗಳು ಗಾಳಿಯಲ್ಲೇ ಪರಸ್ಪರ ಡಿಕ್ಕಿ ಹೊಡೆದುಕೊಂಡ ನಂತರ, ಬೆಂಕಿಯ ಉಂಡೆಗಳು ಏಳುವ ದೃಶ್ಯ ಹಾಗೂ ವಿಮಾನದ ಅವಶೇಷಗಳು ಪೊಟೊಮ್ಯಾಕ್ ನದಿಗೆ ಬೀಳುವ ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗಿವೆ.

2025ರ ಜನವರಿ 29ರಂದು ನಡೆದ ಈ ಕರಾಳ ಘಟನೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 64 ಮಂದಿ ಹಾಗೂ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು 67 ಮಂದಿ ದುರ್ಮರಣಕ್ಕೀಡಾಗಿದ್ದರು. ಇದು 2001ರ ನಂತರ ಅಮೆರಿಕ ಕಂಡ ಅತಿದೊಡ್ಡ ವಾಯುಯಾನ ದುರಂತಗಳಲ್ಲಿ ಒಂದಾಗಿದೆ.
ಕನ್ಸಾಸ್‌ನ ವಿಚಿತಾದಿಂದ ಹೊರಟಿದ್ದ ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್ 5342 ವಿಮಾನ ನಿಲ್ದಾಣಕ್ಕೆ ಇಳಿಯಲು ಸಿದ್ಧವಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅದೇ ಸಮಯದಲ್ಲಿ ನಿರ್ಬಂಧಿತ ವಾಯುಪ್ರದೇಶದಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದ ಸೇನಾ ಹೆಲಿಕಾಪ್ಟರ್ ಇದರ ಪಥಕ್ಕೆ ಅಡ್ಡ ಬಂದಿರುವುದು ಅಪಘಾತಕ್ಕೆ ಮೂಲ ಕಾರಣ ಎಂದು ಹೇಳಲಾಗಿದೆ.

ದಟ್ಟಣೆ ಇರುವ ವಾಯುಪ್ರದೇಶದಲ್ಲಿ ನಾಗರಿಕ ಮತ್ತು ಮಿಲಿಟರಿ ವಿಮಾನಗಳ ನಡುವೆ ಸಮನ್ವಯದ ಕೊರತೆ ಇರುವುದನ್ನು ಈ ಘಟನೆ ಎತ್ತಿ ತೋರಿಸಿದೆ.
ಈ ದುರಂತದ ನಂತರ ಎಚ್ಚೆತ್ತುಕೊಂಡಿರುವ ಅಮೆರಿಕ ಸರ್ಕಾರ, ವಾಯು ಸಂಚಾರ ನಿಯಂತ್ರಣ (ATC) ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಧುನೀಕರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸುಮಾರು 12 ಬಿಲಿಯನ್ ಡಾಲರ್ ಅನುದಾನವನ್ನು ಮೀಸಲಿಟ್ಟಿರುವುದಾಗಿ ಸಾರಿಗೆ ಕಾರ್ಯದರ್ಶಿ ಶಾನ್ ಡಫಿ ತಿಳಿಸಿದ್ದಾರೆ. ಇತ್ತೀಚಿನ ವಿಡಿಯೋ ಪುರಾವೆಯು ನಡೆಯುತ್ತಿರುವ ತನಿಖೆಗೆ ಮಹತ್ವದ ತಿರುವು ನೀಡುವ ನಿರೀಕ್ಷೆಯಿದ್ದು, ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಯಲು ಸುರಕ್ಷತಾ ಸುಧಾರಣೆಗಳನ್ನು ತರುವುದಾಗಿ ಎಫ್‌ಎಎ (FAA) ಆಡಳಿತಾಧಿಕಾರಿ ಬ್ರಿಯಾನ್ ಬೆಡ್‌ಫೋರ್ಡ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement